ಬಿಜೆಪಿ ಭಿನ್ನಮತ: ಅತೃಪ್ತ ಭಾನುಪ್ರಕಾಶ್‌ ಸೇರಿ ನಾಲ್ವರ ವಜಾ

Published : Apr 29, 2017, 08:06 PM ISTUpdated : Apr 11, 2018, 01:09 PM IST
ಬಿಜೆಪಿ ಭಿನ್ನಮತ: ಅತೃಪ್ತ ಭಾನುಪ್ರಕಾಶ್‌ ಸೇರಿ ನಾಲ್ವರ ವಜಾ

ಸಾರಾಂಶ

ಬಿಜೆಪಿಯಲ್ಲಿ ರಾತೋರಾತ್ರಿ ದಿಢೀರ್ ಬೆಳವಣಿಗೆ ಉಪಾದ್ಯಕ್ಷ ನಿರ್ಮಲ್ ಕುಮಾರ್ ಕೂಡಾ ಪದಚ್ಯುತಿ ಗೋ.ಮಧುಸೂದನ್, ರೇಣುಕಾಚಾರ್ಯಗೂ ಹುದ್ದೆ ಖೋತಾ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ವಿರುದ್ಧ ತಿರುಗಿಬಿದ್ದಿರುವ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಮತ್ತಿತರ ಅತೃಪ್ತರ ನಡುವಣ ತಿಕ್ಕಾಟ ನಿಗಿ ನಿಗಿ ಕೆಂಡವಾಗಿರುವಾಗಲೇ ರಾಜ್ಯ ಬಿಜೆಪಿಯಲ್ಲಿ ಶನಿವಾರ ರಾತ್ರಿ ದಿಢೀರ್‌ ಬೆಳವಣಿಗೆಗಳಾಗಿವೆ. ಭಿನ್ನಮತದ ಸಂಪೂರ್ಣ ಚಿತ್ರಣ ಪಡೆಯಲು ಬೆಂಗಳೂರಿಗೆ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳೀಧರ ರಾವ್‌ ಹಾಗೂ ಯಡಿಯೂರಪ್ಪ ಭೇಟಿ ಬೆನ್ನಲ್ಲೇ ಪಕ್ಷದ ನಾಲ್ಕು ಪದಾಧಿಕಾರಿಗಳ ತಲೆದಂಡವಾಗಿದೆ.

ಇತ್ತೀಚೆಗೆ ನಡೆದ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಭಾನುಪ್ರಕಾಶ್‌, ನಿರ್ಮಲ ಕುಮಾರ್‌ ಸುರಾಣ, ರೈತ ಮೋರ್ಚಾ ಉಪಾಧ್ಯಕ್ಷ ರೇಣುಕಾಚಾರ್ಯ ಹಾಗೂ ರಾಜ್ಯ ವಕ್ತಾರ ಗೋ.ಮಧುಸೂದನ್‌ ಅವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಅತೃಪ್ತರ ಬಣದಲ್ಲಿದ್ದ ಭಾನುಪ್ರಕಾಶ್‌ ಹಾಗೂ ಸುರಾಣ ಅವರನ್ನು ಶಿಸ್ತು ಉಲ್ಲಂಘನೆಯ ಕಾರಣಕ್ಕೆ ಕಿತ್ತೊಗೆಯಲಾಗಿದ್ದರೆ, ಪಕ್ಷದ ಬೆಳವಣಿಗೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಿ ಶಿಸ್ತು ಪಾಲಿಸದ ಕಾರಣಕ್ಕಾಗಿ ಮಧುಸೂದನ್‌ ಹಾಗೂ ರೇಣುಕಾಚಾರ್ಯ ಅವರುಗಳನ್ನು ಪದಚ್ಯುತಿಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಮುರಳೀಧರ ರಾವ್‌ ಭೇಟಿ ಆಗದ ಈಶ್ವರಪ್ಪ:

ಬಿಜೆಪಿಯಲ್ಲಿ ಬಂಡಾಯದ ಕಹಳೆ ಊದಿರುವ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಅವರು ಅಭಿಪ್ರಾಯ ಸಂಗ್ರಹಿ ಸಲು ಆಗಮಿಸಿರುವ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರನ್ನು ಭೇಟಿ ಮಾಡುವ ಸಾಧ್ಯತೆ ಕಡಿಮೆ. ಶನಿವಾರ ಸಂಜೆ ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿದ ಈಶ್ವರಪ್ಪ ಅವರು ನಗರದಲ್ಲೇ ಇದ್ದರೂ ಬಿಜೆಪಿ ಕಚೇರಿಯತ್ತ ತೆರಳಲಿಲ್ಲ.

ಭಾನುವಾರವೂ ಮುರಳೀಧರರಾವ್‌ ಅವರು ಪಕ್ಷದ ಮುಖಂಡರಿಂದ ಅಭಿಪ್ರಾಯ ಸಂಗ್ರಹ ಮುಂದುವರೆಸಿದರೂ ಈಶ್ವರಪ್ಪ ಅವರು ಭೇಟಿ ಮಾಡದೆ ಬೆಳಗ್ಗೆ ತುಮಕೂರಿಗೆ ತೆರಳಿ ಅಲ್ಲಿಂದ ಮಧ್ಯಾಹ್ನ ಶಿವಮೊಗ್ಗಕ್ಕೆ ತೆರಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಶನಿವಾರ ರಾತ್ರಿ ಪಕ್ಷದ ಕಚೇರಿಗೆ ಆಗಮಿಸಿ ಮುರಳೀಧರರಾವ್‌ ಅವರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದರು. ಭಾನುವಾರ ಮತ್ತು ಸೋಮವಾರ ಶಿವಮೊಗ್ಗ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರೀತಿಸಿ ಮದುವೆಯಾದ ಮಗಳ ರಕ್ತದಲ್ಲಿ ಕೈ ತೊಳೆದ ತಂದೆ; ಹುಬ್ಬಳ್ಳಿಯಲ್ಲಿ ಮರ್ಯಾದ ಹ*ತ್ಯೆ
ಹೂವಿನಹಡಗಲಿ: ಕೇಳಿದ್ದು 237 ಕೊಠಡಿ, ಸರ್ಕಾರ ಕೊಟ್ಟಿದ್ದು ಒಂದೇ ಕೊಠಡಿ! ಮಕ್ಕಳ ಶಿಕ್ಷಣಕ್ಕೆ ಇಲ್ವಾ ಬೆಲೆ?