
ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ನಿಧನದ ಬಳಿಕ, ಅವರು ಸುಮಾರು 25 ವರ್ಷಗಳಿಂದ ವಾಸಿಸಿದ್ದ ಪೋಯೆಸ್ ಗಾರ್ಡನ್ ಮತ್ತು ಇತರ ಆಸ್ತಿಗಳು ಯಾರ ಪಾಲಾಗಲಿದೆ ಎಂಬ ಗೊಂದಲ ಇನ್ನೂ ಮುಂದುವರಿದಿದೆ. ಕೆಲ ಮಾಧ್ಯಮಗಳು ಉಯಿಲು ಇದೆ ಎಂದಿದ್ದರೆ, ಇನ್ನೂ ಕೆಲವು ಇಲ್ಲವೆಂದೇ ಹೇಳುತ್ತಿವೆ. ಆದರೆ ಅಮ್ಮಾ ಯಾವುದೇ ವಿಲ್ ಬರೆದಿಟ್ಟಿರುವ ಬಗ್ಗೆ ಈವರೆಗೆ ಮಾಹಿತಿಯಿಲ್ಲ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಸುಮಾರು ರೂ. 90 ಕೋಟಿ ಮೌಲ್ಯದ ಪೋಯೆಸ್ ಗಾರ್ಡನ್‌ನಲ್ಲಿರುವ ‘ವೇದ ನಿಲಯಂ' ಬಂಗ್ಲೆ ಮೇಲಿನ ಹಕ್ಕನ್ನು ಯಾರು ಪ್ರತಿಪಾದಿಸಲಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. ಜಯಾರ ಬಹುಕಾಲದ ಆಪ್ತೆ ಶಶಿಕಲಾ ನಟರಾಜನ್ ಪ್ರತಿಪಾದಿಸಲಿದ್ದಾರೆಯೇ ಅಥವಾ ಅಮ್ಮಾರ ಸೋದರ ಸಂಬಂಧಿ ದೀಪಾ ಮತ್ತು ಅವರ ಸಹೋದರ ದೀಪಕ್ ಈ ಹಕ್ಕು ಪ್ರತಿಪಾದಿಸಲಿದ್ದಾರೆಯೇ ಎಂಬ ಸಂದೇಹವಿದೆ. ಅಲ್ಲದೆ, ಚೆನ್ನೈನ ರಾಮಪುರಂನಲ್ಲಿದ್ದ ಜಯಾರ ಮಾರ್ಗದರ್ಶಕ ಎಂಜಿ ರಾಮಚಂದ್ರನ್’ರ ಮನೆ ವಿಷಯದಲ್ಲಿ, ದಶಕಗಳ ಹಿಂದೆ ಅವರ ನಿಧನದ ಬಳಿಕ ಸಂಭವಿಸಿದ್ದ ವಿವಾದದ ಮಾದರಿಯಲ್ಲೇ ಇತಿಹಾಸ ಮರುಕಳಿಸಲಿದೆಯೇ ಎಂಬ ಸಂಶಯವೂ ಕಾಡಿದೆ.
ಜಯಾ ಅಂತ್ಯ ಸಂಸ್ಕಾರದ ಬಳಿಕ ಶಶಿಕಲಾ ಪೋಯೆಸ್ ಗಾರ್ಡನ್‌ಗೇ ತೆರಳಿದ್ದಾರೆ. ಎಂಜಿಆರ್ ಉಯಿಲು ಬರೆದಿಟ್ಟು, ತಮ್ಮ ಆಸ್ತಿಯನ್ನು ಹೇಗೆ ನಿರ್ವಹಿಸಬೇಕೆಂದು ನಿರ್ದೇಶಿಸಿದ್ದರು. ಆದರೂ ಅವರ ಆಸ್ತಿ ಕಾನೂನು ವಿವಾದಕ್ಕೆ ಸಿಲುಕಿತ್ತು. ಎರಡು ದಶಕಗಳ ಕಾನೂನು ಹೋರಾಟದ ಬಳಿಕ, ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಎಂಜಿಆರ್ ಆಸ್ತಿಗಳ ನಿರ್ವಾಹಕರಾಗಿ ನಿವೃತ್ತ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಿತ್ತು. 1967ರಲ್ಲಿ ಜಯಾ ಮತ್ತು ಅವರ ತಾಯಿ ಸಂಧ್ಯಾ ಪೋಯೆಸ್ ಗಾರ್ಡನ್’ನ್ನು ರೂ. 1.32 ಲಕ್ಷಕ್ಕೆ ಖರೀದಿಸಿದ್ದರು. ಪೋಯೆಸ್ ಗಾರ್ಡನ್ ಖರೀದಿದಾರರಲ್ಲಿ ತಮ್ಮ ಅಜ್ಜಿಯೂ ಇರುವುದರಿಂದ, ಜಯಾರ ಸೋದರ ಸಂಬಂಧಿಗಳು ಬಯಸಿದಲ್ಲಿ, ಈ ಆಸ್ತಿಯಲ್ಲಿ ಹಕ್ಕು ಪ್ರತಿಪಾದಿಸಬಹುದು ಎಂದು ಕಾನೂನು ತಜ್ಞರು ಹೇಳುತ್ತಾರೆ.
ಪನ್ನೀರ್’ಸೆಲ್ವಂ-ಶಶಿಕಲಾ ಭೇಟಿ: ಪೋಯೆಸ್ ಗಾರ್ಡನ್’ಗೆ ಗುರುವಾರ ಭೇಟಿ ನೀಡಿದ ಸಿಎಂ ಪನ್ನೀರ್ ಸೆಲ್ವಂ, ಶಶಿಕಲಾ ಜೊತೆ ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮಾತುಕತೆಯ ಬಳಿಕ ಹೊರಗಿನಿಂದ ಕಾಯುತ್ತಿದ್ದ ಮಾಧ್ಯಮಗಳ ಜೊತೆ ಪನ್ನೀರ್‌ಸೆಲ್ವಂ ಮಾತನಾಡಲಿಲ್ಲ. ಕ್ಯಾಬಿನೆಟ್ ಸಚಿವರಾದ ಸಿ ಶ್ರೀನಿವಾಸನ್ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ, ಪಿ ತಂಗಮಣಿ ಮುಂತಾದವರು ಸಿಎಂ ಜೊತೆ ಇದ್ದರು. ಎಐಎಡಿಎಂಕೆಯಲ್ಲಿ ಶಶಿಕಲಾಗೆ ಪ್ರಮುಖ ಸ್ಥಾನ ನೀಡುವ ಸಾಧ್ಯತೆಗಳಿವೆ ಎಂಬ ವದಂತಿಗಳು ಹಬ್ಬಿವೆ.
(epaper.kannadaprabha.in)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.