ಸಿದ್ಧಾರ್ಥ ಶವದ ಮೇಲಿನ ಟೀ ಶರ್ಟ್‌ ತೆಗೆದಿದ್ದು ಯಾರು?

By Kannadaprabha News  |  First Published Aug 1, 2019, 9:24 AM IST

ಕೆಫೆ ಕಾಫೀ ಡೇ ಮಾಲೀಕ ಸಿದ್ಧಾರ್ಥರ ಮೃತದೇಹ ಪತ್ತೆಯಾದ ಸಂದರ್ಭ ಮೃತದೇಹದ ಮೇಲೆ ಟೀ ಶರ್ಟ್‌ ಹಾಗೂ ಬನಿಯನ್‌ ಇರಲಿಲ್ಲ. ಇದು ಈಗ ಅನೇಕ ಅನುಮಾನಕ್ಕೆ ಕಾರಣವಾಗಿದೆ. ಸಿದ್ಧಾರ್ಥ ಟೀ ಶರ್ಟ್‌ ಮತ್ತು ಬನಿಯನ್‌ ತೆಗೆದು ನದಿಗೆ ಹಾರಿದರೇ ಎನ್ನುವ ತರ್ಕವೂ ಕೇಳಿ ಬಂದಿದೆ.


ಮಂಗಳೂರು(ಆ.01): ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರು ನಿಗೂಢ ರೀತಿಯಲ್ಲಿ ಕಣ್ಮರೆಯಾಗಿರುವುದು ಶವ ಪತ್ತೆಯಾಗಿರುವುದರೊಂದಿಗೆ ಬಗೆಹರಿದಿದೆ. ಆದರೆ ಸಿದ್ಧಾರ್ಥ ಅವರ ಶವ ಪತ್ತೆಯಾದ ರೀತಿ ಮಾತ್ರ ಅನೇಕ ಅನುಮಾನಗಳನ್ನು ದಾರಿಮಾಡಿಕೊಟ್ಟಿದೆ. ಸಿದ್ಧಾರ್ಥ ಅವರು ನಿಜವಾಗಿ ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಯಾರೋ ಕೊಲೆ ಮಾಡಿ ಬಿಸಾಡಿದರೇ ಎಂಬ ಸಂಶಯದ ಪ್ರಶ್ನೆಗಳು ಪತ್ತೆಯಾದ ಶವ ಹುಟ್ಟುಹಾಕಿದೆ.

ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದೇನು?

Latest Videos

‘ಸಿದ್ಧಾರ್ಥ ಅವರು ಕಪ್ಪು ಬಣ್ಣದ ಟೀ ಶರ್ಟ್‌, ಅದೇ ಬಣ್ಣದ ಜೀನ್ಸ್‌ ಪ್ಯಾಂಟ್‌ ಹಾಗೂ ಕಪ್ಪು ಬೂಟ್‌ನ್ನು ಹಾಕಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಾ ಉಳ್ಳಾಲದ ನೇತ್ರಾವತಿ ಸೇತುವೆ ಮೇಲೆ ನಡೆದುಕೊಂಡು ಹೋಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಅವರು ಬರದಿದ್ದಾಗ ಮೊಬೈಲ್‌ಗೆ ಕರೆ ಮಾಡಿದೆ. ಆಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು’ ಹೀಗೆಂದು ಸಿದ್ಧಾರ್ಥರ ಚಾಲಕ ಕಂಕನಾಡಿ ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಟೀಶರ್ಟ್ ತೆಗೆದು ನದಿಗೆ ಹಾರಿದರೇ?

undefined

ಸಿದ್ಧಾರ್ಥರ ಮೃತದೇಹ ಪತ್ತೆಯಾದ ಸಂದರ್ಭ ಅದರ ಮೇಲೆ ಟೀ ಶರ್ಟ್‌ ಹಾಗೂ ಬನಿಯನ್‌ ಇರಲಿಲ್ಲ. ಇದು ಈಗ ಅನೇಕ ಅನುಮಾನಕ್ಕೆ ಕಾರಣವಾಗಿದೆ. ಟೀ ಶರ್ಟ್‌ ಮತ್ತು ಬನಿಯನ್‌ ತೆಗೆದು ನದಿಗೆ ಹಾರಿದರೇ ಎನ್ನುವ ತರ್ಕವೂ ಇದೆ. ಇದು ನಿಜವಾದರೆ ಟೀ ಶರ್ಟ್‌ ಮತ್ತು ಬನಿಯನ್‌ ನದಿಯಲ್ಲಿ ಎಲ್ಲಿಯಾದರೂ ಸಿಗಲೇ ಬೇಕು. ಸಿದ್ಧಾರ್ಥರ ಶವ ನದಿ ಮತ್ತು ಸಮುದ್ರ ಸೇರುವುದಕ್ಕೂ ಮೊದಲು ಹಿನ್ನೀರಿನಲ್ಲಿ ಸಿಕ್ಕಿರುವುದರಿಂದ ಇಲ್ಲಿ ಶಾರ್ಕ್ ಅಥವಾ ದೊಡ್ಡ ಮಟ್ಟದ ಜಲಚರಗಳು ಮೇಲಂಗಿಯನ್ನು ತಿಂದುಬಿಡುವ ಪ್ರಮೇಯ ಇಲ್ಲ. ತನ್ನಿಂತಾನೇ ಕಳಚಿಕೊಳ್ಳುವ ಸಂಭವವೂ ಇಲ್ಲ. ಹಾಗಿದ್ದರೆ ಆತ್ಮಹತ್ಯೆ ಮಾಡಲು ಹೊರಟಾಗ ಇವೆರಡು ಉಡುಪನ್ನು ತೆಗೆದಿರಿಸಿ ನದಿಗೆ ಹಾರಿದರೇ? ಒಂದು ವೇಳೆ ಸಿಕ್ಕಿದರೂ ಶರೀರದಿಂದ ಮೇಲುಡುಪನ್ನು ಇವರೇ ಅಥವಾ ಯಾರು ತೆಗೆದಿರಿಸಿದರು ಎಂಬ ಪ್ರಶ್ನೆಯೂ ನಾಗರಿಕರ ಮನದಲ್ಲಿ ಸುಳಿದಾಡುತ್ತಿದೆ.

ಅಷ್ಟಕ್ಕೂ ಕಾರು ಚಾಲಕ ದೂರಿನಲ್ಲಿ ಹೇಳುವ ಪ್ರಕಾರ, ಸಿದ್ಧಾರ್ಥ ಅವರು ಕಾರಿನಲ್ಲಿ ನೇತ್ರಾವತಿ ಸೇತುವೆ ಕಡೆಗೆ ಆಗಮಿಸಿದ್ದು ಸೋಮವಾರ ರಾತ್ರಿ 7 ಗಂಟೆ ಬಳಿಕ. ಆ ಹೊತ್ತಿಗೆ ಸುಮಾರು 8 ಗಂಟೆ ವರೆಗೆ ಆ ಮಾರ್ಗದಲ್ಲಿ ವಾಹನ ದಟ್ಟಣೆ ಇರುತ್ತದೆ. ಇಂತಹ ಸಮಯದಲ್ಲಿ ಟೀ ಶರ್ಟ್‌ ಮತ್ತು ಬನಿಯನ್‌ ತೆಗೆದು ನದಿಗೆ ಹಾರುವುದನ್ನು ಅಲ್ಲಿ ವಾಹನದಲ್ಲಿ ಸಂಚರಿಸುವವರು ನೋಡಿಕೊಂಡು ಸುಮ್ಮನಿದ್ದರೇ? ಯಾರೂ ರಕ್ಷಿಸಲು ಬರಲಿಲ್ಲವೇ? ಅಲ್ಲಿ ಪಾದಚಾರಿಗಳೂ ಸಂಚರಿಸುವುದರಿಂದ ಇದಾವುದೂ ಯಾರ ಕಣ್ಣಿಗೂ ಕಾಣಿಸಲಿಲ್ಲವೇ ಎಂಬ ಪ್ರಶ್ನೆ ಪೊಲೀಸರನ್ನೂ ಕಾಡುತ್ತಿದೆ.

ಹಣೆಯಲ್ಲಿ ಗಾಯ: ಸಿದ್ಧಾರ್ಥರ ಹಣೆಯಲ್ಲಿ ಗಾಯ ಕಂಡುಬಂದಿದ್ದು, ಯಾರಾದರೂ ಕೊಲೆ ಮಾಡಿ ಬಿಸಾಡಿದರೇ ಎಂಬ ಸಂಶಯವೂ ಪೊಲೀಸರನ್ನು ಕಾಡತೊಡಗಿದೆ. ಶವ ಅಷ್ಟಾಗಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿಲ್ಲ. ಶವ ನೀರು ತುಂಬಿ ಊದಿಕೊಂಡೂ ಇಲ್ಲ. ಆತ್ಮಹತ್ಯೆ ಮಾಡಿಕೊಂಡರೆ, ಶರೀರ ಸಂಕುಚಿತಗೊಂಡಾಗ ಕಾಲಿಗೆ ಧರಿಸಿದ ಶೂ ತನ್ನಿಂತಾನೇ ಕಳಚಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಕಾಲಿನಲ್ಲಿ ಶೂ ಕೂಡ ಹಾಗೆಯೇ ಉಳಿದುಕೊಂಡಿದೆ.

ಅಷ್ಟುಹೊತ್ತು ಎಲ್ಲಿದ್ದರು?:

ಸೋಮವಾರ ಬಿ.ಸಿ.ರೋಡ್‌ನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಆಗಮಿಸಿದ ಸಿದ್ಧಾರ್ಥ ಅವರ ಇನ್ನೋವಾ ಕಾರು ಸಂಜೆ 5.28ಕ್ಕೆ ಬ್ರಹ್ಮರಕೂಟ್ಲು ಟೋಲ್‌ಗೇಟ್‌ ಹಾದುಹೋಗಿದೆ. ಅಲ್ಲಿಂದ ಮಂಗಳೂರಿಗೆ ಬರಲು ಅರ್ಧ ತಾಸು ಸಾಕು. ಅಂದರೆ ಸಂಜೆ 6 ಗಂಟೆಗೆ ಪಂಪ್‌ವೆಲ್‌ ತಲುಪಿರುತ್ತಾರೆ. ನೇತ್ರಾವತಿ ಸೇತುವೆ ಬಳಿಗೆ ಬಂದಿದ್ದು ರಾತ್ರಿ 7 ಗಂಟೆ ಬಳಿಕ. ಹಾಗಾದರೆ ಈ ಮಧ್ಯೆ ಇವರು ಎಲ್ಲಿ ಇದ್ದರು ಎಂಬ ಬಗ್ಗೆಯೂ ಪೊಲೀಸ್‌ ತನಿಖೆ ನಡೆಯುತ್ತಿದೆ.

ಕುಟುಂಬಸ್ಥರ ಗೈರು

ಕಾಫಿ ಉದ್ಯಮದಲ್ಲಿ ಅಧಿಪತ್ಯ ಸ್ಥಾಪಿಸಿದ ಸಿದ್ಧಾರ್ಥ ಅವರು ನಾಪತ್ತೆಯಾದಲ್ಲಿಂದ ಪತ್ತೆಯಾಗುವಲ್ಲಿವರೆಗೆ ಅವರ ಕುಟುಂಬಸ್ಥರು ಯಾರೂ ಇಲ್ಲಿಗೆ ಆಗಮಿಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಕುಟುಂಬದ ಯಾರೇ ಸದಸ್ಯರು ಅಪಾಯದಲ್ಲಿ ಇರುವಾಗ ತಕ್ಷಣ ಆಗಮಿಸಿ ಸ್ಪಂದಿಸುವುದು ರೂಢಿಗತ ಕ್ರಮ. ಆದರೆ ಸಿದ್ಧಾರ್ಥ ಅವರ ವಿಚಾರದಲ್ಲಿ ಅವರ ಕುಟುಂಬಿಕರು ಇಲ್ಲಿಗೆ ಭೇಟಿ ನೀಡಿದ ಬಗ್ಗೆ ಮಾಹಿತಿ ಇಲ್ಲ.

‘ಇವರ ಕಿರುಕುಳದಿಂದಲೇ ಕಾಫಿ ಡೇ ಕಿಂಗ್ ಸಿದ್ಧಾರ್ಥ ಆತ್ಮಹತ್ಯೆ’

ಶವ ಚಿಕ್ಕಮಗಳೂರು ತಲುಪುವವರೆಗೂ ಕುಟುಂಬಸ್ಥರು ಬರಲಿಲ್ಲ:

ಸೋಮವಾರ ಸಿದ್ಧಾರ್ಥ ನಾಪತ್ತೆಯಾದಲ್ಲಿಂದ ತೊಡಗಿ ಬುಧವಾರ ಶವ ಪತ್ತೆಯಾಗಿ, ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗುವ ವರೆಗೂ ಅವರ ಕುಟುಂಬಸ್ಥರು ಯಾರೂ ಬಂದಿಲ್ಲ. ಇದು ಕೂಡ ಕುಟುಂಬದ ಜೊತೆಗೆ ಸಿದ್ಧಾರ್ಥಗೆ ಮನಸ್ಥಾಪ ಇತ್ತೇ ಎಂದು ಪ್ರಶ್ನಿಸುವಂತೆ ಮಾಡಿದೆ. ಇದೇ ಹಿನ್ನೆಲೆಯಲ್ಲಿ ಮಂಗಳೂರಿನ ಸಿಸಿಬಿ ಪೊಲೀಸ್‌ ತಂಡ ಸಿದ್ಧಾರ್ಥ ಅವರ ಬೆಂಗಳೂರು ಹಾಗೂ ಚಿಕ್ಕಮಗಳೂರಿನ ಮನೆಗೆ ತೆರಳಿದೆ. ಅಲ್ಲಿ ಕುಟುಂಬಸ್ಥರ ತನಿಖೆ ನಡೆಸಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!