28 ವರ್ಷಗಳಲ್ಲೇ ಮೊದಲ ಬಾರಿ ಹೈಕೋರ್ಟ್‌ ಜಡ್ಜ್‌ ವಿರುದ್ಧ ಕೇಸಿಗೆ CJI ಸಮ್ಮತಿ!

By Web DeskFirst Published Aug 1, 2019, 9:18 AM IST
Highlights

28 ವರ್ಷಗಳಲ್ಲೇ ಮೊದಲ ಬಾರಿ ಹೈ ಜಡ್ಜ್‌ ವಿರುದ್ಧ ಕೇಸಿಗೆ ಸಮ್ಮತಿ| ನ್ಯಾ. ಶುಕ್ಲಾ ವಿರುದ್ಧ ಪ್ರಕರಣಕ್ಕೆ ರಂಜನ್‌ ಗೊಗೋಯ್‌ ಸಮ್ಮತಿ

ನವದೆಹಲಿ[ಆ.01]: ಭ್ರಷ್ಟಾಚಾರ ಪ್ರಕರಣ ಸಂಬಂಧ ಅಲಹಾಬಾದ್‌ ಹೈಕೋರ್ಟ್‌ನ ನ್ಯಾ. ಎಸ್‌.ಎನ್‌. ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರು ಸಿಬಿಐಗೆ ಅನುಮತಿ ನೀಡಿದ್ದಾರೆ. ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರೊಬ್ಬರ ವಿರುದ್ಧ ಹೀಗೆ ಪ್ರಕರಣ ದಾಖಲಿಸಿಕೊಳ್ಳಲು ಸುಪ್ರೀಂಕೋರ್ಟ್‌ ಅನುಮತಿ ನೀಡಿದ್ದು 1991ರ ಬಳಿಕ ಇದೇ ಮೊದಲು.

ಅಲಹಾಬಾದ್‌ ಹೈಕೋರ್ಟ್‌ನ ನ್ಯಾ.ಎಸ್‌.ಎನ್‌.ಶುಕ್ಲಾ ವಿರುದ್ಧ, ಅವಧಿ ಮೀರಿದ್ದರೂ ಖಾಸಗಿ ಮೆಡಿಕಲ್‌ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮೂಲಕ ಭ್ರಷ್ಟಾಚಾರ ಎಸಗಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪ್ರಾಥಮಿಕ ಕೇಸು ದಾಖಲಿಸಿಕೊಂಡಿದ್ದ ಸಿಬಿಐ, ಬಳಿಕ ವಿಸ್ತೃತ ತನಿಖೆಗೆ ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಕೋರಿತ್ತು. ಅದಕ್ಕೆ ಪೂರಕವಾಗಿ ಜಡ್ಜ್‌ ಮೇಲೆ ಮೇಲ್ನೋಟಕ್ಕೆ ಆರೋಪ ಸಾಬೀತಾಗುವ ದಾಖಲೆಗಳನ್ನು ಸಿಜೆಐಗೆ ಸಲ್ಲಿಸಿತ್ತು ಈ ಅಂಶಗಳನ್ನು ಪರಿಶೀಲಿಸಿದ ನ್ಯಾ. ಗೊಗೋಯ್‌, ಕೇಸು ದಾಖಲಿಸಿಕೊಳ್ಳಲು ಸಿಬಿಐಗೆ ಅನುಮತಿ ನೀಡಿದ್ದಾರೆ.

1991ಕ್ಕೂ ಮೊದಲು ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ನ ಹಾಲಿ ಜಡ್ಜ್‌ಗಳ ವಿರುದ್ಧ ಯಾವುದೇ ಕೇಸು ದಾಖಲಿಸಿಕೊಳ್ಳಲು ಅನುಮತಿ ನೀಡುತ್ತಿರಲಿಲ್ಲ. ಆದರೆ 1991ರಲ್ಲಿ ಮದ್ರಾಸ್‌ ಹೈಕೋರ್ಟ್‌ನ ಜಡ್ಜ್‌ ಕೆ. ವೀರಸ್ವಾಮಿ ವಿರುದ್ದ ಭ್ರಷ್ಟಾಚಾರ ಪ್ರಕರಣ ದಾಖಲಿಸಿಕೊಳ್ಳಲು ಸುಪ್ರೀಂಕೋರ್ಟ್‌ ಮೊದಲ ಬಾರಿ ಅನುಮತಿ ನೀಡಿತ್ತು. ಅದರೆ ಕೇಸು ದಾಖಲಿಗೂ ಮುನ್ನ ಸುಪ್ರೀಂಕೋರ್ಟ್‌ನ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಿತ್ತು. ಆ ಬಳಿಕ ಹಾಲಿ ಹೈಕೋರ್ಟ್‌ ಜಡ್ಜ್‌ ವಿರುದ್ಧ ಕೇಸು ದಾಖಲು ಇದೇ ಮೊದಲು.

click me!