ಮೈಸೂರು ರಸ್ತೆಯಲ್ಲಿ ಏಕಾಏಕಿ ವೈಟ್‌ ಟಾಪಿಂಗ್‌

By Web DeskFirst Published Apr 5, 2019, 8:43 AM IST
Highlights

ಸಾರ್ವಜನಿಕರಿಗೆ ಮುಂಚಿತವಾಗಿ ಯಾವುದೇ ರೀತಿ ಮಾಹಿತಿ ನೀಡದೇ ಅತ್ಯಂತ ಹೆಚ್ಚು ವಾಹನ ದಟ್ಟಣೆ ಇರುವ ಮೈಸೂರು ರಸ್ತೆಯಲ್ಲಿ ಏಕಾಏಕಿ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲಾಗಿದೆ. 

ಬೆಂಗಳೂರು :  ಸಾರ್ವಜನಿಕರಿಗೆ ಮಾಹಿತಿ ನೀಡದೇ ಹಾಗೂ ಪರ್ಯಾಯ ಮಾರ್ಗ ರೂಪಿಸದೇ ಬಿಬಿಎಂಪಿ ಅತಿ ಹೆಚ್ಚು ವಾಹನ ದಟ್ಟಣೆ ಇರುವ ಮೈಸೂರು ರಸ್ತೆಯಲ್ಲಿ ಏಕಾಏಕಿ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭಿಸಿರುವ ಪರಿಣಾಮ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.

ದಿನಪೂರ್ತಿ ವಾಹನಗಳಿಂದ ಗಿಜಿಗುಡುವ ಮೈಸೂರು ರಸ್ತೆಯಲ್ಲಿ ಬಿಬಿಎಂಪಿ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಕಳೆದ ಬುಧವಾರ ರಾತ್ರಿಯಿಂದ ಆರಂಭಿಸಲಾಗಿದೆ. ಇದರಿಂದ ಗುರುವಾರ ಟೌನ್‌ಹಾಲ್‌ ಕಡೆಯಿಂದ ಗಾಳಿ ಆಂಜನೇಯ ದೇವಸ್ಥಾನದ ಕಡೆ ಸಾಗುವ ಮಾರ್ಗದಲ್ಲಿ ಭಾರೀ ಪ್ರಮಾಣದ ವಾಹನ ದಟ್ಟಣೆ ಉಂಟಾಯಿತು. ರಸ್ತೆಯ ಅರ್ಧಭಾಗದ ರಸ್ತೆಯಲ್ಲಿ ಕಾಮಗಾರಿ ಮಾಡಲಾಗುತ್ತಿದ್ದು, ಉಳಿದ ಭಾಗದಲ್ಲಿ ವಾಹನಗಳು ಸಂಚಾರಕ್ಕೆ ಅವಕಾಶ ನೀಡಿದ ಪರಿಣಾಮ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಇನ್ನು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ರೂಪಿಸದೇ ಬಿಬಿಎಂಪಿ ಕಾಮಗಾರಿ ಕೈಗೊಂಡಿರುವುದು ಸಾರ್ವಜನಿಕರ ವಾಹನ ಸವಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಆರು ತಿಂಗಳ ಹಿಂದೆಯಷ್ಟೇ ಗಾಳಿ ಆಂಜನೇಯ ದೇವಸ್ಥಾನದಿಂದ ಸಿರ್ಸಿ ಫ್ಲೈಓವರ್‌ ಆರಂಭವಾಗುವವರೆಗಿನ 1.20 ಕಿ.ಮೀ ವೈಟ್‌ ಟಾಪಿಂಗ್‌ ಪೂರ್ಣಗೊಳಿಸಲಾಗಿದೆ. ಇನ್ನೊಂದು ಪಥದಲ್ಲಿ ಇದೀಗ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭಿಸಲಾಗಿದೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ರಸ್ತೆಯಲ್ಲಿ ಅಧಿಕ ಪ್ರಮಾಣದ ಟ್ರಾಫಿಕ್‌ ದಟ್ಟಣೆ ಇರುವುದರಿಂದ ರಾತ್ರಿ ವೇಳೆಯಲ್ಲಿ ಮಾತ್ರ ಕಾಮಗಾರಿ ಮಾಡಲಾಗುತ್ತಿದೆ. ಪ್ರತಿ ದಿನಕ್ಕೆ 100 ರಿಂದ 120 ಮೀಟರ್‌ ಉದ್ದ ನಾಲ್ಕು ಮೀಟರ್‌ ಅಗಲದ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾತ್ರಿ 11 ಗಂಟೆ ವೇಳೆ ರಸ್ತೆಯಲ್ಲಿ ಸ್ವಲ್ಪ ಪ್ರಮಾಣದ ಟ್ರಾಫಿಕ್‌ ಕಡಿಮೆ ಆಗಲಿದೆ. ಬಳಿಕ ಕಾಮಗಾರಿ ಆರಂಭಿಸಲಾಗುವುದು. ಪುನಃ ಬೆಳಗ್ಗೆ 5 ಗಂಟೆ ವೇಳೆ ಮತ್ತೆ ವಾಹನಗಳ ಸಂಚಾರ ಆರಂಭವಾಗಲಿದೆ. ಒಟ್ಟಾರೆ ಕೇವಲ ನಾಲ್ಕು ಗಂಟೆ ಮಾತ್ರ ಕಾಮಗಾರಿ ನಡೆಸಲು ಅವಕಾಶ ಸಿಗಲಿದೆ. ಸಾಧ್ಯವಾದಷ್ಟುತ್ವರಿತವಾಗಿ ಕಾಮಗಾರಿ ಮುಗಿಸುವುದಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಬಿಬಿಎಂಪಿ ನಗರ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ತಿಳಿಸಿದ್ದಾರೆ.

ನಗರ ಸಂಚಾರಿ ಪೊಲೀಸರು ಅನುಮತಿ ನೀಡಿದಂತೆ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲದೇ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡುವುದಕ್ಕೆ ಸರಿಯಾದ ಯಾವುದೇ ಸಂಪರ್ಕ ರಸ್ತೆಗಳಿಲ್ಲ. ಹಾಗಾಗಿ, ಕಾಮಗಾರಿ ರಸ್ತೆಯಲ್ಲಿ ಅರ್ಧಭಾಗ ಸಂಚಾರಿಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಾಹನ ಸವಾರರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

click me!