
ಶ್ರೀನಗರ(ಏ.05] 40 ಯೋಧರ ಬಲಿ ಪಡೆದ ಪುಲ್ವಾಮಾ ದಾಳಿ ಮತ್ತು ಇತ್ತೀಚೆಗೆ ಜಮ್ಮು ಮತ್ತು ಶ್ರೀನಗರ ಹೆದ್ದಾರಿಯಲ್ಲಿ ಪುಲ್ವಾಮಾ ಮಾದರಿಯಲ್ಲೇ ನಡೆದ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರ, ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ವಾರದಲ್ಲಿ 2 ದಿನ ಸಾರ್ವಜನಿಕರ ಬಳಕೆಗೆ ನಿಷೇಧಿಸಿ ಆದೇಶ ಹೊರಡಿಸಿದೆ.
ಲೋಕಸಭಾ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯವಾಗುವ ಮೇ 31ರವರೆಗೆ ಪ್ರತಿ ಭಾನುವಾರ ಮತ್ತು ಬುಧವಾರ ಬೆಳಗ್ಗೆ 4ರಿಂದ ಸಂಜೆ 5 ಗಂಟೆವರೆಗೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಒಂದೊಮ್ಮೆ ನಾಗರಿಕರಿಗೆ ತೀರಾ ಅನಿವಾರ್ಯವಾಗಿ ಪ್ರಯಾಣ ಬೆಳೆಸಬೇಕಾಗಿ ಬಂದಲ್ಲಿ ಪೊಲೀಸರು ನೆರವಿಗೆ ಬರಲಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಚುನಾವಣೆ ವೇಳೆ ಸೇನಾಪಡೆಗಳ ಸಂಚಾರ ಹೆಚ್ಚಿರುತ್ತದೆ. ಈ ವೇಳೆ ಆತ್ಮಾಹುತಿ ದಾಳಿಕೋರರು ಮತ್ತೆ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಸರ್ಕಾರ ಕ್ರಮಕ್ಕೆ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಜನರ ಹಕ್ಕು ಕಿತ್ತುಕೊಳ್ಳುವ ಆದೇಶ: ಪಾರೂಕ್
ಕಾರ್ಗಿಲ್ ಯುದ್ಧವಾದ ಸಂದರ್ಭದಲ್ಲಿಯೂ ಜನರ ಪ್ರಯಾಣಕ್ಕೆ ಸಾಕಷ್ಟುಅನುಕೂಲಕರವಾದ ಜಮ್ಮು ಕಾಶ್ಮೀರ ಹೆದ್ದಾರಿ ಬಂದ್ ಮಾಡಲಾಗಿರಲಿಲ್ಲ. ಆದರೆ ಸರ್ಕಾರ ಈಗ ಬಂದ್‌ಗೆ ಆದೇಶ ನೀಡಿ, ಹೆದ್ದಾರಿ ಸುಗಮ ಸಂಚಾರಕ್ಕೇ ಬ್ರೇಕ್ ಹಾಕಲು ಮುಂದಾಗಿದೆ. ತನ್ಮೂಲಕ ಜನತೆಯ ಮೂಲಭೂತ ಹಕ್ಕನ್ನೇ ಕಿತ್ತುಕೊಳ್ಳಲು ಹೊರಟಿದೆ.
- ಫಾರೂಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ
ಭದ್ರತಾ ಪಡೆ ವಿಶೇಷ ರೈಲಲ್ಲಿ ಪ್ರಯಾಣಿಸಲಿ
ಜನಸ್ನೇಹಿ ಆದೇಶ ಇದಲ್ಲ. ಇದರಿಂದಾಗಿ ಅನಾರೋಗ್ಯದಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆಲ್ಲಾ ತೊಂದರೆಯಾಗಲಿದೆ. ಭದ್ರತಾ ಪಡೆಗಳ ಪ್ರಯಾಣಕ್ಕಾಗಿ ಈ ಕ್ರಮ ಸರಿಯಲ್ಲ. ಇದಕ್ಕೆ ವಿಶೇಷ ರೈಲು ಬಳಕೆ ಮಾಡಿಕೊಳ್ಳುವುದು ಉತ್ತಮ. ಈ ಕಾರಣಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಏಕೆ?
- ಓಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.