
ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಭವಿಷ್ಯ ನುಡಿದಿದ್ದಾರೆ. ಮಂಗಳವಾರ ಮೂರು ಗಂಟೆ ಬಳಿಕ ಅಂದರೆ ನಾಮ ಪತ್ರ ಸಲ್ಲಿಕೆ ಮುಕ್ತಾಯವಾದ ನಂತರ ರಾಜ್ಯ ರಾಜಕಾರಣ ದಲ್ಲಿ ಸಾಕಷ್ಟು ಬದಲಾವಣೆ ಯಾಗಲಿದೆ. ಮೈತ್ರಿ ಪಕ್ಷಗಳ ನಾಯಕರು ಯಾವ ರೀತಿ ಕಿತ್ತಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಗರದ ಎನ್‌ಇಎಸ್ ಮೈದಾನದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಮುಖ ನೋಡದ ಸ್ಥಿತಿ ಇದೆ. ಉಪ ಚುನಾವಣೆ ಫಲಿತಾಂಶ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ರಾಜ್ಯ ರಾಜಕಾರಣದಲ್ಲಿ ಏರುಪೇರಾಗಲಿದೆ ಎಂದರು. ಈ ಮೂಲಕ ಉಪ ಚುನಾವಣೆ ಫಲಿತಾಂಶ ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಪರೋಕ್ಷವಾಗಿ ತಿಳಿಸಿದರು.
ರಾಜ್ಯದಲ್ಲಿ ಜನವಿರೋಧಿ ಸರ್ಕಾರ ಅಧಿಕಾರದಲ್ಲಿದೆ. ಈ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿ ಮುಂದುವರಿಯಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂದು ಜೆಡಿಎಸ್-ಕಾಂಗ್ರೆಸ್‌ನವರೇ ಮಾತನಾಡಿಕೊಳ್ಳುತ್ತಿ ದ್ದಾರೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ ಎಲ್ಲಿ ಅಡ್ಡಿಯಾಗುತ್ತಾರೋ ಎಂದು ಸೋಲುಣಿಸಿ ಜೆಡಿಎಸ್‌ನವರು ಅಪಮಾನ ಮಾಡಿದ್ದರು. ಈಗ ಅದೇ ಜೆಡಿಎಸ್‌ಗೆ ಕಾಂಗ್ರೆಸ್ ನವರು ಬೆಂಬಲ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು. ಉಪ ಚುನಾವಣೆ ಫಲಿತಾಂಶ ಕುರಿತಾಗಿ ದೇಶದ ಜನ ಕಾತುರದಿಂದ ಕಾಯುತ್ತಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಿಂದ 20 - 22 ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಈ ಉಪ ಚುನಾವಣೆ ಪೂರಕವಾಗಲಿದೆ ಎಂದು ಹೇಳಿದರು.
ಬೇಜವಾಬ್ದಾರಿ ಸಿಎಂ: ಎಚ್.ಡಿ.ಕುಮಾರಸ್ವಾಮಿ ರಾಜ್ಯ ಕಂಡ ಬೇಜವಾಬ್ದಾರಿ ಮುಖ್ಯಮಂತ್ರಿ. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಲು ಪ್ರಧಾನಿ ಮೋದಿ ಅಡ್ಡಿಯಾಗಿ ದ್ದಾರೆ ಎಂದು ಅವರು ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಅವರು ದ್ರೋಹ ಬಗೆದಿದ್ದಾರೆ. ಸಾಲ ಮನ್ನಾ ಮಾಡುವ ಯೋಗ್ಯತೆ ಇಲ್ಲದೆ, ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ಈಗ ಪ್ರಧಾನಿ ಕಡೆ ಬೊಟ್ಟು ಮಾಡುತ್ತಿದ್ದಾರೆ. ಅದನ್ನು ಬಿಟ್ಟು, ರಾಜ್ಯದ ವಾಸ್ತವ ಸ್ಥಿತಿಗತಿ ಏನು ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಬಿಎಸ್‌ವೈ ಹೇಳಿದರು.
ಸರ್ಕಾರ ಬೀಳಿಸುವ ಯತ್ನ ಫಲ ಕೊಡಲ್ಲ : ಎಚ್ ಡಿಕೆ
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿ ಹೊಸ ಸರ್ಕಾರ ರಚಿಸಲು ಬಿಜೆಪಿ ನಾಯಕರು ನಡೆಸುತ್ತಿರುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನಕ್ಕೆ ಲೋಕಸಭೆ ಮತ್ತು ವಿಧಾನಸಭಾ ಉಪ ಚುನಾವಣೆ ಫಲಿತಾಂಶದ ಮೂಲಕ ಮತದಾರರೇ ವಿರಾಮ ಹಾಕಲಿದ್ದಾರೆ ಎಂದು ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.
ರಾಮನಗರ ಕ್ಷೇತ್ರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ನಂತರ ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ‘‘ನನಗೆ ಎಂದೂ ಮೈತ್ರಿ ಸರ್ಕಾರ ಅಭದ್ರವಾಗಿದೆ ಅನಿಸಿಲ್ಲ. ಆದರೆ, ಬಿಜೆಪಿ ನಾಯಕರು ನ.೧೦ರಂದು ಹೊಸ ಸರ್ಕಾರ ಬರಲಿದೆ ಎಂದು ಕನಸು ಕಾಣುತ್ತಿದ್ದಾರೆ. ಅವರೆಲ್ಲರ ಕನಸು ಮತ್ತು ವ್ಯರ್ಥ ಕಸರತ್ತುಗಳಿಗೆ ಉಪ ಚುನಾವಣಾ ಫಲಿತಾಂಶದ ಮೂಲಕ ಮತದಾರರು ವಿರಾಮ ನೀಡುವ ಸಂದೇಶ ನೀಡಲಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಸಹಮತ ವ್ಯಕ್ತಪಡಿಸುವ ನಿಟ್ಟಿನಲ್ಲಿ ಮತದಾರರು ‘ಮೈತ್ರಿ ಅಭ್ಯರ್ಥಿ’ಗಳಿಗೆ ದಾಖಲೆಯ ವಿಜಯ ನೀಡುವ ವಿಶ್ವಾಸವಿದೆ’’ ಎಂದರು.
ಕಾಂಗ್ರೆಸ್‌ನ ರಾಜ್ಯನಾಯಕರ ಸಹಮತದಿಂದಲೇ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದೆ. ಐದು ವರ್ಷ ಸರ್ಕಾರ ನಡೆಸುವುದು ಮಾತ್ರವಲ್ಲದೆ ರಾಜ್ಯದ ಅಭಿವೃದ್ಧಿ ಮತ್ತು ರಾಷ್ಟ್ರಮಟ್ಟದಲ್ಲಿ ರಾಜಕೀಯ ಬದಲಾವಣೆ ರಾಜ್ಯ ದಿಂದಲೇ ಆಗಬೇಕೆಂಬುದು ಮೈತ್ರಿಯ ಮುಖ್ಯ ಉದ್ದೇಶವಾಗಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್, ನಮ್ಮ ಪಕ್ಷದ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಈಗ ನಾವೆಲ್ಲರೂ ಒಂದೇ ಕುಟುಂಬ. ಮೈತ್ರಿಯಲ್ಲಿ ಸಣ್ಣಪುಟ್ಟ ಒಡಕುಗಳಿದ್ದರೆ ಅದನ್ನು ಶಮನಗೊಳಿಸುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.