
ಶಬರಿಮಲೆ/ತಿರುವನಂತಪುರ : ಪುರಾಣ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಪ್ರವೇಶಾವಕಾಶ ಕಲ್ಪಿಸಿದ ಬಳಿಕ ಇದೇ ಮೊದಲ ಬಾರಿ ದೇಗುಲದ ಬಾಗಿಲು ಅಕ್ಟೋಬರ್ 17ರಂದು (ಬುಧವಾರ) ತೆರೆಯಲಿದೆ.
ಈ ಹಿನ್ನೆಲೆಯಲ್ಲಿ ಅಂದು ದೇವಾಲಯ ಪ್ರವೇಶಕ್ಕೆ ಪ್ರಗತಿಪರ ಮಹಿಳೆಯರು ಹಾಗೂ ಸಂಘಟನೆಗಳ ಸದಸ್ಯರು ತುದಿಗಾಲಲ್ಲಿ ನಿಂತಿದ್ದರೆ, ಇದನ್ನು ತಡೆಯಲು ತಾವು ಟೊಂಕ ಕಟ್ಟಿನಿಲ್ಲುವುದಾಗಿ ಸಂಪ್ರದಾಯವಾದಿ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳು, ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ದೇವಾಲಯದ ಪ್ರದೇಶದಲ್ಲಿ ಭಾರಿ ಪ್ರಮಾಣದ ಕೋಲಾಹಲ ಏರ್ಪಡುವ ಭೀತಿ ಉಂಟಾಗಿದೆ. ಇಲ್ಲಿನ ಪರಿಸ್ಥಿತಿ ಕೇರಳದ ವಿವಿಧೆಡೆ ಪರಿಣಾಮ ಬೀರುವ ಸಾಧ್ಯತೆ ಕೂಡ ಇದೆ. ಹೀಗಾಗಿ ಬುಧವಾರ ಏನಾಗಬಹುದು ಎಂಬ ಭಾರೀ ಕುತೂಹಲ ಮಾಡಿದೆ.
ಈ ಹಿನ್ನೆಲೆಯಲ್ಲಿ ಶಬರಿಮಲೆ ದೇವಾಲಯದ ಸುತ್ತಮುತ್ತಲ ಪರಿಸರದಲ್ಲಿ ಭಾರಿ ಪ್ರಮಾಣದ ಬಿಗಿ ಪೊಲೀಸ್ ಬಂದೋಬಸ್‌್ತ ಹಮ್ಮಿಕೊಳ್ಳಲಾಗಿದೆ. ಆದರೆ ಈವರೆಗೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶ ಸಂಬಂಧ ಯಾವುದೇ ವಿಶೇಷ ವ್ಯವಸ್ಥೆಗಳನ್ನು ದೇವಾಲಯದ ಆಡಳಿತ ಮಂಡಳಿ ಮಾಡಿಕೊಂಡಿಲ್ಲ ಎಂದು ಮೂಲಗಳು ಹೇಳಿವೆ.
ಮಾಸಿಕ ಪೂಜೆ ಅಂಗವಾಗಿ ಅಕ್ಟೋಬರ್ 17ರಂದು ದೇವಾಲಯದ ಬಾಗಿಲು ತೆರೆಯಲಿದ್ದು, ಅಕ್ಟೋಬರ್ 22ರಂದು ಮುಚ್ಚಲಿದೆ. ಭಕ್ತರಿಗೆ 5 ದಿವಸ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಮಲಯಾಳಂ ಮಾಸ ‘ತುಲಾ’ ಅಂಗವಾಗಿ ಈ ವೇಳೆ ಪೂಜೆ-ಪುನಸ್ಕಾರಗಳು ಏರ್ಪಡಲಿವೆ.
ಇಂದು ಸಭೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಿದ್ದರಿಂದ ಉದ್ಭವವಾಗಿರುವ ವಿಷಯಗಳ ಕುರಿತಂತೆ ಚರ್ಚಿಸಲು, ದೇಗುಲದ ನಿರ್ವಹಣೆ ಮಾಡುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ), ಮಂಗಳವಾರ ಮಹತ್ವದ ಸಭೆಯೊಂದನ್ನು ಆಯೋಜಿಸಿದೆ.
ಈ ಸಭೆಗೆ ದೇಗುಲದ ಅರ್ಚಕರು, ವಿವಿಧ ಧಾರ್ಮಿಕ ಸಂಘಟನೆಗಳು, ಅಯ್ಯಪ್ಪ ಭಕ್ತರ ಸಂಘಟನೆ, ಪಂದಳಂ ರಾಜಮನೆತನದ ಸದಸ್ಯರು, ವಿವಿಧ ಹಿಂದೂ ಸಂಘಟನೆಗಳು ಹಾಗೂ ಸಂಬಂಧ ಪಟ್ಟಎಲ್ಲರಿಗೂ ಆಹ್ವಾನ ನೀಡಲಾಗಿದೆ. ತಿರುವನಂತಪುರದ ದೇವಸ್ವಂ ಮಂಡಳಿ ಕಚೇರಿಯಲ್ಲಿ ಈ ಸಭೆ ಆಯೋಜಿಸಲಾಗಿದೆ.
ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವುದು ಹೇಗೆ? ಪಾಲಿಸದೇ ಇದ್ದರೆ ಮಂದೆ ಆಗುವ ತೊಂದರೆ, ಪಾಲಿಸಿದರೆ ಭಕ್ತರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರುವ ನಿಟ್ಟಿನಲ್ಲಿ ಟಿಡಿಬಿ ಈ ಸಭೆಯನ್ನು ಆಯೋಜಿಸಿದೆ. ಆದರೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿರೋಧಿಸುವ ರಾಜಮನೆತನದವರು ಈವರೆಗೂ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ