ಇನ್ಫೋಸಿಸ್ ತಿಕ್ಕಾಟ ಸ್ಫೋಟ: ಸಿಇಒ ಸಿಕ್ಕಾ ರಾಜೀನಾಮೆಗೆ ಕಾರಣವೇನು ಗೊತ್ತಾ?

By Suvarna web DeskFirst Published Aug 19, 2017, 8:15 AM IST
Highlights

ಇನ್ಫೋಸಿಸ್‌'ನಲ್ಲಿ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಸಂಸ್ಥಾಪಕರು-ಆಡಳಿತ ಮಂಡಳಿ ನಡುವಣ ತಿಕ್ಕಾಟ ಶುಕ್ರವಾರ ಸ್ಫೋಟಗೊಂ ಡಿದ್ದು, ಸಿಇಒ ವಿಶಾಲ್ ಸಿಕ್ಕಾ ಹಠಾತ್ತನೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು(ಆ.19): ಇನ್ಫೋಸಿಸ್‌'ನಲ್ಲಿ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಸಂಸ್ಥಾಪಕರು-ಆಡಳಿತ ಮಂಡಳಿ ನಡುವಣ ತಿಕ್ಕಾಟ ಶುಕ್ರವಾರ ಸ್ಫೋಟಗೊಂ ಡಿದ್ದು, ಸಿಇಒ ವಿಶಾಲ್ ಸಿಕ್ಕಾ ಹಠಾತ್ತನೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್‌ನ ಸಂಸ್ಥಾಪಕ ರಿಂದ ನಿರಂತರ ಟೀಕೆಗೆ ಗುರಿಯಾಗಿದ್ದ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ವಿಶಾಲ್ ಸಿಕ್ಕಾ ಶುಕ್ರವಾರ ದಿಢೀರನೆ ರಾಜೀನಾಮೆ ನೀಡಿದ್ದಾರೆ. ತಮ್ಮ ಗಮನವನ್ನು ಬೇರೆಡೆ ಸೆಳೆಯುವಂತಹ ಬೆಳವಣಿಗೆಗಳು ಕಂಪನಿಯಲ್ಲಿ ನಡೆದವು ಎನ್ನುವ ಮೂಲಕ ತಮ್ಮ ರಾಜೀನಾಮೆಗೆ ಇನ್ಫೋಸಿಸ್ ಸಂಸ್ಥಾ ಪಕರಲ್ಲಿ ಅಗ್ರಗಣ್ಯರಾದ ಎನ್.ಆರ್. ನಾರಾಯಣ ಮೂರ್ತಿ ಅವರೇ ಕಾರಣ ಎಂದು ಸಿಕ್ಕಾ ಅವರು ಪರೋಕ್ಷವಾಗಿ ದೂಷಿಸಿದ್ದಾರೆ.

ಆದರೆ ಈ ಆರೋಪಗಳಿಂದ ತಮಗೆ ನೋವಾಗಿದೆ. ಕಂಪನಿಯ ಕಾರ್ಪೋರೆಟ್ ಆಡಳಿತ ಕುಸಿಯುತ್ತಿದೆ ಎಂಬುದಷ್ಟೇ ತಮ್ಮ ಕಳವಳವಾಗಿತ್ತು ಎಂದು ಮೂರ್ತಿ ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ, ಇಂತಹ ಆ‘ಾರರಹಿತ ದೂಷಣೆಗಳಿಗೆ ಪ್ರತಿಕ್ರಿಯೆ ನೀಡುವುದು ನನ್ನ ಗೌರವಕ್ಕೆ ತಕ್ಕುದಲ್ಲ. ಎಲ್ಲ ಆರೋಪಗಳಿಗೂ ಸೂಕ್ತ ರೀತಿ, ಸೂಕ್ತ ವೇದಿಕೆ ಹಾಗೂ ಸೂಕ್ತ ಸಮಯದಲ್ಲಿ ಉತ್ತರಿಸುತ್ತೇನೆ ಎಂದಿದ್ದಾರೆ. ನಷ್ಟದತ್ತ ವಾಲಿದ್ದ ಇನ್ಫೋಸಿಸ್ ಕಂಪನಿಯನ್ನು ಮೇಲಕ್ಕೆತ್ತುವ ಪ್ರಮುಖ ಗುರಿಯೊಂದಿಗೆ ಸಿಕ್ಕಾ ಅ ರನ್ನು ನಾರಾಯಣಮೂರ್ತಿ ಅವರೇ ಕಂಪನಿಗೆ ಕರೆತಂದಿದ್ದರು. ಇದೀಗ ಅವರೇ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇನ್ಫೋಸಿಸ್ ಕಂಪನಿಯ ಷೇರು ಶುಕ್ರವಾರ ಒಂದು ಹಂತದಲ್ಲಿ ಶೇ.೧೩ರಷ್ಟು (೩೧ ಸಾವಿರ ಕೋಟಿ ರು.) ಕುಸಿತ ಕಂಡು ದಿನದಂತ್ಯಕ್ಕೆ ಶೇ.9.56 (22500 ಕೋಟಿ ರು.) ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.

ಸಿಕ್ಕಾ ರಾಜೀನಾಮೆ ಬೆನ್ನಲ್ಲೇ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯು.ಬಿ. ಪ್ರವೀಣ್ ರಾವ್ ಅವರನ್ನು ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿ ನೇಮಕ ಮಾಡಲಾಗಿದೆ.

ದಿಢೀರ್ ರಾಜೀನಾಮೆಗೆ ಏನು ಕಾರಣ?: ಇನ್ಫೋಸಿಸ್ ಕಂಪನಿಯನ್ನು ಲಾಭದ ಹಳಿಗೆ ತರುವ ಉದ್ದೇಶ ದಿಂದ 2014ರ ಆ.1ರಂದು ಇನ್ಫೋಸಿಸ್‌ನ ಸಿಇಒ ಸಿಕ್ಕಾ ನೇಮಕವಾಗುತ್ತಿದ್ದಂತೆ ಕಂಪನಿಯ ಷೇರುಗಳು ಶೇ.೨೦ರಷ್ಟು ಜಿಗಿತ ಕಂಡಿದ್ದವು. ಸಿಕ್ಕಾ ಅವಧಿಯಲ್ಲಿ ಕಂಪನಿಯ ಒಟ್ಟಾರೆ ಮೌಲ್ಯ 30 ಸಾವಿರ ಕೋಟಿ ರು.ನಷ್ಟು ಏರಿಕೆಯಾಗಿತ್ತು. ಆದರೆ ಸಿಕ್ಕಾ ಅವರು ತಮ್ಮ ವೇತನ ಹೆಚ್ಚಳ ಹಾಗೂ ಕಂಪನಿ ತೊರೆದು ಹೋದವರಿಗೆ ನೀಡಿದ್ದ ಆಕರ್ಷಕ ಪ್ಯಾಕೇಜ್‌'ಗಳು ಸಂಸ್ಥಾಪಕರು ಮತ್ತು ವಿಶೇಷವಾಗಿ ನಾರಾಯಣ ಮೂರ್ತಿ ಅವರ ಆಕ್ಷೇಪಕ್ಕೆ ಕಾರಣವಾಗಿದ್ದವು. ಈ ಸಂಬಂಧ ಶೀತಲ ಸಮರ ನಡೆಯುತ್ತಿತ್ತು. ಆ.೯ರಂದು ತಮ್ಮ ಕೆಲವು ಸಲಹೆಗಾರರಿಗೆ ಬರೆದ ಒಂದು ಇ-ಮೇಲ್ ಸಿಕ್ಕಾ ಅವರಿಗೆ ಕೋಪ ತರಿಸಿತು ಎನ್ನಲಾಗಿದೆ. ‘ಸಹ ಅಧ್ಯಕ್ಷ ರವಿ ವೆಂಕಟೇಶನ್ ಸೇರಿದಂತೆ ಮೂವರು ಸ್ವತಂತ್ರ ನಿರ್ದೇಶಕರಿಗೆ ಸಿಕ್ಕಾ ಬಗ್ಗೆ ದೂರಿದೆ. ಸಿಕ್ಕಾ ಅವರು ಸಿಇಒ ಆಗಬಲ್ಲ ವ್ಯಕ್ತಿ ಅಲ್ಲ. ಅವರೊಬ್ಬ ಸಿಟಿಒ (ಮುಖ್ಯ ತಂತ್ರಜ್ಞಾನ ಅಧಿಕಾರಿ) ಆಗಬಲ್ಲವರು ಎಂದು ಆ ಸ್ವತಂತ್ರ ನಿರ್ದೇಶಕರೇ ನನಗೆ ತಿಳಿಸಿದ್ದಾರೆ’ ಎಂದು ಮೂರ್ತಿ ಅವರು ಇ-ಮೇಲ್‌ನಲ್ಲಿ ಬರೆದಿದ್ದರು ಎನ್ನಲಾಗಿದೆ. ಇದು ಮಾಧ್ಯಮಗಳಿಗೆ ಸೋರಿಕೆಯಾದ ಬೆನ್ನಲ್ಲೇ ಸಿಕ್ಕಾ ಅವರು ರಾಜೀನಾಮೆ ಘೋಷಿಸಿದ್ದಾರೆ.

ಮಕ್ಕಳಿಗಾಗಿ ಹಣ, ಸ್ಥಾನ ಕೇಳುತ್ತಿಲ್ಲ: ಮೂರ್ತಿ

ಇನ್ಫೋಸಿಸ್ ಕಂಪನಿಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಶಾಲ್ ಸಿಕ್ಕಾ ದಿಢೀರ್ ರಾಜೀನಾಮೆಗೆ ಸಂಸ್ಥಾಪಕ ನಾರಾಯಣಮೂರ್ತಿ ಅವರೇ ಕಾರಣ ಎಂದು ದೂಷಿಸಿರುವ ಕಂಪನಿಯ ನಿರ್ದೇಶಕ ಮಂಡಳಿಗೆ ಮೂರ್ತಿ ಅವರು ತಿರುಗೇಟು ನೀಡಿದ್ದಾರೆ. 2014ರಲ್ಲೇ ನಾನು ಕಂಪನಿಯ ನಿರ್ದೇಶಕ ಮಂಡಳಿ ತೊರೆದಿದ್ದೇನೆ. ನಾನು ಹಣ, ಮಕ್ಕಳಿಗಾಗಿ ಸ್ಥಾನ ಅಥವಾ ಅಧಿಕಾರವನ್ನು ಬೇಡು ತ್ತಿಲ್ಲ. ಕಂಪನಿಯ ಕಾರ್ಪೋರೆಟ್ ಆಡಳಿತದ ಗುಣಮಟ್ಟ ಕುಸಿದಿದೆ ಎಂಬುದು ನನ್ನ ಪ್ರಮುಖ ಕಳವಳ ವಾಗಿತ್ತು. ಇದನ್ನೇ ಇನ್ಫೋಸಿಸ್ ಮಂಡಳಿಯ ಗಮನಕ್ಕೂ ತಂದಿದ್ದೆ ಎಂದು ಅವರು ಹೇಳಿದ್ದಾರೆ.

ನಿಲೇಕಣಿಗೆ ಮತ್ತೆ ಹುದ್ದೆ?

ವಿಶಾಲ್ ಸಿಕ್ಕಾ ರಾಜೀನಾಮೆ ಬೆನ್ನಲ್ಲೇ, ಮತ್ತೆ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲ ನಾಯಕರಿಗಾಗಿ ಹುಡುಕಾಟ ಆರಂಭವಾಗಿದೆ.

ಮೂಲಗಳ ಪ್ರಕಾರ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಅವರನ್ನು ಈ ಹುದ್ದೆ ಮತ್ತೆ ಹುಡುಕಿಬಂದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಸಿಕ್ಕಾ ಆಯ್ಕೆ ಮೂಲಕ ಮೊದಲ ಬಾರಿಗೆ ಕಂಪನಿಗೆ ಸಂಸ್ಥಾಪಕೇತರರನ್ನು ನೇಮಿಸಲಾಗಿತ್ತು. ಆದರೆ ಅವರ ಕಾರ್ಯಶೈಲಿ ಬಗ್ಗೆ ಇನ್ಫಿ ಸಂಸ್ಥಾಪಕ ಅಧ್ಯಕ್ಷ ಮೂರ್ತಿ ಹಲವು ಬಾರಿ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು.

ಹೀಗಾಗಿ ಮತ್ತೆ ಸಂಸ್ಥಾಪಕ ಸದಸ್ಯರೇ ಕಂಪನಿಯ ಚುಕ್ಕಾಣಿ ಹಿಡಿಯಬಹುದು. ಇದಕ್ಕೆ ನಂದನ್ ನಿಲೇಕಣಿ ಹೆಚ್ಚು ಸೂಕ್ತ ಅಭ್ಯರ್ಥಿ ಎಂಬ ವಿಶ್ಲೇಷಣೆ ಕೇಳಿಬಂದಿದೆ.

 

click me!