
ಗುರುವಾರ (ಫೆ.5ರಂದು)ಪಶ್ಚಿಮ ಬಂಗಾಳ ಸರ್ಕಾರ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಇಳಿಸಲು ಅನುಮತಿ ನೀಡದಿದ್ದರೂ ಯೋಗಿ ತಮ್ಮ ಹೆಲಿಕಾಪ್ಟರ್ ಅನ್ನು ಪಶ್ಚಿಮ ಬಂಗಾಳದಲ್ಲಿ ಲ್ಯಾಂಡ್ ಮಾಡಿ, ಸಮಾವೇಶದಲ್ಲಿ ಪಾಲ್ಗೊಂಡರು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಅಮಿತ್ ಶಾ ಫ್ಯಾನ್ಸ್’ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಈ ವಿಡಿಯೋವನ್ನು ಪೋಸ್ಟ್ ಮಾಡಿ, ‘ಬಂಗಾಳದಲ್ಲಿ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಪ್ರವೇಶ’ ಎಂದು ಒಕ್ಕಣೆ ಬರೆದಿದೆ.
ಸದ್ಯ ಈ ಪೇಜನ್ನು 5 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಹಳದಿ ಬಣ್ಣದ ಹೆಲಿಕಾಪ್ಟರ್ ಗ್ರಾಮವೊಂದರ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆಗುತ್ತದೆ. ಅದರಿಂದ ಆದಿತ್ಯನಾಥ್ ಇಳಿದು ಮುಂದೆ ಸಾಗುತ್ತಾರೆ. ಅವರ ಸುತ್ತಲೂ ಭದ್ರತಾ ಸಿಬ್ಬಂದಿಗಳಿದ್ದಾರೆ. ಸದ್ಯ ಈ ವಿಡಿಯೋ 1500ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.
ಆದರೆ ನಿಜಕ್ಕೂ ಅಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶವನ್ನು ಅಲ್ಲಗಳೆದು ಹೆಲಿಕಾಪ್ಟರ್ ಇಳಿಸಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಬಯಲಾಗಿದೆ. ಇಂಡಿಯಾ ಟುಡೇ ಈ ಸುದ್ದಿಯ ಬೆನ್ನು ಬಿದ್ದು ತನಿಖೆ ನಡೆಸಿದ್ದು, ವೈರಲ್ ಆಗಿರುವ ವಿಡಿಯೋ ಹಳೆಯದ್ದು ಎಂಬುದು ಪತ್ತೆಯಾಗಿದೆ. ಈ ವಿಡಿಯೋವನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಆದಿತ್ಯನಾಥ ಅವರು ಕುಳಿತ ಕಾರಿನ ನಂಬರ್ ಪ್ಲೇಟ್ ‘ಟಿ ಆರ್’ನಿಂದ ಪ್ರಾರಂಭವಾಗುತ್ತದೆ. ಅಲ್ಲಿಗೆ ಅದು ಪಶ್ಚಿಮ ಬಂಗಾಳದ ನೋಂದಾಯಿತ ಕಾರಲ್ಲ ತ್ರಿಪುರದ್ದು ಎಂಬುದು ಸ್ಪಷ್ಟ.
ಇನ್ನು ಪೈಲಟ್ ಕಾರ್ ಮೇಲೆ ತ್ರಿಪುರ ಎಂದು ಬರೆದಿರುವುದನ್ನು ಕಾಣಬಹುದಾಗಿದೆ. ಯೋಗಿ ಆದಿತ್ಯನಾಥ್ ಕಳೆದ ವರ್ಷ ಫೆಬ್ರವರಿಯಂದು ತ್ರಿಪುರಾಗೆ ಭೇಟಿ ನೀಡಿದ್ದರು. ಈ ಕುರಿತು ಹಲವು ಮಾಧ್ಯಮಗಳೂ ವರದಿ ಮಾಡಿದ್ದವು. ಸದ್ಯ ಅದೇ ವಿಡಿಯೋವನ್ನು ಬಳಸಿಕೊಂಡು ಪಶ್ಚಿಮ ಬಂಗಾಳ ಸರ್ಕಾರ ಪರವಾನಗಿ ನೀಡದಿದ್ದರೂ ಆದಿತ್ಯನಾಥ್ ಹೆಲಿಕಾಪ್ಟರ್ ಇಳಿಸಿದ್ದರು ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ