![[ವೈರಲ್ ಚೆಕ್] ಗುಜರಾತ್ ಮತಕ್ಕಾಗಿ ಮುಸ್ಲಿಂ ಮುಖಂಡರ ಭೇಟಿಯಾದ ಮೋದಿ!](https://static.asianetnews.com/images/w-412,h-232,imgid-34fae071-0460-4676-89c1-c0fb36b74907,imgname-image.jpg)
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಾರಿಯ ಗುಜರಾತ್ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಅವರು ಗೆಲುವಿಗಾಗಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಅಲ್ಪ ಸಂಖ್ಯಾತರನ್ನು ಓಲೈಸುವ ಸಲುವಾಗಿ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿದ್ದಾರೆ ಮತ್ತು ಅವರಿಂದ ಸನ್ಮಾನವನ್ನು ಸ್ವೀಕರಿಸಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೋದಿ ಅವರು ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ಅಜ್ಮೇರ್ ಷರೀಫ್ ದರ್ಗಾದ ಮುಖಂಡರನ್ನು ಭೇಟಿ ಮಾಡಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ವಿಡಿಯೋದಲ್ಲಿ ಮೋದಿ ಅವರು ಸಯದ್ ಫಖರ್ ಕಾಜ್ಮಿ ಚಿಸ್ತಿ ಅವರನ್ನು ಭೇಟಿ ಮಾಡಿ ಸನ್ಮಾನ ಸ್ವೀಕರಿಸಿದ್ದನ್ನು ಕಾಣಬಹುದು. ಕಾಜ್ಮಿ ಚಿಸ್ತಿ ಅವರು ಮೋದಿ ಅವರ ತಲೆಗೆ ರುಮಾಲು ಸುತ್ತುತ್ತಿರುವ ದೃಶ್ಯವಿದೆ. ಧಾರ್ಮಿಕ ಪುಸ್ತಕವೊಂದನ್ನು ಮೋದಿ ಅವರಿಗೆ ನೆನಪಿನ ಕಾಣಿಕೆಯಾಗಿ ಕಾಜ್ಮಿ ನೀಡುತ್ತಾರೆ. ಇದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಆಮ್ ಆದ್ಮಿ ಪಕ್ಷದ ವಕ್ತಾರ ಸಂಜಯ್ ಸಿಂಗ್, ಮೋದಿ ಅವರು ಮುಸ್ಲಿಂ ನಾಯಕರನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರೆ. ಇದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಅಂಜುತ್ತಿದ್ದಾರೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದರು.
ಆದರೆ, ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿರುವ ಈ ಫೋಟೊ ಈಗಿನದ್ದೇ ಅಲ್ಲ. 2016ರ ಮೇ ೨ರಂದು ಪ್ರಧಾನಿ ಮೋದಿ ಅವರು ಅಜ್ಮೇರ್ ಷರೀಫ್ ನಿಯೋಗದ ಸದಸ್ಯರನ್ನು ಭೇಟಿ ಮಾಡಿದ ಫೊಟೋ ಇದಾಗಿದೆ. ಈ ಪೋಟೋವನ್ನು ಸ್ವತಃ ಮೋದಿ ಅವರೇ ಟ್ವೀಟ್ ಮಾಡಿದ್ದರು.
ಹೀಗಾಗಿ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಸುಳ್ಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.