ಹೋಟೆಲ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಾರೆ ಒಬಾಮ?

By Web DeskFirst Published Sep 15, 2018, 1:06 PM IST
Highlights

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. 
 

ವಾಷಿಂಗ್ಟನ್ :  ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. 

‘ಬೀಯಿಂಗ್ ಹಿಂದು’ ಫೇಸ್‌ಬುಕ್ ಪೇಜ್ ಒಬಾಮ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುತ್ತಿರುವ ಫೋಟೋದೊಂದಿಗೆ ‘ಭಾರತದಲ್ಲಿ ಒಬ್ಬ ಗ್ರಾಮಪಂಚಾಯಿತಿ ಅಧ್ಯಕ್ಷನೂ ಹುದ್ದೆಗೇರಿದ ನಂತರ 5 ತಲೆಮಾರಿಗಾಗುವಷ್ಟು ಆಸ್ತಿ ಮಾಡಿರುತ್ತಾನೆ. ಆದರೆ ಅಮೆರಿಕ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ ನಿವೃತ್ತಿ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಒಕ್ಕಣೆಯನ್ನು ಬರೆದು ಮೊದಲಿಗೆ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದು 14000 ಬಾರಿ ಶೇರ್ ಆಗಿದೆ. 

ಬಳಿಕ ಟ್ವೀಟರ್ ಹಾಗೂ ಫೇಸ್‌ಬುಕ್‌ನ ವೈಯಕ್ತಿಕ ಖಾತೆಗಳಲ್ಲೂ ಈ ಸಂದೇಶ ವೈರಲ್ ಆಗಿದೆ. ಇದೇ ರೀತಿಯ ಮತ್ತೊಂದು ಸಂದೇಶದಲ್ಲಿ ಒಬಾಮ ಹೋಟೆಲ್‌ನಲ್ಲಿ ಪಾರ್ಟ್‌ಟೈಮ್ ಜಾಬ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಒಬಾಮ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿದೆ. 

ವಾಸ್ತವವಾಗಿ 20 ಆಗಸ್ಟ್ 2012 ರಂದು ಒಬಾಮ ಅಧಿಕೃತ ಟ್ವೀಟರ್ ಖಾತೆ ಟ್ವೀಟ್ ಮಾಡಿದ್ದ ಫೋಟೋವನ್ನೇ ಬಳಸಿಕೊಂಡು ಹೀಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆಗ ಆ ಫೋಟೋದೊಂದಿಗೆ, ‘ಅಮೆರಿಕ ಅಧ್ಯಕ್ಷ ಒಬಾಮ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಿದ್ದಾರೆ’ ಎಂದು  ಅಡಿ ಬರಹ ಬರೆಯಲಾಗಿತ್ತು. ಮತ್ತೆ ಉಳಿದ ಎರಡೂ ಫೋಟೋಗಳೂ ಕೂಡ ಒಬಾಮ ಅಮೆರಿಕ ಅಧ್ಯಕ್ಷ ರಾ ಗಿದ್ದ ಅವಧಿಯಲ್ಲಿಯೇ ತೆಗೆದ ಫೋಟೋಗಳಾಗಿವೆ. ಹಾಗಾಗಿ ಒಬಾಮ ಖಾಸಗಿ ಕೆಲಸ ಮಾಡುತ್ತಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು.

click me!