
ರಾಜಸ್ಥಾನ ವಿಧಾನಸಭಾ ಚುನಾವಣೆ ಸಮೀಪದಲ್ಲಿದೆ. ಈ ನಡುವೆ ಚುನಾವಣಾ ಪೂರ್ವ ಸಮೀಕ್ಷೆಗಳೂ ಸಾಕಷ್ಟುನಡೆಯುತ್ತಿವೆ. ಈ ನಡುವೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಷನ್ (ಬಿಬಿಸಿ) ಸುದ್ದಿ ಸಂಸ್ಥೆ ಹೆಸರಿನಲ್ಲಿ ರಾಜಸ್ಥಾನ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಸಮೀಕ್ಷೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅದರಲ್ಲಿ ಜೂನ್‌ನಿಂದ ನವೆಂಬರ್ ಅಂತ್ಯದ ವರೆಗೆ ಪ್ರತಿ ತಿಂಗಳೂ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಸ್ಥಾನಗಳು 30ರಿಂದ 135ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ ಸಂದೇಶದಲ್ಲಿ ಜೂನ್ ಸಮೀಕ್ಷೆಯಲ್ಲಿ ಕಾಂಗ್ರೆಸ್ 160 ಬಿಜೆಪಿ 30 ಸ್ಥಾನ ಗಳಿಸಿತ್ತು. ಜುಲೈನಲ್ಲಿ ಬಿಜಿಪಿ ಸ್ಥಾನ 40ಕ್ಕೆ ಏರಿಕೆಯಾಗಿತ್ತು. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲೂ ಸೀಟುಗಳ ಸಂಖ್ಯೆ ಏರಿಕೆಯಾಗಿ 105ಕ್ಕೆ ತಲುಪಿತ್ತು. ಅಂತಿಮವಾಗಿ ನವೆಂಬರ್ 28ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ 135, ಕಾಂಗ್ರೆಸ್ 30 ಸ್ಥಾನ ಗಳಿಸಿದೆ. ಆದರೆ ಈ ಹಿಂದಿನ ಎಲ್ಲಾ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿತ್ತು.
ಸದ್ಯ ವಿಶ್ವಾಸಾರ್ಹ ಬಿಬಿಸಿ ಸುದ್ದಿ ಸಂಸ್ಥೆ ನಡೆಸಿದೆ ಎನ್ನಲಾದ ಸಮೀಕ್ಷೆಯಲ್ಲೇ ಬಿಜೆಪಿ ಮುನ್ನಡೆ ಸಾಧಿಸಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ನಿಜಕ್ಕೂ ಬಿಬಿಸಿ ಚುನಾವಣಾಪೂರ್ವ ಸಮೀಕ್ಷೆ ನಡೆಸಿತ್ತೇ ಎಂದು ಪರಿಶೀಲಿಸಿದಾಗ, ಇದು ಬಿಬಿಸಿ ಹೆಸರಿನ ಸುಳ್ಳು ಸಮೀಕ್ಷೆ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಬಿಬಿಸಿ ವಕ್ತಾರರೇ ಸ್ಪಷ್ಟನೆ ನೀಡಿದ್ದು, ‘ಇದು ಸಂಪೂರ್ಣ ಸುಳ್ಳು. ಬಿಬಿಸಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿಲ್ಲ’ ಎಂದಿದ್ದಾರೆ.
ಅಲ್ಲಿಗೆ ನಕಲಿ ಚುನಾವಣಾ ಸಮೀಕ್ಷೆ ಫಲಿತಾಂಶವನ್ನು ವಿಶ್ವಾಸಾರ್ಹತೆ ಗಳಿಸುವ ಉದ್ದೇಶದಿಂದ ಬಿಬಿಸಿ ಹೆಸರಿನಲ್ಲಿ ಹರಡಲಾಗುತ್ತಿದೆ ಎಂಬುದು ಸ್ಪಷ್ಟ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ