ಉತ್ತರಾಖಂಡ ವಿವಿ ಸಭೆಯಲ್ಲಿ ಮೂರ್ಛೆ ಹೋದ ಉಪ ರಾಷ್ಟ್ರಪತಿ

Published : Jun 26, 2025, 05:16 AM IST
Jagadeep

ಸಾರಾಂಶ

ಕುಮಾವು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದ ವೇಳೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಮೂರ್ಛೆ ಹೋಗಿ ಬಿದ್ದ ಘಟನೆ ಬುಧವಾರ ನಡೆದಿದೆ.

ನೈನಿತಾಲ್‌: ಕುಮಾವು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದ ವೇಳೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಮೂರ್ಛೆ ಹೋಗಿ ಬಿದ್ದ ಘಟನೆ ಬುಧವಾರ ನಡೆದಿದೆ. ಭಾಷಣದ ಬಳಿಕ ಮಾಜಿ ಲೋಕಸಭಾ ಸಂಸದ ಮಹೇಂದ್ರಸಿಂಗ್‌ ಪಾಲ್‌ ಅವರೊಂದಿಗೆ ಮಾತಾಡುತ್ತಿದ್ದ ವೇಳೆ ಧನಕರ್‌ ಅವರ ಹೆಗಲಿನ ಮೇಲೆ ಮೂರ್ಛೆ ತಪ್ಪಿದ್ದಾರೆ. 3 ದಿನಗಳ ಉತ್ತರಾಖಂಡದ ನೈನಿತಾಲ್‌ ಪ್ರವಾಸದಲ್ಲಿರುವ ಧನಕರ್‌ ಅವರು ಕುಮಾವು ವಿವಿಯ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಬಳಿಕ, ಸಭಿಕರ ನಡುವೆ ಕುಳಿತಿದ್ದ ತಮ್ಮ ಸಂಸದೀಯ ಸಹೋದ್ಯೋಗಿ ಪಾಲ್‌ ಅವರ ಬಳಿ ಹೋದರು. ಈ ವೇಳೆ ಅವರಿಬ್ಬರೂ ಭಾವುಕರಾಗಿದ್ದರು. ಮಾತುತೆಯ ಬಳಿಕ ಧನಕರ್‌ ಅವರು ಪಾಲ್‌ರ ಭುಜದ ಮೇಲೆ ಮೂರ್ಛೆ ಹೋದರು.

ಕೂಡಲೇ ಸ್ಥಳದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಿದರು. ಪರಿಣಾಮವಾಗಿ ಧನಕರ್‌ ಪ್ರಜ್ಞೆ ಮರಳಿತು. ಬಳಿಕ ಅವರನ್ನು ರಾಜಭವನಕ್ಕೆ ಕರೆದೊಯ್ಯಲಾಯಿತು.

ಜಿಯೋ ಆರಂಭ ನನ್ನ ಜೀವನದ ಅತ್ಯಂತ ಅಪಾಯ ನಿರ್ಧಾರ: ಮುಕೇಶ್‌ ಅಂಬಾನಿ

ನವದೆಹಲಿ: 2016ರಲ್ಲಿ ರಿಲಯನ್ಸ್‌ ಜಿಯೋ ಆರಂಭವು ನನ್ನ ಜೀವನದಲ್ಲಿ ತೆಗೆದುಕೊಂಡ ಅತ್ಯಂತ ಅಪಾಯಕಾರಿ ನಿರ್ಧಾರ ಎಂದು ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಹೇಳಿದ್ದಾರೆ.ಬುಧವಾರ ಮೆಕ್‌ ಕಿನ್ಸೆ ಅಂಡ್ ಕೋ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, 2016ರಲ್ಲಿ ಜಿಯೋ ಮೂಲಕ ಟೆಲಿಕಾಂ ಉದ್ಯಮಕ್ಕೆ ಕಾಲಿಟ್ಟಿದ್ದು, ಅತ್ಯಂತ ರಿಸ್ಕ್‌ ಆಗಿತ್ತು. ಒಂದು ವೇಳೆ ವಿಶ್ಲೇಷಕರು ನುಡಿದಿದ್ದ ಭವಿಷ್ಯವು ನಿಜವಾಗಿದ್ದರೂ ಪರವಾಗಿಲ್ಲ, ಭಾರತವು ಡಿಜಿಟಲ್ ಪರಿವರ್ತನೆ ಆಗುವುದರಲ್ಲಿನ ಜಿಯೋದ ಪಾತ್ರದ ಕಾರಣಕ್ಕೆ ಅದು ಬೆಲೆ ಬಾಳುವಂಥದ್ದೇ ಎಂದು ಅಂಬಾನಿ ಹೇಳಿದ್ದಾರೆ. ‘ಕೆಲವರು ಇದು ಆರ್ಥಿಕವಾಗಿ ಉಪಯೋಗ ಆಗದಿರಬಹುದು ಎಂದು ಭಾವಿಸಿದ್ದರು. ಆದರೆ ನಮ್ಮ ಆಡಳಿತ ಮಂಡಳಿಗೆ ಹೇಳಿದ್ದೆ, ‘ತುಂಬ ಕೆಟ್ಟ ಪರಿಸ್ಥಿತಿ ಅಂದರೆ ಏನಾಗಬಹುದು, ನಾವು ಹೆಚ್ಚಿನ ಲಾಭವನ್ನು ಗಳಿಸುವುದಿಲ್ಲ. ಹಾಗಾದರೆ ಏನೂ ತೊಂದರೆ ಇಲ್ಲ. ಏಕೆಂದರೆ ಅದು ನಮ್ಮ ಸ್ವಂತ ಹಣ’ ಎಂದು ಹೇಳಿದ್ದೆ ಎಂದರು.

ಮಧ್ಯಪ್ರಾಚ್ಯ ಬಿಕ್ಕಟ್ಟು ಶಮನ: ಸೆನ್ಸೆಕ್ಸ್‌ 700 ಅಂಕ ನೆಗೆತ

ಮುಂಬೈ: ಮಧ್ಯ ಪ್ರಾಚ್ಯದಲ್ಲಿ ಕದನವಿರಾಮ ಘೋಷಣೆಯಾದ ಬೆನ್ನಲ್ಲೇ ಸತತ 2ನೇ ದಿನವೂ ಸಹ ಭಾರತೀಯ ಷೇರುಪೇಟೆಗಳು ಗೆಲುವಿನ ಹಾದಿ ಹಿಡಿದಿದೆ. ಬಾಂಬೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬರೋಬ್ಬರಿ 700.40 ಅಂಕ ಏರಿಕೆಯಾಗಿ 82,755.51ಕ್ಕೆ ತೃಪ್ತಿಪಟ್ಟಿತು. ಅದೇ ರೀತಿ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 200.40 ಅಂಕ ಏರಿಕೆಯಿಂದ 25,244.75ಕ್ಕೆ ಜಿಗಿಯಿತು.ಸೆನ್ಸೆಕ್ಸ್‌ನಲ್ಲಿ ಟೈಟನ್‌, ಮಹೀಂದ್ರಾ, ಇನ್ಫೋಸಿಸ್‌, ಟಿಸಿಎಸ್‌ ಷೇರುಗಳು ಲಾಭದಲ್ಲಿ, ಭಾರತ್‌ ಎಲೆಕ್ಟ್ರಾನಿಕ್ಸ್‌, ಕೊಟಕ್‌ ಮಹೀಂದ್ರಾ, ಆ್ಯಕ್ಸಿಸ್‌ ಬ್ಯಾಂಕ್‌ ನಷ್ಟದಲ್ಲಿ ಅಂತ್ಯವಾಯಿತು.

ವಿಶ್ವದಲ್ಲಿ ದಕ್ಷಿಣ ಕೊರಿಯಾ, ಜಪಾನ್‌, ಚೀನಾ ಮಾರುಕಟ್ಟೆಗಳು ಲಾಭ ಕಂಡವು.

ಉ.ಪ್ರ.ದ ಫತೇಹಾಬಾದ್‌ ಹೆಸರು ಸಿಂದೂರಪುರ ಎಂದು ಬದಲು: ಶಿಫಾರಸು

ಆಗ್ರಾ: ಉತ್ತರ ಪ್ರದೇಶದ ಆಗ್ರಾ ಬಳಿಯ ಫತೇಹಾಬಾದ್‌ ಪಟ್ಟಣವನ್ನು ಸಿಂದೂರಪುರ ಮತ್ತು ಅಲ್ಲಿಯ ಬಾದ್‌ಶಾಹಿ ಬಾಗ್‌ ಪ್ರದೇಶವನ್ನು ಬ್ರಹ್ಮಪುರ ಎಂದು ಪದಲಿಸಲು ಇಲ್ಲಿನ ಜಿಲ್ಲಾ ಪಂಚಾಯಿತಿ ತೀರ್ಮಾನಿಸಿದೆ.ಈ ಕುರಿತು ಸೋಮವಾರ ನಡೆದ ಆಗ್ರಾ ಜಿಲ್ಲಾ ಪಂಚಾಯಿತಿ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಮಂಜು ಭದೋರಿಯಾ ಮಂಡಿಸಿದ ಪ್ರಸ್ತಾವ ಅವಿರೋಧವಾಗಿ ಅಂಗೀಕಾರವಾಯಿತು. ಈಗ ಪ್ರಸ್ತಾವದ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ.

ಈಗಿನ ಹೆಸರುಗಳು ಗುಲಾಮಗಿರಿ ಸಂಕೇತವಾಗಿವೆ. ಪಟ್ಟಣವನ್ನು ಈ ಮುನ್ನ ಸಮುಗಢದೆಂದು ಕರೆಯಲಾಗುತ್ತಿತ್ತು. ನಂತರ ಅದು ಫತೇಹಾಬಾದ್‌ ಆಗಿ ಬದಲಾಗಿತ್ತು ಎಂದು ಭದೋರಿಯಾ ಹೇಳಿದ್ದಾರೆ.

ಬೇಲ್‌ ಸಿಕ್ಕ 2 ತಿಂಗಳ ಬಳಿಕ ಕೈದಿ ಬಿಡುಗಡೆ!

ನವದೆಹಲಿ: ಮತಾಂತರ ವಿರೋಧಿ ಕಾನೂನಿನಡಿ ಬಂಧಿತ ವ್ಯಕ್ತಿಗೆ ಜಾಮೀನು ಸಿಕ್ಕರೂ, ಉತ್ತರ ಪ್ರದೇಶ ಸರ್ಕಾರವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಬಿಡುಗಡೆಗೆ ಸುಮಾರು 2 ತಿಂಗಳಷ್ಟು ವಿಳಂಬ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಉತ್ತರಪ್ರದೇಶದ ಜೈಲು ಪ್ರಾಧಿಕಾರವನ್ನು ಸುಪ್ರೀಂ ಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡು 5 ಲಕ್ಷ ರು. ದಂಡ ವಿಧಿಸಿದೆ.

ಈ ದಂಡಮೊತ್ತವನ್ನು ಆರೋಪಿಗೆ ಪರಿಹಾರವಾಗಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ವಿಳಂಬ ನೀತಿ ಕುರಿತು ನ್ಯಾಯಾಂಗ ತನಿಖೆಗೂ ಆದೇಶಿಸಿದೆ.ಆಗಿದ್ದೇನು?:

ಹಿಂದೂ ಹುಡುಗಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬನನ್ನು ಮತಾಂತರ ವಿರೋಧಿ ಕಾನೂನಿನಡಿ ಬಂಧಿಸಿ, ಗಾಜಿಯಾಬಾದ್‌ ಜೈಲಲ್ಲಿಡಲಾಗಿತ್ತು. ಪ್ರಕರಣದಲ್ಲಿ ಆರೋಪಿಗೆ ಏ.29ರಂದು ಸುಪ್ರೀಂ ಕೋರ್ಟ್‌ ಜಾಮೀನು ನೀಡಿತ್ತು.

 ಬಳಿಕ ಮೇ 27ರಂದು ಸ್ಥಳೀಯ ನ್ಯಾಯಾಲಯ ‘ರಿಲೀಸ್ ಆರ್ಡರ್’ ನೀಡಿತ್ತು.ಆದರೆ ಇಷ್ಟಾದರೂ ಬೇಲ್‌ ಆದೇಶದಲ್ಲಿನ ಸಣ್ಣ ತಾಂತ್ರಿಕ ಕಾರಣ ಮುಂದಿಟ್ಟುಕೊಂಡು ಆರೋಪಿಯನ್ನು ಜೈಲಲ್ಲೇ ಇರಿಸಲಾಗಿತ್ತು. ಈ ವಿಚಾರ ಮಂಗಳವಾರ ನ್ಯಾ.ಕೆ.ವಿ.ವಿಶ್ವನಾಥನ್ ಮತ್ತು ಕೋಟೀಶ್ವರ್‌ ಸಿಂಗ್‌ ಅವರಿದ್ದ ಪೀಠದ ಗಮನಕ್ಕೆ ಬಂದಿದ್ದು, ಅದು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹೀಗಾಗಿ ಜೂ.24ಕ್ಕೆ ಆತನನ್ನು ಬಿಡುಗಡೆ ಮಾಡಲಾಗಿದೆ. ಬುಧವಾರವೂ ಈ ಬಗ್ಗೆ ವಿಚಾರನೆ ನಡೆಸಿದ್ದು ಜೈಲು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ತನಿಖೆಗೆ ಆದೇಶಿಸಿದೆ ಹಾಗೂ ದಂಡ ವಿಧಿಸಿದೆ.

ಹಿಮಾಚಲ ಮೇಘಸ್ಫೋಟಕ್ಕೆ 2 ಸಾವು: 20 ನೀರುಪಾಲು

ಶಿಮ್ಲಾ: ಹಿಮಾಚಲ ಪ್ರದೇಶದ ಕಂಗ್ರಾದಲ್ಲಿ ಬುಧವಾರ ಮೇಘಸ್ಫೋಟ ಸಂಭವಿಸಿದ್ದು, ಇದರಿಂದಾಗಿ ಬಿಯಾಸ್‌ ನದಿಯಲ್ಲಿ ದಿಢೀರ್‌ ಪ್ರವಾಹ ಕಾಣಿಸಿಕೊಂಡಿದೆ. ಇದರಿಂದಾಗಿ ನೀರಿನಲ್ಲಿ ಕೊಚ್ಚಿಹೋಗಿ ಇಬ್ಬರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.ಶನಿವಾರ ಕುಲ್ಲು ಜಿಲ್ಲೆಯ ಜೀವ ನಲ್ಲಾ, ರೆಹ್ಲಾ ಬಿಹಾಲ್‌ ಮತ್ತು ಶಿಲಾಗಢ ಎಂಬಲ್ಲಿ ಮೇಘಸ್ಫೋಟವಾಗಿದೆ. ಇದರಿಂದಾಗಿ ಬಿಯಾಸ್‌ ನದಿ ಉಕ್ಕಿ, ರಾಷ್ಟ್ರೀಯ ಹೆದ್ದಾರಿ, ಶಾಲಾ, ಮನೆಗಳ ಕಟ್ಟಡವನ್ನು ಧ್ವಂಸಗೊಳಿಸಿದೆ. ಎಸ್‌ಡಿಆರ್‌ಎಫ್‌ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ