ವೋಟರ್‌ ಐಡಿ: ಕಪ್ಪು ಬಿಳುಪು ಫೋಟೋವನ್ನು ಕಲರ್‌ಗೆ ಬದಲಾಯಿಸಿಕೊಳ್ಳಲು ಅವಕಾಶ

By Kannadaprabha NewsFirst Published Sep 2, 2019, 11:02 AM IST
Highlights

ಮತದಾರರ ಗುರುತಿನ ಚೀಟಿಯಲ್ಲಿ ಕಪ್ಪು ಬಿಳುಪು ಇರುವ ಭಾವಚಿತ್ರವನ್ನು ಇನ್ನು ಮುಂದೆ ಕಲರ್‌ ಫೋಟೋಗೆ ಬದಲಾಯಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್‌ ಹೇಳಿದ್ದಾರೆ.

ಬೆಂಗಳೂರು (ಸೆ. 02): ಮತದಾರರ ಗುರುತಿನ ಚೀಟಿಯಲ್ಲಿ ಕಪ್ಪು ಬಿಳುಪು ಇರುವ ಭಾವಚಿತ್ರವನ್ನು ಇನ್ನು ಮುಂದೆ ಕಲರ್‌ ಫೋಟೋಗೆ ಬದಲಾಯಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್‌ ಹೇಳಿದ್ದಾರೆ.

ಭಾನುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರದಲ್ಲಿ ಭಾರತೀಯ ಚುನಾವಣಾ ಆಯೋಗ ಆಯೋಜಿಸಿದ್ದ ‘ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020’ ಹಾಗೂ ‘ಮತದಾರರ ಪಟ್ಟಿಯ ಪರಿಶೀಲನಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೆ.1ರಿಂದ ಅಕ್ಟೋಬರ್‌ 15ರವರೆಗೆ ಒಟ್ಟು 45 ದಿನ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯಲಿದೆ.

ಮತದಾರರ ಪಟ್ಟಿಯಲ್ಲಿ ಹೆಸರಿಲ್ವಾ? ಇಂದಿನಿಂದ ಸೇರಿಸಿ

ವಿಶೇಷವಾಗಿ ಮತದಾರರ ಗುರುತಿನ ಚೀಟಿಯಲ್ಲಿ (ಎಪಿಕ್‌ ಕಾರ್ಡ್‌) ಇರುವ ಹಳೆಯ ಕಪ್ಪು ಬಿಳುಪಿನ ಭಾವಚಿತ್ರವನ್ನು ಬಣ್ಣದ ಭಾವಚಿತ್ರಕ್ಕೆ ಬದಲಾಯಿಸಿಕೊಳ್ಳಬಹುದು. ಈ ಅವಧಿಯಲ್ಲಿ ನಾಗರಿಕರು ಮತದಾರ ಪಟ್ಟಿಹಾಗೂ ಮತದಾನ ಗುರುತಿನ ಚೀಟಿಯಲ್ಲಿ ಇರುವ ಲೋಪಗಳನ್ನು ಸರಿಪಡಿಸಿಕೊಳ್ಳುವುದು, ಹೊಸದಾಗಿ ಹೆಸರು ಸೇರ್ಪಡೆ, ಪಟ್ಟಿಯಿಂದ ತೆಗೆದುಹಾಕುವಿಕೆ, ಪರಿಶೀಲನೆ ಮತ್ತು ದೃಢೀಕರಣ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಶೇ.1ರಷ್ಟುನಕಲಿ ಮತದಾರರು:

ಮತದಾರರ ಪಟ್ಟಿಯಲ್ಲಿ ಶೇ.1ಕ್ಕಿಂತಲೂ ಹೆಚ್ಚು ನಕಲಿ ಮತದಾರರಿದ್ದಾರೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ. ಸದ್ಯದ ಚುನಾವಣಾ ಪಟ್ಟಿಯಲ್ಲಿ ಪುರುಷ- ಮಹಿಳೆ ಮತದಾರರ ಸಂಖ್ಯೆ ಸಾವಿರಕ್ಕೆ 979 ಇದೆ. ಅರ್ಹ ಯುವ ಮತದಾರರ ಸಂಖ್ಯೆ 11 ಲಕ್ಷಕ್ಕೂ ಅಧಿಕ ಇದೆ.

ಆದರೆ, ನೋಂದಣಿ ಮಾಡಿಕೊಂಡಿರುವ ಸಂಖ್ಯೆ ಸುಮಾರು 10 ಲಕ್ಷ ಇದೆ. ಈ ಕಾರ್ಯಕ್ರಮದ ಮೂಲಕ ಯುವ ಮತದಾರರ ನೋಂದಣಿಯನ್ನು ಶೇ.100ರಷ್ಟುಮಾಡಲು ಯತ್ನಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್‌ ಸಿನ್ಹಾ ಮಾತನಾಡಿ, ಒಂದು ಕುಟುಂಬದ ಎಲ್ಲ ಮತದಾರರನ್ನು ಒಂದೇ ಮತಗಟ್ಟೆಯಲ್ಲಿ ಸೇರಿಸಲು ಅವಕಾಶ ಇದೆ. ಆನ್‌ಲೈನ್‌ ಮೂಲಕವೇ ಇದನ್ನು ಮಾಡಿಕೊಳ್ಳಬಹುದು ಎಂದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಡಿಲೀಟ್, ತಿದ್ದುಪಡಿಗೆ ಅವಕಾಶ

ಹೊಸ ಗುರುತಿನ ಚೀಟಿ ಜ.25 ಕ್ಕೆ

ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಹೊಸ ಮತದಾರರ ಗುರುತಿನ ಚೀಟಿಯನ್ನು ಮುಂಬರುವ ಜನವರಿ 25ರ ‘ರಾಷ್ಟ್ರೀಯ ಮತದಾರರ ದಿನಾಚರಣೆ’ಯಂದು ವಿತರಣೆ ಮಾಡಲಾಗುವುದು. ಕಳೆದ ಜನವರಿ 25 ರಂದು ರಾಜ್ಯದಲ್ಲಿ 6 ಲಕ್ಷ ಮತದಾರ ಚೀಟಿ ವಿತರಣೆ ಮಾಡಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಂಜೀವ್‌ ಕುಮಾರ್‌ ಹೇಳಿದರು.

 

ಆನ್‌ಲೈನ್‌ ಪರಿಷ್ಕರಣೆ

ಮತದಾರರ ಸಹಾಯವಾಣಿ ಮೊಬೈಲ್‌ ಆ್ಯಪ್‌, ಎನ್‌ವಿಎಸ್‌ಪಿ ಫೋರ್ಟಲ್‌ (www. nvsp.in ) ಹಾಗೂ 1950 ಸಹಾಯವಾಣಿ ಮೂಲಕವೂ ಪರಿಷ್ಕರಣೆ ಮಾಡಿಕೊಳ್ಳಬಹುದು.

ಮತದಾರ ಪಟ್ಟಿಪರಿಷ್ಕರಣೆ ಎಲ್ಲಿ?

* ಸಾಮಾನ್ಯ ಸೇವಾ ಕೇಂದ್ರ

* ಮತದಾರರ ನೋಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ

* ಬೆಂಗಳೂರು ಒನ್‌

* ಕರ್ನಾಟಕ ಒನ್‌

* ಅಟಲ್‌ ಜನ ಸ್ನೇಹಿ ಕೇಂದ್ರ

* ಬಾಪೂಜಿ ಸೇವಾ ಕೇಂದ್ರ(ಗ್ರಾಮ ಪಂಚಾಯಿತ್‌)

* ಮತಗಟ್ಟೆಅಧಿಕಾರಿ

click me!