ಜಾಧವ್‌ಗೆ ರಾಯಭಾರ ನೆರವು : ಒತ್ತಡಕ್ಕೆ ಮೆತ್ತಗಾದ ಪಾಕ್

By Kannadaprabha NewsFirst Published Sep 2, 2019, 10:43 AM IST
Highlights

ಭಾರತದ ಒತ್ತಡಕ್ಕೆ ಮೆತ್ತಗಾಗಿರುವ ನೆರೆಯ ಪಾಕಿಸ್ತಾನ ಬೇಹುಗಾರಿಕೆ ನಡೆಸಿದ ಆರೋಪದಡಿ ತಾನು ಬಂಧಿಸಿದ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್‌ ಜಾಧವ್‌(49) ಅವರಿಗೆ ರಾಯಭಾರಿ ನೆರವು ನೀಡಲು ಪಾಕಿಸ್ತಾನ ಮುಂದಾಗಿದೆ. 

ಇಸ್ಲಾಮಾಬಾದ್‌ (ಆ.02): ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಒತ್ತಡಕ್ಕೆ ಮೆತ್ತಗಾಗಿರುವ ನೆರೆಯ ಪಾಕಿಸ್ತಾನ ಬೇಹುಗಾರಿಕೆ ನಡೆಸಿದ ಆರೋಪದಡಿ ತಾನು ಬಂಧಿಸಿದ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್‌ ಜಾಧವ್‌(49) ಅವರಿಗೆ ರಾಯಭಾರಿ ನೆರವು ನೀಡಲು ಪಾಕಿಸ್ತಾನ ಮುಂದಾಗಿದೆ. ಈ ಪ್ರಕಾರ ಸೆ.2ರ ಸೋಮವಾರದಂದು ಭಾರತದ ರಾಯಭಾರಿಗಳು ಜಾಧವ್‌ ಅವರನ್ನು ಭೇಟಿಯಾಗಬಹುದಾಗಿದೆ.

ಈ ಬಗ್ಗೆ ಭಾನುವಾರ ಟ್ವೀಟ್‌ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್‌ ಫೈಸಲ್‌, ‘ವಿಯೆನ್ನಾ ಒಪ್ಪಂದ, ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶ ಹಾಗೂ ಪಾಕಿಸ್ತಾನದ ಕಾನೂನುಗಳ ಪ್ರಕಾರ ಭಯೋತ್ಪಾದನೆ ಹಾಗೂ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧನವಾದ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ಸೆ.2ರಂದು ರಾಯಭಾರ ನೆರವು ನೀಡಲಾಗಿದೆ’ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದಂತೆ ಜಾಧವ್‌ ಅವರಿಗೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಆ.1ರಂದೇ ರಾಯಭಾರಿ ನೆರವು ನೀಡಲು ಮುಂದಾಗಿತ್ತು. ಆದರೆ, ಯಾವುದೇ ಹಸ್ತಕ್ಷೇಪವಿಲ್ಲದೆ ಜಾಧವ್‌ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಬೇಕು ಎಂಬ ಭಾರತದ ಕೋರಿತ್ತು. ಆದರೆ, ಈ ಕೋರಿಕೆಯನ್ನು ನಿರಾಕರಿಸಿದ್ದ ಪಾಕಿಸ್ತಾನ, ಪಾಕಿಸ್ತಾನದ ಅಧಿಕಾರಿಗಳ ಸಮ್ಮುಖದಲ್ಲೇ ಭಾರತದ ಅಧಿಕಾರಿಗಳು ಜಾಧವ್‌ ಅವರನ್ನು ಭೇಟಿಯಾಗಬಹುದು ಎಂದು ಹೇಳಿತ್ತು. ಪಾಕಿಸ್ತಾನದ ಈ ಮೊಂಡುವಾದಕ್ಕೆ ಭಾರತ ವಿರೋಧಿಸಿತ್ತು. ಅಲ್ಲದೆ, ಜಾಧವ್‌ ಭೇಟಿಯಾಗಬಹುದು ಎಂಬ ಪಾಕಿಸ್ತಾನದ ಆಫರ್‌ ಅನ್ನು ಭಾರತ ತಿರಸ್ಕರಿಸಿತ್ತು. ಜೊತೆಗೆ, ವಿಯೆನ್ನಾ ಒಪ್ಪಂದದಂತೆ ಯಾವುದೇ ಹಸ್ತಕ್ಷೇಪವಿಲ್ಲದೆ ಜಾಧವ್‌ ಅವರ ಭೇಟಿಗೆ ಅವಕಾಶ ನೀಡಬೇಕು ಎಂದು ಪಾಕಿಸ್ತಾನದ ಮೇಲೆ ಭಾರತ ತೀವ್ರ ಒತ್ತಡ ತಂದಿತ್ತು.

ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾದ ಭಾರತದ ಪ್ರಜೆ ಜಾಧವ್‌ ಅವರಿಗೆ ಶೀಘ್ರದಲ್ಲೇ ರಾಯಭಾರಿ ನೆರವು ನೀಡಬೇಕು ಎಂದು ಜು.17ರಂದು ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕಿಸ್ತಾನಕ್ಕೆ ಸೂಚನೆ ನೀಡಿತ್ತು.

ಬಲೂಚಿಸ್ತಾನದಲ್ಲಿ ವಿಧ್ವಂಸಕ ಹಾಗೂ ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನ 2016ರಲ್ಲಿ ಕುಲಭೂಷಣ್‌ ಜಾಧವ್‌ ಅವರನ್ನು ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ನೌಕಾ ಸೇನೆಯಿಂದ ನಿವೃತ್ತರಾಗಿರುವ ಜಾಧವ್‌ ಅವರು ಉದ್ಯಮವೊಂದರ ಸ್ಥಾಪನೆಗಾಗಿ ಇರಾನ್‌ಗೆ ತೆರಳಿದ್ದರು. ಈ ವೇಳೆ ಜಾಧವ್‌ ಅವರನ್ನು ಪಾಕಿಸ್ತಾನ ಅಕ್ರಮವಾಗಿ ಅಪಹರಿಸಿದೆ ಎಂದು ಭಾರತ ಆರೋಪಿಸಿದೆ.

click me!