
ಬೆಂಗಳೂರು (ಡಿ.29): ಮಾರ್ಗಶಿರ ಶುಕ್ಲ ವೈಕುಂಠ ಏಕಾದಶಿಗೆ ರಾಜಾಜಿನಗರದ ಇಸ್ಕಾನ್ ಸೇರಿದಂತೆ ವಿವಿಧ ದೇವಾಲಯಗಳು ಸಜ್ಜುಗೊಂ ಡಿವೆ. ದೇವಸ್ಥಾನಗಳಿಗೆ ಬರುವ ಭಕ್ತಾದಿಗಳಿಗೆ ಪ್ರಸಾದವಾಗಿ ನೀಡಲು ಲಕ್ಷಗಟ್ಟಲೆ ಲಡ್ಡುಗಳ ತಯಾರಿ ಭರ್ಜರಿಯಾಗಿ ನಡೆದಿದೆ. ಇದೇ ವೇಳೆ ಅರ್ನಾ ಸೇವಾ ಟ್ರಸ್ಟ್ ಸಹ ಶ್ರೀನಿವಾಸ ದೇವಸ್ಥಾನಗಳಿಗೆ ಉಚಿತವಾಗಿ 2 ಲಕ್ಷ ಲಡ್ಡು ವಿತರಿಸಲು ನಿರ್ಧರಿಸಿದೆ.
ಇಸ್ಕಾನ್‌ನ ರಾಧಾ ಕೃಷ್ಣ ಮಂದಿರದಲ್ಲಿ ಶ್ರೀನಿವಾಸ ಗೋವಿಂದನಿಗೆ ಮಹಾಭಿಷೇಕ, ಲಕ್ಷಾರ್ಚನೆ, ತೋಮಾಲೆ ಸೇವೆ, ಕದಲಿ ಫಲ ಪಾಯಸ ಸೇವೆ, ಏಕಾಂತ ಸೇವೆ ಹಾಗೂ ಇಡೀ ದಿನ ಸಂಗೀತ ಸೇವೆ ಹಮ್ಮಿಕೊಳ್ಳಲಾಗಿದೆ. ಮುಂಜಾನೆ 3 ರಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 5 ಗಂಟೆಯಿಂದ ರಾಧಾ ಕೃಷ್ಣ ಚಂದ್ರರ ಪಲ್ಲಕ್ಕಿ ಉತ್ಸವ, 5.45 ಕ್ಕೆ ವೈಕುಂಠ ದ್ವಾರ ಪೂಜೆ, ನಂತರ ಕಲ್ಯಾಣೋತ್ಸವ, ರಾತ್ರಿ 10.30 ಕ್ಕೆ ಶಯನ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ. ಈ ಬಾರಿ ವೈಕುಂಠ ದ್ವಾರದಲ್ಲಿ ‘ಶ್ರೀ ಗೋವಿಂದನೊಂದಿಗೆ ಸೆಲ್ಫಿ’ ಆಕರ್ಷಣೆಯಾಗಿದೆ. ಅಭಿಷೇಕದ ನಂತರ 108 ಬಗೆ ಬಗೆಯ ತಿನಿಸುಗಳ ನೈವೇದ್ಯ ಮಾಡಲಾಗುತ್ತದೆ. ವೈಕುಂಠ ಏಕಾದಶಿ ಪ್ರಯುಕ್ತ ದೇವರ ದರ್ಶನ ಪಡೆಯಲು ಆಗಮಿಸುವ ಭಕ್ತಾದಿಗಳಿಗೆ ವಿತರಿಸಲು 10 ಟನ್ ಸಕ್ಕರೆ ಪೊಂಗಲ್ ಮತ್ತು 1 ಲಕ್ಷ ಲಡ್ಡು ತಯಾರಿಸಲಾಗಿದೆ.
ನಗರದ ಅರ್ನಾ ಸೇವಾ ಟ್ರಸ್ಟ್ ಬೆಂಗಳೂರಿನ ಶ್ರೀನಿವಾಸ ದೇವಸ್ಥಾನಗಳಿಗೆ ಲಡ್ಡು ಗಳನ್ನು ವಿತರಿಸುವ ಮಹತ್ವದ ಕಾರ್ಯ ಕ್ರಮಕ್ಕೆ ಯಲಹಂಕ ಉಪನಗರದ ದಕ್ಷಿಣ ಕನ್ನಡ ವಿಶ್ವ ಬ್ರಾಹ್ಮಣ ಸಂಘದ ಮೈದಾನದ ಆವರಣದಲ್ಲಿ ಟ್ರಸ್ಟ್ ಅಧ್ಯಕ್ಷ ಕೇಶವರಾಜಣ್ಣ ಅವರು ಗುರುವಾರ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಕೇಶವ ರಾಜಣ್ಣ, ವೈಕುಂಠ ಏಕಾದಶಿಯ ಶುಭ ದಿನದಲ್ಲಿ ೨ ಲಕ್ಷ ಲಾಡುಗಳನ್ನು ಎಲ್ಲಾ ಭಕ್ತಾದಿಗಳಿಗೆ ಪ್ರಸಾದವಾಗಿ ನೀಡಲಾಗುವುದು. ಶ್ರೀನಿವಾಸ ಪ್ರಿಯವಾದ ಲಡ್ಡುಗಳನ್ನು ದೇವಸ್ಥಾನಗಳಿಗೆ ವಿತರಿಸ ಲಾಗುವುದು. ದೇವಸ್ಥಾನಕ್ಕೆ ಲಡ್ಡುಗಳು ಬೇಕಾದಲ್ಲಿ 080-48519906 ಸಂಪರ್ಕಿಸಬಹುದು ಎಂದು ತಿಳಿಸಿದರು.
ವೈಕುಂಠ ಏಕಾದಶಿ: ಎಲ್ಲೆಲ್ಲಿ ಏನು? ವೈಕುಂಠ ಏಕಾದಶಿ ಆಚರಣೆಗೆ ನಗರದ ವಿಷ್ಣು, ನಾರಾಯಣ, ಲಕ್ಷ್ಮಿ ವೆಂಕಟೇಶ್ವರ ಸೇರಿದಂತೆ ಇನ್ನಿತರೆ ದೇವಾಲಯಗಳಲ್ಲಿ ಸಕಲ ಸಿದ್ಧತೆ ನಡೆದಿದೆ. ವೈಯ್ಯಾಲಿಕಾವಲ್‌ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನ(ಟಿಟಿಡಿ), ಶ್ರೀನಗರದ ವೆಂಕಟರಮಣಸ್ವಾಮಿ ದೇವಾಲಯ, ರಾಜಾಜಿನಗರದ ಕೈಲಾಸ ವೈಕುಂಠ ಮಹಾಕ್ಷೇತ್ರ, ವಿಶ್ವೇಶ್ವರಪುರಂನ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನ, ಆರ್.ಟಿ.ನಗರ ವಿಷ್ಣು ದೇವಾಲಯ, ಎಂ.ಜಿ. ರೈಲ್ವೆ ಕಾಲೋನಿಯ ವಿನಾಯಕ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಶ್ರೀನಿವಾಸನಗರದ ಲಕ್ಷ್ಮಿ ವೆಂಕಟೇಶ್ವರ ಹಾಗೂ ಪ್ರಸನ್ನಾಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ನಗರದ ವಿವಿಧ ದೇವಾಲಯಗಳಲ್ಲಿ ಪಂಚಾಮೃತ, ಅಭಿಷೇಕಗಳು, ರುದ್ರಾಭಿಷೇಕ, ವಿಶೇಷ ಅಲಂಕಾರ, ದೀಪಾರಾಧನೆ, ವೈಕುಂಠ ದ್ವಾರದ ಪೂಜೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.