ವೈದ್ಯನ ಮನೇಲಿ 2000ಕ್ಕೂ ಹೆಚ್ಚು ಭ್ರೂಣ?

By Web DeskFirst Published Sep 16, 2019, 7:47 AM IST
Highlights

ಮೃತ ವೈದ್ಯನ ಮನೇಲಿ 2000ಕ್ಕೂ ಹೆಚ್ಚು ಭ್ರೂಣ: ಅಕ್ರಮ ಗರ್ಭಪಾತ ಗುಮಾನಿ| ಪ್ರಸಿದ್ಧ ಗರ್ಭಪಾತದ ವೈದ್ಯ ಎನಿಸಿಕೊಂಡಿದ್ದ ಉಲ್‌ರಿಚ್‌ ಕ್ಲೊಪ್‌ಫರ್‌

ವಿಲ್‌ ಕೌಂಟಿ[ಸೆ.16]: ಅಮೆರಿಕದ ಇಂಡಿಯಾನದ ಪ್ರಸಿದ್ಧ ಗರ್ಭಪಾತ ವೈದ್ಯ ಉಲ್‌ರಿಚ್‌ ಕ್ಲೊಪ್‌ಫರ್‌ ಅವರ ನಿಧನದ ಬೆನ್ನಲ್ಲೇ, ಅವರ ಒಡೆತನದ ಆಸ್ತಿಗಳಲ್ಲಿ ವೈದ್ಯಕೀಯವಾಗಿ ಸಂರಕ್ಷಿಸಿಡಲಾದ 2200ಕ್ಕೂ ಹೆಚ್ಚು ಭ್ರೂಣಗಳು ಪತ್ತೆಯಾಗಿವೆ.

ಪ್ರಸಿದ್ಧ ಗರ್ಭಪಾತದ ವೈದ್ಯ ಎನಿಸಿಕೊಂಡಿದ್ದ ಉಲ್‌ರಿಚ್‌ ಕ್ಲೊಪ್‌ಫರ್‌ ಅವರು ಸೆ.3ರಂದು ಸಾವನ್ನಪ್ಪಿದ್ದರು. ಆ ನಂತರ, ಅವರ ಕುಟುಂಬಸ್ಥರು ಅವರ ಆಸ್ತಿಯನ್ನು ನೋಡಲು ಆಗಮಿಸಿದ್ದು, ಈ ವೇಳೆ ವೈದ್ಯಕೀಯವಾಗಿ ಸಂರಕ್ಷಣೆ ಮಾಡಲಾದ ಬರೋಬ್ಬರಿ 2246 ಭ್ರೂಣಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಈ ಕುರಿತು ಸ್ಥಳೀಯ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ತನಿಖಾಧಿಕಾರಿ, ‘ಈ ಮಾಹಿತಿ ಸ್ವೀಕರಿಸಿದಾಕ್ಷಣ ಸ್ಥಳಕ್ಕೆ ಭೇಟಿ ನೀಡಿ ಭ್ರೂಣಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಗಂಭೀರ ಪ್ರಕರಣದ ವಿಚಾರಣೆಗೆ ವೈದ್ಯ ಕ್ಲೊಪ್‌ಫರ್‌ ಕುಟುಂಬ ಸಂಪೂರ್ಣವಾಗಿ ಸಹಕರಿಸುತ್ತಿದೆ. ಈ ಆಸ್ತಿಯಲ್ಲಿ ವೈದ್ಯಕೀಯ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ ಎಂಬ ಸಾಕ್ಷ್ಯಾಧಾರ ಲಭ್ಯವಾಗಿಲ್ಲ’ ಎಂದು ಹೇಳಿದ್ದಾರೆ.

ಕ್ಲೊಪ್‌ಫರ್‌ 1973ರಿಂದಲೂ ಗರ್ಭಿಣಿಯರಿಗೆ ಗರ್ಭಪಾತದ ಸೇವೆ ನೀಡುತ್ತಿದ್ದರು. ಭ್ರೂಣಕ್ಕೆ ಅಗತ್ಯವಿರುವ ದಾಖಲೆಗಳ ವಿಚಾರದಲ್ಲಿ ಕ್ಲೊಪ್‌ಫರ್‌ ಕ್ಲಿನಿಕ್‌ ಅಕ್ರಮ ಎಸಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿದ ವೈದ್ಯಕೀಯ ಮಂಡಳಿ 2016ರಲ್ಲಿ ಕ್ಲೊಪ್‌ಫರ್‌ ಅವರ ಗರ್ಭಪಾತದ ಪರವಾನಗಿಯನ್ನು ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆ ನಂತರ ಅಕ್ರಮವಾಗಿ ಗರ್ಭಪಾತ ಮಾಡಿದ್ದರೆ ಎಂಬ ಅನುಮಾನಗಳು ವ್ಯಕ್ತವಾಗಿದೆ.

click me!