ಹಿಂದಿ ದೇಶ ಒಗ್ಗೂಡಿಸುತ್ತದೆ ಎನ್ನುವುದು ಅಸಂಬದ್ಧ: ಕೇರಳ ಸಿಎಂ

By Kannadaprabha NewsFirst Published Sep 16, 2019, 7:25 AM IST
Highlights

ಒಂದು ದೇಶ ಒಂದು ಭಾಷೆ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ದಕ್ಷಿಣ ಭಾರತದ ರಾಜ್ಯಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇದು ಹಿಂದಿಯೇತರ ಮಾತೃಭಾಷಿಕರ ಮೇಲೆ ಯುದ್ಧ ಸಾರಿದಂತಾಗಿದೆ ಎಂದು ಹೇಳಿದ್ದಾರೆ.

ತಿರುವನಂತಪುರಂ/ಚೆನ್ನೈ [ಸೆ.16]: ಒಂದು ದೇಶ ಒಂದು ಭಾಷೆ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ದಕ್ಷಿಣ ಭಾರತದ ರಾಜ್ಯಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೇಳಿಕೆ ದೇಶದ ಏಕತೆಗೆ ವಿರುದ್ಧವಾಗಿದೆ ಎಂದು ವಿವಿಧ ಪಕ್ಷಗಳ ನಾಯಕರು ಕಟು ಟೀಕೆ ಮಾಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇದು ಹಿಂದಿಯೇತರ ಮಾತೃಭಾಷಿಕರ ಮೇಲೆ ಯುದ್ಧ ಸಾರಿದಂತಾಗಿದೆ ಎಂದು ಹೇಳಿದ್ದಾರೆ. ಡಿಎಂಕೆ ನಾಯಕ ಸ್ಟಾಲಿನ್‌ ಹಿಂದಿ ಹೇರಿಕೆ ರಾಷ್ಟೀಯ ಏಕತೆಗೆ ವಿರುದ್ಧವಾಗಿದ್ದು, ತಕ್ಷಣವೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಪಾಂಡಿಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಇದೊಂದು ಕುಟಿಲ ತಂತ್ರ ಎಂದು ಆರೋಪಿಸಿದ್ದಾರೆ.

ಮಾತೃಭಾಷೆ ಮೇಲಿನ ಯುದ್ಧ: ಹಿಂದಿ ಹೇರಿಕೆ ವಿರೋಧಿಸಿ ತಮ್ಮ ಫೇಸ್ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿರುವ ಪಿಣರಾಯಿ ವಿಜಯನ್‌, ಹಿಂದಿ ಹೇರಿಕೆ ವಿರುದ್ಧ ಬೇರೆ ಕಡೆ ಪ್ರತಿಭಟನೆಗಳು ಭುಗಿಲೆದ್ದರೂ ಕೂಡ, ಹಿಂದಿ ಹೇರಿಕೆ ಅಜೆಂಡಾದಿಂದ ಅಮಿತ್‌ ಶಾ ಹಿಂದೆ ಸರಿದಂತೆ ಕಾಣುತ್ತಿಲ್ಲ. ಇದೊಂದು ವ್ಯವಸ್ಥಿತ ಸಂಚಾಗಿದ್ದು, ಈ ವಿಚಾರವನ್ನು ಮುನ್ನಲೆಗೆ ತರುವ ಮೂಲಕ ದೇಶದಲ್ಲಿನ ನೈಜ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಸಂಘ ಪರಿವಾರ ಹೊಸದನ್ನು ಸೃಷ್ಟಿಮಾಡಲು ಹೊರಟಿದೆ ಎನ್ನುವುದರ ಮುನ್ಸೂಚನೆಯಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಹಿಂದಿ ದೇಶವನ್ನು ಒಗ್ಗೂಡಿಸುತ್ತದೆ ಎನ್ನುವ ವಾದ ಪೂರ್ಣ ಅಸಂಬದ್ಧವಾಗಿದ್ದು, ಹಿಂದಿ ಬಹುಪಾಲು ಭಾರತೀಯರ ಮಾತೃಭಾಷೆಯಲ್ಲ. ದಕ್ಷಿಣ, ಪಶ್ಚಿಮ ಹಾಗೂ ಪೂರ್ವ ಭಾಗಗಳಲ್ಲಿ ಜನ ಹಿಂದಿ ಮಾತನಾಡುವುದಿಲ್ಲ. ಅಲ್ಲಿ ಹಿಂದಿಯನ್ನು ಪ್ರಾಥಮಿಕ ಭಾಷೆಯನ್ನಾಗಿ ಮಾಡುವುದು ಅವರ ಮಾತೃಭಾಷೆಯನ್ನು ಕೊಂದಂತೆ. ಭಾಷೆಯ ವಿಚಾರದಲ್ಲಿ ಯಾವ ಭಾರತೀಯನನ್ನು ಕೂಡ ಅನ್ಯ ಎಂದು ಭಾವಿಸಬಾರದು. ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ. ಭಾಷೆಯ ವಿಚಾರದಲ್ಲಿ ಈಗ ದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಒಡೆದು ಆಳುವ ನೀತಿಯನ್ನು ಸಂಘ ಪರಿವಾರ ಕೈಬಿಟ್ಟು ನೈಜ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೋರಾಟ:ಇನ್ನು ಚೆನ್ನೈನಲ್ಲಿ ತಮಿಳು ನಾಡು ಮಾಜಿ ಸಿಎಂ ಅಣ್ಣಾದುರೈ ಜನ್ಮ ದಿನಾಚರಣೆ ಪ್ರಯುಕ್ತ ಎಂಡಿಎಂಕೆ ಸಂಸ್ಥಾಪಕ ವೈಕೋ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌, ಕೇಂದ್ರ ಸರ್ಕಾರ ನಿರಂಕುಶವಾಗಿ ಹಿಂದಿಯನ್ನು ಹೇರುತ್ತಿದ್ದು ಇದರ ವಿರುದ್ದ ವಿಪಕ್ಷಗಳು ತೀವ್ರ ಹೋರಾಟ ನಡೆಸಲಿದೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ನಾವು ದಿನನಿತ್ಯ ಹೋರಾಟ ನಡೆಸುತ್ತೇವೆ. ನಾವು ಸ್ವಲ್ಪ ಮೈಮರೆತರೂ ಹಿಂದಿಯನ್ನು ಹೇರಿ ತಮಿಳನ್ನು ಸರಾಗವಾಗಿ ಅಳಿಸಿ ಹಾಕುತ್ತಾರೆ ಎಂದು ಹೇಳಿದ್ದಾರೆ. ವಿರೋಧ ವಿದ್ದರೂ ನಿರಂಕುಶವಾಗಿ ಹಿಂದಿಯನ್ನು ಹೇರಲಾಗುತ್ತದೆ ಎಂದು ಆರೋಪಿಸಿರುವ ಅವರು, ನೆಟ್‌ ಪರೀಕ್ಷೆ, ಕಾವೇರಿ ಸಮಸ್ಯೆ, ಯೋಜನೆಗಳು ಸೇರಿ ಎಲ್ಲವನ್ನೂ ಹಿಂದಿಮಯವನ್ನಾಗಿ ಮಾಡಲಾಗಿದೆ. ಇದನ್ನು ತಡೆಯುವುದು ನಮ್ಮ ಸಾಂವಿಧಾನಿಕ ಹಕ್ಕಾಗಿದ್ದು, ಸಂಸತ್ತಿನ ಹೊರಗೂ ಒಳಗೂ ಪ್ರತಿಭಟಿಸಲಾಗುವುದು ಎಂದಿದ್ದಾರೆ.

ಆರೆಸ್ಸೆಸ್‌ ಪ್ರೇರಿತ ಪರಿಕಲ್ಪನೆ: ಅಮಿತ್‌ ಶಾ ಹೇಳಿಕೆಗೆ ಪಾಂಡಿಚೇರಿ ಮಖ್ಯಮಂತ್ರಿ ನಾರಾಯಣಸ್ವಾಮಿ ಕೂಡ ಆಕ್ರೋಶ ವ್ಯಕ್ತ ಪಡಿಸಿದ್ದು, ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರುವುದು ಕುತಂತ್ರ ಹುನ್ನಾರವಾಗಿದೆ ಎಂದಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಬಹು ಭಾಷೆ ಹಾಗೂ ಸಂಸ್ಕೃತಿಯ ಜಾತ್ಯಾತೀತ ರಾಷ್ಟ್ರವಾಗಿದ್ದು, ಹಿಂದಿ ಹೇರಿಕೆಯಿಂದ ಬಹುತ್ವಕ್ಕೆ ಪೆಟ್ಟು ಬೀಳಲಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆರೆಸ್ಸೆಸ್‌ ಪ್ರೇರಿತ ಒಂದು ದೇಶ, ಒಂದು ಭಾಷೆ ಹಾಗೂ ಒಂದು ಧರ್ಮ ಪರಿಕಲ್ಪನೆ ಮುನ್ನಲೆಗೆ ತರುತ್ತಿದೆ ಎಂದು ಆರೋಪಿಸದ್ದಾರೆ. ಸಿಪಿಐಎಂ ಕೂಡ ಶಾ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದು, ಇದರಿಂದ ದೇಶದ ಏಕತೆಗೆ ಕೊಡಲಿ ಏಟು ಬೀಳಲಿದೆ ಎಂದು ಎಚ್ಚರಿಸಿದೆ.

click me!