ಹಿಂದಿ ಹೇರಿಕೆಗೆ ವ್ಯಾಪಕ ವಿರೋಧ

By Kannadaprabha NewsFirst Published Sep 16, 2019, 7:17 AM IST
Highlights

ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಒಂದು ದೇಶ ಒಂದು ಭಾಷೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು [ಸೆ.16]:  ದಕ್ಷಿಣದ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆಗೆ ಯತ್ನಿಸಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ‘ಒಂದು ದೇಶ, ಒಂದು ಭಾಷೆ’ ಎಂಬರ್ಥದಲ್ಲಿ ಹಿಂದಿ ಪರ ನೀಡಿದ್ದ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಮಿತ್‌ ಶಾ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಜೈರಾಂ ರಮೇಶ್‌, ಎಚ್‌.ಕೆ.ಪಾಟೀಲ್‌ ಮತ್ತಿತರರು ದೇಶದಲ್ಲಿ ‘ಒಂದು ದೇಶ, ಒಂದು ಭಾಷೆ ಸಾಧ್ಯವೇ ಇಲ್ಲ’. ಈ ರೀತಿ ಹಿಂದಿಯ ಒತ್ತಡದ ಹೇರಿಕೆಯನ್ನು ಕರ್ನಾಟಕ ಮತ್ತು ಕನ್ನಡಿಗರು ಒಪ್ಪಲ್ಲ ಎಂದು ಕಿಡಿಕಾರಿದ್ದಾರೆ.

ಆದರೆ, ಹಿಂದಿ ಹೇರಿಕೆಗೆ ಯತ್ನಿಸುತ್ತಿದೆ ಎಂಬ ಆರೋಪವನ್ನು ರಾಜ್ಯ ಬಿಜೆಪಿ ಮುಖಂಡರು ಮಾತ್ರ ತಳ್ಳಿಹಾಕಿದ್ದಾರೆ. ನಾವೆಲ್ಲರೂ ಮಾತೃಭಾಷೆ ಕನ್ನಡದ ಪರವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಅಮಿತ್‌ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಹಿಂದಿ ಕುರಿತ ಅವರ ಹೇಳಿಕೆಯನ್ನು ಅಪಾರ್ಥ ಮಾಡಲಾಗಿದೆ, ರಾಜ್ಯದಲ್ಲಿ ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಶಾಗೆ ಪಾಠ ಕಲಿಸಬೇಕು: ಹಿಂದಿ ದೇಶವನ್ನು ಒಗ್ಗೂಡಿಸಬಲ್ಲುದು, ದೇಶಾದ್ಯಂತ ಸಮಾನ ಭಾಷೆ ಇರಲಿ ಎಂದು ದೆಹಲಿಯಲ್ಲಿ ಶನಿವಾರ ಅಮಿತ್‌ ಶಾ ಹೇಳಿಕೊಂಡಿದ್ದರು. ಈ ಹೇಳಿಕೆಯನ್ನು ಮತ್ತೊಮ್ಮೆ ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಮಿತ್‌ ಶಾ ಅವಿಭಜಿತ ಕುಟುಂಬದಲ್ಲಿರುವ ದುಷ್ಟನಂತೆ. ಪ್ರತಿ ಬಾರಿಯೂ ಒಗ್ಗಟ್ಟು ಒಡೆಯುವ ದಾರಿ ಹುಡುಕುತ್ತಾರೆ. ಅವರಿಗೆ ಸೂಕ್ತ ಪಾಠ ಕಲಿಸಬೇಕಾಗಿದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಯನ್ನು ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್‌ ಕೂಡ ಬೆಂಬಲಿಸಿದ್ದು, ‘ದೇಶದಲ್ಲಿ ಒಂದು ಕಾನೂನು, ಒಂದು ಚುನಾವಣೆ ನಡೆಯಬಹುದು. ಆದರೆ, ಒಂದು ದೇಶ, ಒಂದು ಭಾಷೆ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ, ಇದು ಬಹು ಸಂಸ್ಕೃತಿಯ ದೇಶ’ ಎಂದಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್‌.ಕೆ. ಪಾಟೀಲ್‌ ಕೂಡ ಹಿಂದಿ ಹೇರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಕನ್ನಡಿಗರು ಯಾವತ್ತೂ ಒಪ್ಪಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯಿಂದ ಶಾಗೆ ಬೆಂಬಲ: ಅಮಿತ್‌ ಶಾ ಹೇಳಿಕೆಗೆ ರಾಜ್ಯಾದ್ಯಂತ ಟೀಕೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಬಿಜೆಪಿ ಮುಖಂಡರು ಗಟ್ಟಿಧ್ವನಿಯಲ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಅಮಿತ್‌ ಶಾ ಪ್ರತಿಯೊಬ್ಬರೂ ಹಿಂದಿ ಕಲಿಯಲೆಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆಯೇ ಹೊರತು ಕನ್ನಡ ಸೇರಿ ಇತರೆ ಪ್ರಾದೇಶಿಕ ಭಾಷೆ ಕಲಿಯಬೇಡಿ ಎಂದಿಲ್ಲ. ಅವರ ಹೇಳಿಕೆಯನ್ನು ಅನಗತ್ಯ ವಿವಾದ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಜತೆಗೆ, ಹಿಂದಿ ಕಲಿತರೆ ತಪ್ಪೇನು ಎಂದೂ ಪ್ರಶ್ನಿಸಿದ್ದಾರೆ.

ಕೇಂದ್ರ ರಸಗೊಬ್ಬರ ಸಚಿವ ಸದಾನಂದ ಗೌಡ ಕೂಡ ಅಮಿತ್‌ ಶಾ ಬೆಂಬಲಕ್ಕೆ ನಿಂತಿದ್ದಾರೆ. ಕೇಂದ್ರ ಸರ್ಕಾರ ಕನ್ನಡ ವಿರೋಧಿ ಎಂಬ ಆರೋಪವನ್ನು ತಳ್ಳಿಹಾಕಿರುವ ಅವರು, ನಾವು ಎಂದಿಗೂ ಕನ್ನಡ ಪರ ಇದ್ದೇವೆ. ನನ್ನ ಆದ್ಯತೆಯೂ ಕನ್ನಡ ಭಾಷೆ. ಯಾವುದೇ ಒಂದು ನಿರ್ದಿಷ್ಟಭಾಷೆ ಹೇರಿಕೆ ಸರಿಯಲ್ಲ ಎಂದಿದ್ದಾರೆ. ಜತೆಗೆ, ಅಮಿತ್‌ ಶಾ ದೇಶಕ್ಕೊಂದೇ ಸಂವಿಧಾನ, ಕಾನೂನು, ಭಾಷೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಇದು ಹಿಂದಿ ಹೇರಿಕೆ ಅಲ್ಲ. ಇದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ. ರಾಜ್ಯದ ಜನತೆ ಪರ ನಾವೆಲ್ಲರೂ ಇದ್ದೇವೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಕೂಡ ಕೇಂದ್ರ ಸರ್ಕಾರ ಕನ್ನಡ ವಿರೋಧ ಅಲ್ಲ ಎಂದು ಹೇಳಿದ್ದಾರೆ.ಪ್ರಾದೇಶಿಕ ಭಾಷೆ ಕಲಿಯುವುದು ಪ್ರತಿಯೊಬ್ಬರ ಹಕ್ಕು. ಅದರ ಜತೆಗೆ, ಹಿಂದಿ ಕಲಿತರೆ ದೇಶಕ್ಕೇ ಒಳಿತು. ಕನ್ನಡ ಕಲಿತರೆ ಕರ್ನಾಕಟದಲ್ಲಷ್ಟೇ ಇರಬಹುದು, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಹಿಂದಿ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮಿತ್‌ ಶಾ ಪ್ರತಿ ಬಾರಿಯೂ ಒಗ್ಗಟ್ಟು ಒಡೆಯುವ ದಾರಿ ಹುಡುಕುತ್ತಾರೆ. ಅವರಿಗೆ ಸೂಕ್ತ ಪಾಠ ಕಲಿಸಬೇಕಾಗಿದೆ.

ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ

ಒಂದು ಕಾನೂನು, ಒಂದು ಚುನಾವಣೆ ನಡೆಯಬಹುದು. ಆದರೆ, ಒಂದು ದೇಶ, ಒಂದು ಭಾಷೆ ಮಾತನಾಡಲು ಸಾಧ್ಯವಿಲ್ಲ.

-ಜೈರಾಂ ರಮೇಶ್‌, ಕಾಂಗ್ರೆಸ್‌ ಮುಖಂಡ

ಅಮಿತ್‌ ಶಾ ರ ಹೇಳಿಕೆ ದೇಶದಲ್ಲಿ ಹಿಂದಿ ಹೇರುವ ಸ್ಪಷ್ಟಪ್ರಯತ್ನದಂತೆ ಕಾಣುತ್ತಿದೆ. ದರಕ್ಷಿಣ ಭಾರತದ ರಾಜ್ಯಗಳ ಭಾವನೆ ಅರ್ಥ ಮಾಡಿಕೊಳ್ಳದೆ ಹಿಂದಿ ಭಾಷೆ ಹೇರಲಾಗುತ್ತಿದೆ. ಈ ರೀತಿಯ ಒತ್ತಡದ ಹೇರಿಕೆಯನ್ನು ಕರ್ನಾಟಕ, ಕನ್ನಡದ ಜನ ಒಪ್ಪಲ್ಲ.

- ಎಚ್‌.ಕೆ.ಪಾಟೀಲ, ಕಾಂಗ್ರೆಸ್‌ನ ಹಿರಿಯ ಮುಖಂಡ

ದೇಶದಲ್ಲಿ ಯಾವುದೇ ಭಾಷೆ ಕಡ್ಡಾಯ ಮಾಡಲು ಸಾಧ್ಯವೇ ಇಲ್ಲ, ಜನತೆ ಆಯಾ ಪ್ರಾದೇಶಿಕ ಭಾಷೆಗೆ ಹೊಂದಿಕೊಂಡಿರುತ್ತಾರೆ. ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಈ ಭೂಮಿ ಇರುವವರೆಗೆ ಕನ್ನಡ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ. ಮುಸ್ಲಿಮರು, ಪೋರ್ಚುಗೀಸರು ಸೇರಿ ಹಲವರು ಆಡಳಿತ ಮಾಡಿ ಹೋಗಿದ್ದರೂ ಕನ್ನಡ ನಶಿಸಿಲ್ಲ. ಇದು ಕನ್ನಡ ಭಾಷೆಗಿರುವ ಶಕ್ತಿ.

- ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಹಿಂದಿ ಭಾಷೆ ಹೇರಬೇಕು ಅಂತ ಅಮಿತ್‌ ಶಾ ಎಲ್ಲೂ ಹೇಳಿಲ್ಲ. ಶಾ ಭಾಷಣದಲ್ಲಿ ಸ್ಪಷ್ಟತೆಯಿತ್ತು. ಹಿಂದಿ ಭಾಷೆ ಹೇರುತ್ತಾರೆ ಅಂತ ನಮಗೆ ಅನ್ನಿಸಿಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೆ. ದೇಶಕ್ಕೆ ಒಂದು ಭಾಷೆ ಇದ್ದರೆ ಅದಕ್ಕೆ ಒಂದು ಗೌರವ ಇರುತ್ತದೆ. ಹಿಂದಿ ಹೇರುತ್ತಾರೆ ಅಂದರೆ ಯಾರೂ ಸಹಿಸಿಕೊಳ್ಳಲು ತಯಾರಿಲ್ಲ. ನಾವು ಕನ್ನಡಾಭಿಮಾನಿಗಳಾಗಿದ್ದು ಕನ್ನಡದ ಮೇಲೆ ಪ್ರಹಾರ ಮಾಡುವುದನ್ನು ಸಹಿಸುವುದಿಲ್ಲ.

-ಮಾಧುಸ್ವಾಮಿ, ಕಾನೂನು ಸಚಿವ

click me!