ರಾಜ್ಯದಲ್ಲಿ ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ

By Web DeskFirst Published Jun 1, 2019, 7:28 AM IST
Highlights

ರಾಜ್ಯದಲ್ಲಿ ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಇನ್ನು ಕೆಲ ದಿನಗಳಲ್ಲಿ ಇಬ್ಬರೂ ಕೂಡ ಕುಮಾರಸ್ವಾಮಿ ಸಂಫುಟ ಸೇರಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಹೆಚ್ಚಿದೆ. 

ಬೆಂಗಳೂರು :  ಸಂಪುಟ ಪುನಾರಚನೆ- ವಿಸ್ತರಣೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಕಳೆದ ಮೂರು ದಿನಗಳಿಂದ ನಗರದಲ್ಲಿ ಬೀಡುಬಿಟ್ಟಿದ್ದ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸಂಪುಟ ಪುನಾರಚನೆ ಬೇಡ ಎಂಬ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪಟ್ಟಿಗೆ ಮಣಿದಂತೆ ಕಾಣುತ್ತಿದೆ. ಏಕೆಂದರೆ, ಸಂಪುಟ ಪುನಾರಚನೆ ಸದ್ಯಕ್ಕೆ ನಡೆಯುವುದಿಲ್ಲ. ವಿಸ್ತರಣೆ ನಡೆದರೂ, ಕಾಂಗ್ರೆಸ್ಸಿನ ಯಾರೂ ಸಂಪುಟ ಸೇರುವುದಿಲ್ಲ, ಬದಲಾಗಿ ಇಬ್ಬರು ಪಕ್ಷೇತರರು ಮಾತ್ರ ಸಂಪುಟ ಸೇರುವ ಸಾಧ್ಯತೆ ಹುಟ್ಟಿಕೊಂಡಿದೆ.

ಸಂಪುಟ ಪುನಾರಚನೆ-ವಿಸ್ತರಣೆ ಸೇರಿದಂತೆ ಯಥಾ ಸ್ಥಿತಿಯನ್ನು ಬದಲಾಯಿಸುವ ಯಾವುದೇ ಕ್ರಮ ಕೈಗೊಂಡರೂ ಅದರಿಂದ ಮೈತ್ರಿಕೂಟಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ ಎಂಬ ಸಿದ್ದರಾಮಯ್ಯ ಅವರ ಬಿಗಿಪಟ್ಟಿಗೆ ಕಟ್ಟುಬಿದ್ದ ವೇಣುಗೋಪಾಲ್‌, ಯಾವುದೇ ನಿರ್ಧಾರ ಕೈಗೊಳ್ಳಲಾಗದೇ ಶುಕ್ರವಾರ ದೆಹಲಿಗೆ ತೆರಳಿದರು. ದೆಹಲಿಯಲ್ಲಿ ವೇಣುಗೋಪಾಲ್‌ ಅವರು ಕುಮಾರಸ್ವಾಮಿ ಅವರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ವಿಸ್ತರಣೆ-ಪುನಾರಚನೆ ಏನೇ ಮಾಡಿದರೂ ಕಾಂಗ್ರೆಸ್‌ನಲ್ಲಿ ಗೊಂದಲ ನಿರ್ಮಾಣವಾಗುತ್ತದೆ ಎಂಬ ರಾಜ್ಯ ನಾಯಕರ ಆತಂಕವನ್ನು ವಿವರಿಸಿದ್ದಾರೆ.

ಹಾಗಿದ್ದರೆ ಕಾಂಗ್ರೆಸ್ಸಿಗರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಬೇಡ. ಆದರೆ, ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿರುವ ಪಕ್ಷೇತರರನ್ನು ಸಂಪುಟಕ್ಕೆ ತೆಗೆದುಕೊಳ್ಳೋಣ ಎಂಬ ಕುಮಾರಸ್ವಾಮಿ ಅವರ ಸಲಹೆಗೆ ವೇಣುಗೋಪಾಲ್‌ ಸಹ ತಲೆದೂಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮೂಲಗಳ ಪ್ರಕಾರ, ಈ ಸೂತ್ರಕ್ಕೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮತಿಯೂ ದೊರೆತರೆ ಪಕ್ಷೇತರರಾದ ಆರ್‌. ಶಂಕರ್‌ ಹಾಗೂ ನಾಗೇಶ್‌ ಅವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ನಂಬಲರ್ಹ ಮೂಲಗಳ ಪ್ರಕಾರ ಈ ಪ್ರಕ್ರಿಯೆ ಸಾಕಷ್ಟುಶೀಘ್ರ (ಸೋಮವಾರ?) ನಡೆಯಲಿದೆ. ಅಕಸ್ಮಾತ್‌, ಸಿದ್ದರಾಮಯ್ಯ ಅವರು ಈ ಸೂತ್ರಕ್ಕೂ ಆಕ್ಷೇಪಣೆ ವ್ಯಕ್ತಪಡಿಸಿದರೆ ಆಗ ಈ ಪ್ರಕ್ರಿಯೆ ಮತ್ತಷ್ಟುವಿಳಂಬವಾಗುವ ಸಾಧ್ಯತೆಯೂ ಇದೆ.

ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ದೊರೆತರೆ, ಸಂಪುಟ ವಿಸ್ತರಣೆ-ಪುನಾರಚನೆ ಬೇಡ ಎಂಬ ಸಿದ್ದರಾಮಯ್ಯ ಅವರ ನಿಲುವಿಗೂ ಮನ್ನಣೆ ದೊರೆತಂತಾಗುತ್ತದೆ. ಜತೆಗೆ, ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರಿಂದ ಪಕ್ಷೇತರರನ್ನು ಸರ್ಕಾರದೊಂದಿಗೆ ಉಳಿಸಿಕೊಂಡಂತೆಯೂ ಆಗುತ್ತದೆ.

3 ದಿನಗಳಿಂದ ನಡೆದಿದ್ದ ಪ್ರಯತ್ನ:  ಕಳೆದ ಮೂರು ದಿನಗಳಿಂದ ನಗರದಲ್ಲೇ ಬೀಡುಬಿಟ್ಟು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಿರಿಯ ನಾಯಕರು, ಅತೃಪ್ತ ಶಾಸಕರು ಹಾಗೂ ಸಚಿವರು ಸೇರಿದಂತೆ ರಾಜ್ಯ ಕಾಂಗ್ರೆಸ್‌ಗೆ ಸಂಬಂಧಿಸಿದ ಎಲ್ಲಾ ಪ್ರಮುಖರ ಅಭಿಪ್ರಾಯ ಪಡೆದರು. ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಉಳಿದ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಸೂಚಿಸಿದಂತೆ ಸಂಪುಟ ಪುನಾರಚನೆಗೆ ಒಲವು ವ್ಯಕ್ತಪಡಿಸಿದರೂ, ಸಿದ್ದರಾಮಯ್ಯ ಅವರು ಮಾತ್ರ ಯಾವುದೇ ಕಾರಣಕ್ಕೂ ಪುನಾರಚನೆ ಬೇಡ ಎಂದೇ ಪಟ್ಟು ಹಿಡಿದರು. ಇದೇ ವೇಳೆ ಸಚಿವರು ಸಹ ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಅರೆಬರೆಯಾಗಿರುವ ಪರಿಣಾಮ ಖಾತೆ ತ್ಯಜಿಸಲು ಸಮಯಾವಕಾಶ ಕೇಳಿದರು.

ಇದಲ್ಲದೆ, ಬಿಜೆಪಿಯೂ ಸಹ ಸರ್ಕಾರ ಅಸ್ಥಿರಗೊಳಿಸುವ ಯಾವ ಪ್ರಯತ್ನವನ್ನು ನಡೆಸದೇ ಇರುವುದರಿಂದ ಆತುರ ತೋರಿ ವಿಸ್ತರಣೆ ಅಥವಾ ಪುನಾರಚನೆಗೆ ಕೈ ಹಾಕಿದರೆ ವಿನಾಕಾರಣ ಗೊಂದಲಕ್ಕೆ ಆಸ್ಪದ ನೀಡಿದಂತೆ ಆಗುತ್ತದೆ ಎಂದು ವಾದಿಸಿದ್ದರು. ಹೀಗಾಗಿ, ಸ್ಪಷ್ಟನಿಲುವು ಕೈಗೊಳ್ಳಲು ಸಾಧ್ಯವಾಗದೇ ವೇಣುಗೋಪಾಲ್‌ ದೆಹಲಿಗೆ ತೆರಳಿದ್ದರು. ದೆಹಲಿಯಲ್ಲಿ ನಡೆದ ಬೆಳವಣಿಗೆಗಳ ಪರಿಣಾಮವಾಗಿ ಇದೀಗ ಪಕ್ಷೇತರರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ನಿರ್ಮಾಣವಾಗಿದೆ.

click me!