
ಬೆಂಗಳೂರು: ಅಮೆರಿಕ ಮೂಲದ ಅಂತಾರಾಷ್ಟ್ರೀಯ ಹಣಕಾಸು ಕಂಪನಿ ಜೆ.ಪಿ. ಮಾರ್ಗನ್‌ನಿಂದ ₹12.15 ಕೋಟಿಯಷ್ಟು ಬೃಹತ್ ಮೊತ್ತ ಲಪಟಾಯಿಸಿದ್ದ ಬ್ಯಾಂಕಿನ ಇಬ್ಬರು ಸಿಬ್ಬಂದಿ ಮಾರತ್‌ಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೊಡ್ಡಗುಬ್ಬಿಯ ಮಾರುತಿ ಅಲಿಯಾಸ್ ರಾಮುಚಂದಪ್ಪ (22) ಮತ್ತು ಕೋಲಾರ ಜಿಲ್ಲೆ ಮುಳಬಾಗಿಲಿನ ಸುರೇಶ್‌ಬಾಬು (28) ಬಂಧಿತರು.
ಈ ಹಣದಿಂದ ಆರೋಪಿಗಳು ಕೊತ್ತನೂರಿನಲ್ಲಿ ನಿವೇಶನ, ದೊಡ್ಡಬಳ್ಳಾಪುರದಲ್ಲಿ ಮೂರು ಎಕರೆ ಜಮೀನು ಹಾಗೂ 470 ಗ್ರಾಂ ಚಿನ್ನಾಭರಣ ಖರೀದಿಸಿದ್ದರು. ಆರೋಪಿಗಳಿಂದ ಆಸ್ತಿ ಖರೀದಿ ದಾಖಲೆ, ಚಿನ್ನಾಭರಣ ಹಾಗೂ ₹31.50 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಲಪಟಾಯಿಸಿದ್ದ ಹಣದ ಪೈಕಿ ₹8.15 ಕೋಟಿ ಬ್ಯಾಂಕ್ ಖಾತೆಯಲ್ಲಿದ್ದು, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೆ.ಪಿ.ಮಾರ್ಗನ್ ಶಾಖಾ ಕಚೇರಿ ಮಾರತ್ ಹಳ್ಳಿಯಲ್ಲಿದೆ. ಇಲ್ಲಿ ಆರೋಪಿಗಳು ಕಳೆದ ಮೂರು ವರ್ಷಗಳಿಂದ ಡಾಟಾ ಅಪರೇಟರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಈ ಹಣಕಾಸು ಕಂಪನಿಯಲ್ಲಿ ನಿತ್ಯ ನೂರಾರು ಕೋಟಿ ಹಣ ವರ್ಗಾವಣೆ ವ್ಯವಹಾರ ನಡೆಯುತ್ತದೆ. ಇದನ್ನು ನೋಡಿದ್ದ ಆರೋಪಿ ಮಾರುತಿ ಹಣವನ್ನು ಲಪಟಾಯಿಸಲು ಸಂಚು ರೂಪಿಸಿದ್ದ. ಈ ವಿಚಾರವನ್ನು ಜತೆಗೆ ಕೆಲಸ ಮಾಡುತ್ತಿದ್ದ ಸುರೇಶ್‌ಬಾಬುಗೆ ಹೇಳಿ ಸಹಾಯ ಮಾಡುವಂತೆ ಹೇಳಿದ್ದನಲ್ಲದೆ, ಕಳವು ಹಣದಲ್ಲಿ ಪಾಲು ನೀಡುವುದಾಗಿ ಆಮಿಷವೊಡ್ಡಿದ್ದನು.
ಆಗಸ್ಟ್ 24ರಂದು ಜೆ.ಪಿ.ಮಾರ್ಗನ್‌ನಿಂದ ಅಮೆರಿಕದ ಗ್ರಾಹಕರೊಬ್ಬರಿಗೆ ₹20 ಕೋಟಿ ಹಣ ವರ್ಗಾವಣೆ ಮಾಡಬೇಕಾಗಿತ್ತು. ಈ ಪೈಕಿ ₹12.15 ಕೋಟಿಯನ್ನು ಸುರೇಶ್‌ಬಾಬು ಹೆಸರಿನಲ್ಲಿ ತೆರೆಯಲಾಗಿದ್ದ ಆ್ಯಕ್ಸಿಸ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಇದಾದ ಬಳಿಕ ಆರೋಪಿಗಳಿಬ್ಬರು ಸುಮಾರು 15 ದಿನ ಕೆಲಸ ಮಾಡಿ, ಸೂಕ್ತ ಕಾರಣ ನೀಡದೆ ಕೆಲಸ ಬಿಟ್ಟು ಹೋಗಿದ್ದರು.
ಅಕ್ಟೋಬರ್ ಮೊದಲ ವಾರದಲ್ಲಿ ವಿದೇಶಿ ಗ್ರಾಹಕರು ಹಣ ವರ್ಗಾವಣೆಯಾಗದ ಬಗ್ಗೆ ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದರು. ಅದರಂತೆ ಪರಿಶೀಲಿಸಿದಾಗ ಸುರೇಶ್‌ಬಾಬು ಹೆಸರಿನಲ್ಲಿನ ಆ್ಯಕ್ಸಿಸ್ ಬ್ಯಾಂಕ್‌ಗೆ ಹಣ ವರ್ಗಾವಣೆಯಾಗಿರುವುದು ತಿಳಿದಿದೆ. ಕೂಡಲೇ ಬ್ಯಾಂಕ್‌ನ ವ್ಯವಸ್ಥಾಪಕರು ಈ ಸಂಬಂಧ ಮಾರತ್ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮೊಬೈಲ್ ನಂಬರ್ ಬದಲು: ಕೆಲಸ ಬಿಟ್ಟ ಬಳಿಕ ತಾವು ಬಳಕೆ ಮಾಡುತ್ತಿದ್ದ ಮೊಬೈಲ್ ಸಂಖ್ಯೆಯನ್ನು ಆರೋಪಿಗಳು ಬದಲಾಯಿಸಿದ್ದರು. ಇದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಆರೋಪಿ ಸುರೇಶ್ ಈ ಮೊದಲು ಬಳಕೆ ಮಾಡುತ್ತಿದ್ದ ಕಾಲ್ ಡೀಟೆಲ್ಸ್ ಪರಿಶೀಲಿಸಿದ ಪೊಲೀಸರಿಗೆ ಆತನ ಸಂಬಂಧಿಯೊಬ್ಬರ ಮೊಬೈಲ್ ಸಂಖ್ಯೆ ದೊರೆತಿತ್ತು.
ಸಂಬಂಧಿಯನ್ನು ಸಂಪರ್ಕಿಸಿದ ಪೊಲೀಸರು ಸುರೇಶ್ ಪ್ರಸ್ತುತ ಬಳಕೆ ಮಾಡುತ್ತಿದ್ದ ನಂಬರ್ ಪಡೆದು ಮುಳಬಾಗಿಲಿನಲ್ಲಿ ಆತನನ್ನು ಬಂಧಿಸಿದ್ದರು. ಸುರೇಶ್‌ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೃತ್ಯದ ಮಾಸ್ಟರ್ ಮೈಂಡ್ ಮಾರುತಿ ಬಗ್ಗೆ ಬಾಯ್ಬಿಟ್ಟಿದ್ದನು. ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದ: ಪೊಲೀಸರ ವಶದಲ್ಲಿದ್ದ ಸುರೇಶ್‌ನಿಂದ ಕೃತ್ಯದ ಮಾಸ್ಟರ್ ಮೈಂಡ್’ಗೆ ಕರೆ ಮಾಡಿಸಿದ್ದ ಪೊಲೀಸರು ‘ಬ್ಯಾಂಕ್‌ನವರು ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸ್ವಲ್ಪ ದಿನ ನಾನು ಕೂಡ ಚೆನ್ನೈಗೆ ಬಂದು ತಲೆಮರೆಸಿಕೊಳ್ಳುತ್ತೇನೆ, ಸಹಕರಿಸು’ ಎಂದು ಹೇಳಿಸಿದ್ದರು. ಅದರಂತೆ ಚೆನ್ನೈನಲ್ಲಿರುವ ಮಾರುತಿ ಬಂಧನಕ್ಕೆ ಪೊಲೀಸರು ಸುರೇಶ್‌ನೊಂದಿಗೆ ವಾಹನದಲ್ಲಿ ತೆರಳಿದ್ದರು.
ಸುರೇಶ್ ಮೇಲೆ ಅನುಮಾನಗೊಂಡ ಮಾರುತಿ ತಡರಾತ್ರಿ ಕರೆ ಮಾಡಿ ಪುನಃ ವಿಚಾರಿಸಿಕೊಂಡಿದ್ದ. ಈ ವೇಳೆ ಬಸ್‌ನ ಟಿಕೆಟ್ ಎಷ್ಟು ಎಂದು ಕೂಡ ಪ್ರಶ್ನಿಸಿದ್ದ. ಟಿಕೆಟ್ ದರವನ್ನು ತಿಳಿದಿದ್ದ ಪೊಲೀಸರು ₹570 ಎಂದು ಹೇಳಿಸಿದ್ದರು. ಬೆಳಗಿನ ಜಾವ ಚೆನ್ನೈ ತಲುಪಿದ್ದ ಪೊಲೀಸರು ಅಲ್ಲಿಂದ ಕರೆ ಮಾಡಿಸಿದಾಗ ಆಟೋದಲ್ಲಿ ಬರುತ್ತಿರುವುದಾಗಿ ಮಾರುತಿಗೆ ತಿಳಿಸಿದ್ದರು. ಅನುಮಾನಗೊಂಡ ಮಾರುತಿ ಆಟೋ ಚಾಲಕಗೆ ಪೋನ್ ನೀಡುವಂತೆ ಹೇಳಿದ್ದ. ತಕ್ಷಣ ಜಾಗೃತರಾದ ಪೊಲೀಸರು ತಮಿಳು ಭಾಷೆಯಲ್ಲಿ ಆಟೋ ಚಾಲಕನಂತೆ ಸಂಭಾಷಣೆ ನಡೆಸಿ ಮಾರುತಿಯನ್ನು ನಂಬಿಸಿದ್ದರು. ಬಳಿಕ ಮರೀನಾ ಬೀಚ್ ಬಳಿ ಸೈಕಲ್‌ನಲ್ಲಿ ಬಂದ ಆರೋಪಿಯನ್ನು ಪೊಲೀಸರು ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದರು.
ಕೋಟ್ಯಂತರ ನಗದು ಡ್ರಾ ಹಿಂದೆ ಹಲವು ಅನುಮಾನ:
ಸುರೇಶ್‌ಬಾಬು ಆ್ಯಕ್ಸಿಸ್ ಬ್ಯಾಂಕಿನಿಂದ ಒಂದೇ ಬಾರಿಗೆ ಒಂದು ಕೋಟಿ ರುಪಾಯಿ ಹಣ ಡ್ರಾ ಮಾಡಿದ್ದಾನೆ. ನೋಟು ಅಮಾನ್ಯೀಕರಣದ ಬಳಿಕ ದೊಡ್ಡ ಮೊತ್ತದ ಹಣ ಡ್ರಾ ಮಾಡುವಾಗ ಬ್ಯಾಂಕಿಗೆ ಯಾವ ಉದ್ದೇಶಕ್ಕೆ ಹಣ ಡ್ರಾ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಬೇಕು. ಹೀಗಿದ್ದರೂ ಆರೋಪಿ ಇಷ್ಟು ಮೊತ್ತದ ಹಣ ಡ್ರಾ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ ಸತ್ಯಾಂಶ ಹೊರ ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ವಿದ್ಯಾಭ್ಯಾಸದ ದಾಖಲೆ ಕೂಡ ನಕಲಿ!
ಮಾರುತಿ 9ನೇ ತರಗತಿ ಅನುತ್ತೀರ್ಣಗೊಂಡು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕು ಗೊಳಿಸಿದ್ದ. ತನ್ನ ದೂರದ ಸಂಬಂಧಿ ರಾಮುಚಂದಪ್ಪ ಎಂಬುವರ ಅಂಕಪತ್ರಗಳನ್ನು ನಕಲಿ ಮಾಡಿಸಿ ತಾನು ರಾಮುಚಂದಪ್ಪ ಎಂದು ದಾಖಲೆ ನೀಡಿ ಮಾರ್ಗನ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಬ್ಯಾಂಕ್’ನಲ್ಲೂ ಆರೋಪಿಯನ್ನು ರಾಮುಚಂದಪ್ಪ ಎಂಬ ಹೆಸರಿನಲ್ಲಿ ಕರೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.