
ಬೆಂಗಳೂರು(ಅ.24): ನಾಳೆ ವಿಧಾನಸೌಧದ ವಜ್ರಮಹೋತ್ಸವ ಸಂಭ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಬೆಂಗಳೂರಿಗೆ ಬರಲಿದ್ದಾರೆ. ಮಧ್ಯಾಹ್ನ 3.45ಕ್ಕೆ ಎಚ್'ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿರುವ ರಾಷ್ಟ್ರಪತಿ, ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ರಾತ್ರಿ ಎಂಟು ಗಂಟೆಗೆ ಔತಣಕೂಟದಲ್ಲಿ ಅವರು ಪಾಲ್ಗೊಳ್ಳುವರು. ನ.25ರಂದು ವಿಧಾನಸೌಧ ವಜ್ರಮಹೋತ್ಸವದ ಅಂಗವಾಗಿ ನಡೆಯಲಿರುವ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಅವರು ಭಾಷಣ ಮಾಡಲಿದ್ದಾರೆ. ಇನ್ನು ಸ್ಪೀಕರ್, ಸಭಾಪತಿ ಕೊಠಡಿಗಳೂ ಸಿಂಗಾರಗೊಂಡಿದ್ದು, ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿರುವ ವಿಧಾನಸಭೆ ಆವರಣ ಹಾಗೂ ಮೊಗಸಾಲೆಯನ್ನು ಅಲಂಕರಿಸಲಾಗುತ್ತಿದೆ.
ಭಾನುವಾರದಿಂದಲೇ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗಿದ್ದು, ರಾತ್ರಿವೇಳೆ ಬಣ್ಣಬಣ್ಣದ ದೀಪದ ಬೆಳಕಿನಲ್ಲಿ ಕಟ್ಟಡ ಆಕರ್ಷಣೆ ಪಡೆದುಕೊಂಡಿದೆ. ವಿಧಾನಸಭೆ ಮತ್ತು ಮೇಲ್ಮನೆಯ ಎಲ್ಲ 300 ಸದಸ್ಯರು ರಾಷ್ಟ್ರಪತಿಯವರೊಟ್ಟಿಗೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗುವಂತೆ ವಿಧಾನಸೌಧ ಮತ್ತು ವಿಕಾಸಸೌಧ ಮಧ್ಯದ ಆವರಣದ ಗಾಂಧಿ ಪ್ರತಿಮೆ ಬಳಿ ವಿಶೇಷ ವೇದಿಕೆ ಅಣಿಗೊಳಿಸಲಾಗಿದೆ. ಬ್ವಾಂಕ್ವೆಟ್ ಹಾಲ್'ಗೆ ಹೊಂದಿಕೊಂಡಂತಿರುವ ಹುಲ್ಲುಹಾಸಿನ ಮೇಲೆ ಸಚಿವರು, ಶಾಸಕರು ಮತ್ತಿತರ ಗಣ್ಯರ ಭೋಜನ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದ್ದು,ಮೂರು ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಎಲ್ಲ ಸಿದ್ಧತೆ ಮಾಡಲಾಗಿದೆ.
ಸಂಜೆ ವಿಧಾನಸೌಧ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣಗೊಂಡಿದೆ. ಮೆಟ್ಟಿಲುಗಳ ಮೇಲೆಯೇ ಆಕರ್ಷಕವಾಗಿ ಸಿದ್ಧಪಡಿಸಿರುವ ವೇದಿಕೆಯಲ್ಲಿ ಅ.25ರ ಸಂಜೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ತಂಡ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದೆ. ಗಣ್ಯರ ವೀಕ್ಷಣೆಗಾಗಿ ಮೂರು ದಿನಗಳ ಮೊದಲೇ ಸೋಫಾ, ಕುರ್ಚಿಗಳನ್ನು ಜೋಡಿಸಲಾಗಿದೆ. ಪೂರ್ವದ್ವಾರದ ಎರಡೂ ಬದಿಯಲ್ಲಿ ನೀರಿನ ಕಾರಂಜಿಗಳಿಗೆ ಕಳೆಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.