ಕಾಂಗ್ರೆಸ್ ನಲ್ಲಿ ಆರದ ಬಂಡಾಯ - ಅತೃಪ್ತರು ನೀಡಿದ ಎಚ್ಚರಿಕೆ ಏನು..?

First Published Jun 14, 2018, 7:27 AM IST
Highlights

ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದೆ ಅತೃಪ್ತಿಗೊಂಡಿರುವ ಹಿರಿಯ ಶಾಸಕರ ಬಂಡಾಯ ಇನ್ನೂ ಮುಂದುವರೆದಿದ್ದು, ನಮ್ಮ ಕಾರ್ಯಕರ್ತರ ದುಃಖ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಪಕ್ಷಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು :  ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದೆ ಅತೃಪ್ತಿಗೊಂಡಿರುವ ಹಿರಿಯ ಶಾಸಕರ ಬಂಡಾಯ ಇನ್ನೂ ಮುಂದುವರೆದಿದ್ದು, ನಮ್ಮ ಕಾರ್ಯಕರ್ತರ ದುಃಖ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಪಕ್ಷಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರ, ಗುರುವಾರ ನಡೆಯಲಿರುವ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ಮೊದಲ ಸಮನ್ವಯ ಸಮಿತಿ ಸಭೆಯಲ್ಲೂ ಮುಖ್ಯವಾಗಿ ಚರ್ಚೆಗೆ ಬರುವ ಸಾಧ್ಯತೆಯಿದೆ.

ಮಂಗಳವಾರ ಎಚ್‌.ಕೆ.ಪಾಟೀಲ್‌ ನೇತೃತ್ವದಲ್ಲಿ ಕೆಲ ಅತೃಪ್ತ ಶಾಸಕರು ಸಭೆ ಸೇರಿ ಎಐಸಿಸಿ ಕಾರ್ಯದರ್ಶಿಗಳ ಮಧ್ಯಸ್ಥಿಕೆಯಲ್ಲಿ ಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತಾದರೂ ಬುಧವಾರ ಮತ್ತೆ ಇವರು ಸಭೆ ನಡೆಸಿ ಬಹಿರಂಗವಾಗಿಯೇ ಅತೃಪ್ತಿ ಹೊರಹಾಕಿದರು. ಇನ್ನು, ಮತ್ತೊಂದು ಅತೃಪ್ತ ಪಡೆಯ ನಾಯಕ ಎಂ.ಬಿ.ಪಾಟೀಲ್‌ ಕೂಡ ಬುಧವಾರ ನಗರಕ್ಕೆ ಆಗಮಿಸಿದ್ದು, ಅವರನ್ನು ಕೆಲ ಶಾಸಕರು ಭೇಟಿ ಮಾಡುವ ಮೂಲಕ ಅತೃಪ್ತಿ ಶಮನವಾಗಿಲ್ಲ ಎಂದ ಸಂದೇಶ ನೀಡಿದರು.

ಎಚ್‌ಕೆ ಪಾಟೀಲ್‌ ಮನೆಯಲ್ಲಿ ಸಭೆ:  ಹಿರಿಯ ಶಾಸಕ ಎಚ್‌.ಕೆ.ಪಾಟೀಲ್‌ ನಿವಾಸದಲ್ಲಿ ಸಭೆ ನಡೆಸಿದ ಮಾಜಿ ಸಚಿವ ತನ್ವೀರ್‌ ಸೇಠ್‌ ಮುಂತಾದ ಶಾಸಕರು, ಗುರುವಾರ ನಗರಕ್ಕೆ ಆಗಮಿಸಲಿರುವ ಎಐಸಿಸಿ ನಾಯಕರ ಬಳಿ ದೂರು ಹೇಳಿಕೊಳ್ಳಲು ನಿರ್ಧರಿಸಿದರು.

ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಎಚ್‌.ಕೆ.ಪಾಟೀಲ್‌, ಸಮಾನ ಮನಸ್ಕರೆಲ್ಲ ಸೇರಿ ಸಭೆ ನಡೆಸಿದ್ದೇವೆ. ನಾವೆಲ್ಲ ಈ ಹಿಂದೆ ಮಂತ್ರಿಗಳಾಗಿದ್ದವರು. ಪಕ್ಷದಲ್ಲಿ ಹಿರಿಯರು ಎಂದು ಕರೆಸಿಕೊಳ್ಳುತ್ತಿದ್ದೇವೆ. ನಮಗೆ ಸಚಿವ ಸ್ಥಾನ ಸಿಗದಿದ್ದುದಕ್ಕೆ ನಮ್ಮ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಅವರ ದುಃಖ ನೋಡಿ ನಮಗೂ ಬೇಸರವಾಗಿದ್ದು, ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಗುರುವಾರ ನಗರಕ್ಕೆ ಬರುವ ಎಐಸಿಸಿ ನಾಯಕರ ಜತೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ತನ್ವೀರ್‌ ಸೇಠ್‌, ನಾವೆಲ್ಲ ಸೇರಿ ಕಟ್ಟಿಬೆಳೆಸಿದ ಪಕ್ಷವನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಪಕ್ಷವು ನಮ್ಮ ಅನುಭವ ಹಾಗೂ ಬದ್ಧತೆಯನ್ನು ಪರಿಗಣಿಸುವಲ್ಲಿ ಎಡವಿದೆ. ಹೀಗಾಗಿ ನಮಗೆ ಅಸಮಾಧಾನವಾಗಿದೆ. ಪಕ್ಷ ನಮ್ಮನ್ನು ನಡೆಸಿಕೊಂಡ ರೀತಿಯಿಂದ ನಮಗೆ ನೋವಾಗಿದೆ. ಸಂಪುಟದಲ್ಲಿ ಇನ್ನೂ ಏಳು ಸ್ಥಾನಗಳು ಖಾಲಿಯಿವೆ. ಅದರ ಬಗ್ಗೆ ಎಐಸಿಸಿ ನಾಯಕರು ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಜೊತೆ ಮಾತನಾಡುತ್ತೇವೆ ಎಂದು ತಿಳಿಸಿದರು.

ಎಂಬಿ ಪಾಟೀಲ್‌ ನಿವಾಸದಲ್ಲೂ ಸಭೆ:  ಬುಧವಾರ ಬೆಳಗ್ಗೆಯೇ ಎಂ.ಬಿ.ಪಾಟೀಲರ ನಿವಾಸಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಕೆಲ ಕಾಲ ಪಾಟೀಲರೊಂದಿಗೆ ಚರ್ಚೆ ನಡೆಸಿ, ನಿರ್ಗಮಿಸಿದರು.

ನಿರ್ಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲ್‌ ನನ್ನ ಗೆಳೆಯ. ಅವರೊಂದಿಗೆ ನಾನು ಮಾತನಾಡಲು ಬಂದಿದ್ದೆ. ಸಂಪುಟ ವಿಸ್ತರಣೆ ಕುರಿತ ಅತೃಪ್ತಿ ಎಂಬುದೆಲ್ಲ ನಿಜವಲ್ಲ. ಸಹಜವಾಗಿ ಎಂ.ಬಿ.ಪಾಟೀಲರನ್ನು ಭೇಟಿಯಾಗಲು ಬಂದಿದ್ದೆ ಎಂದು ಹೇಳಿದರು.

ಇನ್ನು ಪರಿಶಿಷ್ಟರ ಎಡಗೈ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯಬೇಕು ಎಂದು ಪ್ರತ್ಯೇಕ ಸಭೆಗಳನ್ನು ಆಯೋಜಿಸಿದ್ದ ಮಾಜಿ ಸಚಿವ ಎಚ್‌.ಆಂಜನೇಯ ಅವರು ಮಧ್ಯಾಹ್ನದ ನಂತರ ಎಂ.ಬಿ.ಪಾಟೀಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಕುತೂಹಲಕರವಾಗಿತ್ತು. ಉಭಯ ನಾಯಕರು ಕೆಲ ಕಾಲ ಮಾತುಕತೆ ನಡೆಸಿದರು. ಸಮಾನ ಮನಸ್ಕರಾಗಿ ಹೈಕಮಾಂಡ್‌ ಮುಂದೆ ಒಟ್ಟಿಗೆ ಬೇಡಿಕೆ ಮುಂದಿಡುವ ಬಗ್ಗೆ ನಾಯಕರ ನಡುವೆ ಚರ್ಚೆ ನಡೆಯಿತು ಎನ್ನಲಾಗಿದೆ. ಅನಂತರ ಎಂ.ಬಿ.ಪಾಟೀಲರನ್ನು ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಭೇಟಿ ಮಾಡಿದರು.

click me!