ಅಮೆರಿಕದಿಂದ ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ಲ್ಯಾಂಡ್‌ ಖರೀದಿ?

By Web DeskFirst Published Aug 17, 2019, 1:10 PM IST
Highlights

ಅಮೆರಿಕದಿಂದ ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ಲ್ಯಾಂಡ್‌ ಖರೀದಿ?| ಸೆಪ್ಟೆಂಬರ್‌ನಲ್ಲಿ ಗ್ರೀನ್‌ಲ್ಯಾಂಡ್‌, ಡೆನ್ಮಾರ್ಕ್ಗೆ ಟ್ರಂಪ್‌ ಭೇಟಿ| ಬೆನ್ನಲ್ಲೇ ಅಮೆರಿಕ ಪತ್ರಿಕೆ ವರದಿಯಿಂದ ಸಂಚಲನ

ಕೋಪನ್‌ಹೆಗನ್‌[ಆ.17]: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿಶ್ವದ ಅತಿದೊಡ್ಡ ದ್ವೀಪವಾಗಿರುವ, 50 ಸಾವಿರ ಮಂದಿ ನೆಲೆಸಿರುವ ಗ್ರೀನ್‌ಲ್ಯಾಂಡ್‌ ಅನ್ನು ಖರೀದಿಸಲು ಯೋಚಿಸಿದ್ದಾರೆ. ಈ ವಿಷಯದ ಬಗ್ಗೆ ತಮ್ಮ ಸಲಹೆಗಾರರ ಜೊತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಆದರೆ ಈ ವರದಿ ಬಗ್ಗೆ ಡೆನ್ಮಾರ್ಕ್ ಗೇಲಿ ಮಾಡಿದೆ. ಒಂದು ವೇಳೆ ಡೊನಾಲ್ಡ್‌ ಟ್ರಂಪ್‌ ಈ ರೀತಿ ಯೋಚಿಸಿದ್ದೇ ಆದಲ್ಲಿ ಅವರಿಗೆ ತಲೆ ಕೆಟ್ಟಿದೆ ಎನ್ನುವುದಕ್ಕೆ ಇದೇ ಕೊನೆಯ ಸಾಕ್ಷಿ ಎಂದು ಡ್ಯಾನಿಷ್‌ ಪೀಪಲ್ಸ್‌ ಪಕ್ಷದ ವಕ್ತಾರ ಸೆರೆನ್‌ಎಸ್ಪರ್ಸನ್‌ ಪ್ರತಿಕ್ರಿಯಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಡೆನ್ಮಾರ್ಕ್ ರಾಜಧಾನಿ ಕೋಪನ್‌ಹೆಗನ್‌ಗೆ ಭೇಟಿ ನೀಡಲಿರುವ ಡೊನಾಲ್ಡ್‌ ಟ್ರಂಪ್‌, ಗ್ರೀನ್‌ಲ್ಯಾಂಡ್‌ ಖರೀದಿಸುವ ಬಗ್ಗೆ ಡೆನ್ಮಾರ್ಕ್ ಹಾಗೂ ಗ್ರೀನ್‌ಲ್ಯಾಂಡ್‌ ಪ್ರಧಾನಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿಯೊಂದನ್ನು ಪ್ರಕಟಿಸಿದೆ. ಆದರೆ, ಇದೊಂದು ಏಪ್ರಿಲ್‌ ಫäಲ್‌ ಜೋಕ್‌ ಇರಬೇಕು ಎಂದು ಡೆನ್ಮಾಕ್‌ ಸಂಸದರು ಅಪಹಾಸ್ಯ ಮಾಡಿದ್ದಾರೆ.

ಇದೇ ವೇಳೆ ಟ್ರಂಪ್‌ ಜೊತೆಗಿನ ಮಾತುಕತೆಯ ವೇಳೆ ಗ್ರೀನ್‌ಲ್ಯಾಂಡ್‌ ಖರೀದಿಯ ಕಾರ್ಯಸೂಚಿ ಇಲ್ಲ ಎಂದು ಡೆನ್ಮಾರ್ಕ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಕುರಿತು ಡೆನ್ಮಾರ್ಕ್ ಪ್ರಧಾನಿ ಮಿಟ್ಟೆಫ್ರೆಡೆರಿಕ್ಸೆನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಡೆನ್ಮಾರ್ಕ್ ಅಧೀನದ ಸ್ವಾಯತ್ತ ಪ್ರದೇಶ

ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಗ್ರೀನ್‌ಲ್ಯಾಂಡ್‌, ಡೆನ್ಮಾರ್ಕ್ನ ಅಧೀನದಲ್ಲಿರುವ ಒಂದು ಸ್ವಾಯತ್ತ ಪ್ರದೇಶವಾಗಿದೆ. ಸ್ಥಳೀಯ ಆಡಳಿತವನ್ನು ಅಲ್ಲಿನ ಸರ್ಕಾರವೇ ನಿಭಾಯಿಸುತ್ತದೆ. ಆದರೆ, ರಕ್ಷಣೆ ಹಾಗೂ ವಿದೇಶಾಂಗ ನೀತಿಯನ್ನು ಡೆನ್ಮಾರ್ಕ್ ನಿರ್ವಹಿಸುತ್ತಿದೆ. ತನ್ನ ಅಪಾರವಾದ ಖನಿಜ ಸಂಪತ್ತು ಹಾಗೂ ವ್ಯೂಹಾತ್ಮಕವಾಗಿ ಆಯಕಟ್ಟಿನ ಸ್ಥಳವಾಗಿರುವ ಕಾರಣದಿಂದಾಗಿ ಡೆನ್ಮಾರ್ಕ್ ಜಗತ್ತಿನ ಗಮನ ಸೆಳೆದಿದೆ. ಚೀನಾ, ರಷ್ಯಾ ಹಾಗೂ ಅಮೆರಿಕಗಳು ಡೆನ್ಮಾರ್ಕ್ ಮೇಲೆ ಕಣ್ಣಿಟ್ಟಿವೆ. ಡೆನ್ಮಾರ್ಕ್ ಹಾಗೂ ಅಮೆರಿಕ ಮಧ್ಯೆ 1951ರಲ್ಲಿ ಆದ ರಕ್ಷಣಾ ಒಪ್ಪಂದದ ಉತ್ತರ ಗ್ರೀನ್‌ಲ್ಯಾಂಡ್‌ನ ಟುಲೆ ವಾಯುನೆಲೆಯ ಮೇಲೆ ಅಮೆರಿಕ ಹಕ್ಕು ಹೊಂದಿದೆ.

click me!