‘ಅಣು ಬಾಂಬ್‌’ ಶಾಕ್‌ಗೆ ಪಾಕ್ ಕಂಗಾಲು: ಇದು 'ಆಘಾತಕಾರಿ' ಅಂದ್ರು ಖುರೇಷಿ!

By Web DeskFirst Published Aug 17, 2019, 1:01 PM IST
Highlights

ರಾಜನಾಥ್‌ ‘ಅಣು ಬಾಂಬ್‌’!| ‘ಮೊದಲು ಅಣ್ವಸ್ತ್ರ ಬಳಸಲ್ಲ’ ನೀತಿಗೆ ಈಗಲೂ ಬದ್ಧ| ಆದರೆ ಮುಂದೇನಾಗುತ್ತೋ ಗೊತ್ತಿಲ್ಲ| ಭಾರತದ ಏಟಿಗೆ ಪಾಕ್ ಕಂಗಾಲು| ಇದು 'ಆಘಾತಕಾರಿ' ಅಂದ್ರು ಖುರೇಷಿ

ಇಸ್ಲಮಾಬಾದ್[ಆ.17]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ವಿರುದ್ಧ ಕಿಡಿ ಕಾರಿದ್ದ ಪಾಕಿಸ್ತಾನಕ್ಕೆ ರಕ್ಷಣಾ ಮಂತ್ರಿ ‘ಅಣು ಬಾಂಬ್‌’ ಶಾಕ್ ಕೊಟ್ಟಿದ್ದರು. ಸದ್ಯ ರಾಜನಾಥ್ ಹೇಳಿಕೆಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಪ್ರತಿಕ್ರಿಯಿಸಿದ್ದು, ಇದು ಶಾಕಿಂಗ್ ಹೇಳಿಕೆ ಎಂದಿದ್ದಾರೆ.

ಬದಲಾಗಲಿದೆ ನ್ಯೂಕ್ಲಿಯರ್ ನೋ ಫಸ್ಟ್ ಪಾಲಿಸಿ?:ರಾಜನಾಥ್ ಹೇಳಿಕೆಗೆ ಪಾಕ್ ಕಸಿವಿಸಿ!

ಹೌದು 'ಮೊದಲು ಅಣ್ವಸ್ತ್ರ ಬಳಸಲ್ಲ ಎಂಬ ನೀತಿಗೆ ಭಾರತ ಈಗಲೂ ಕಟಿಬದ್ಧವಾಗಿದೆ. ಆದರೆ ಮುಂದೆ ಏನಾಗುತ್ತದೆ ಎಂಬುದು ಆಗಿನ ಸಂದರ್ಭಗಳ ಮೇಲೆ ಅವಲಂಬಿತವಾಗಿರುತ್ತದೆ' ಎಂದು ರಾಜನಾಥ್ ಸಿಂಗ್ ನೀಡಿದ್ದ ಹೇಳಿಕೆ ಪಾಕಿಸ್ತಾನವನ್ನು ಕಂಗಾಲುಗೊಳಿಸಿತ್ತು. ಸದ್ಯ ಇದಕ್ಕೆ ಪ್ರತಿಕ್ರಿಯಿಸಿರುವ  ಶಾ ಮೊಹಮ್ಮದ್ ಖುರೇಷಿ 'ಭಾರತ ನೀಡಿರುವುದು ಆಘಾತಕಾರಿ ಹಾಗೂ ದುರದೃಷ್ಟಕರ ಹೇಳಿಕೆ. ಇದು ಭಾರತದ ಬೇಜವಾಬ್ದಾರಿತನ ಹಾಗೂ ಯುದ್ಧೋನ್ಮಾನದವನ್ನು  ಪ್ರತಿಫಲಿಸುತ್ತದೆ' ಎಂದಿದ್ದಾರೆ.

'ಪಾಕಿಸ್ತಾನ ಯಾವಾಗಲೂ ದಕ್ಷಿಣ ಏಷ್ಯಾದಲ್ಲಿ ಪರಮಾಣು ಸಂಯಮಕ್ಕೆ ಸಂಬಂಧಿಸಿದ ಕ್ರಮಗಳನ್ನು ಪ್ರಸ್ತಾಪಿಸಿದೆ. ನಮ್ಮ ಈ ನಡೆಯನ್ನು ನಾವು ಮುಂದುವರೆಸುತ್ತೇವೆ' ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಏನಾಗಿತ್ತು?

ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 1998ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ಅಣು ಬಾಂಬ್‌ ಪರೀಕ್ಷೆ ನಡೆದಿತ್ತು. ಅಟಲ್‌ ಅವರ ಮೊದಲ ಪುಣ್ಯಸಂಸ್ಮರಣೆ ದಿನವಾದ ಶುಕ್ರವಾರ ಅಲ್ಲಿಗೆ ಭೇಟಿ ನೀಡಿದ ಬಳಿಕ ರಾಜನಾಥ್‌ ಅವರು ಟ್ವೀಟ್‌ ಮಾಡಿದ್ದರು. ‘ಭಾರತವನ್ನು ಅಣ್ವಸ್ತ್ರ ದೇಶವಾಗಿಸುವ ಅಟಲ್‌ ಅವರ ದೃಢ ನಿಲುವಿಗೆ ಸಾಕ್ಷಿಯಾದ ಸ್ಥಳ ಪೋಖ್ರಾನ್‌. ಮೊದಲು ಅಣ್ವಸ್ತ್ರ ಬಳಸಲ್ಲ ಎಂಬ ನೀತಿಗೆ ಭಾರತ ಕಟಿಬದ್ಧವಾಗಿದೆ. ಅದನ್ನು ಪಾಲಿಸುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದು ಪರಿಸ್ಥಿತಿಯ ಮೇಲೆ ಅವಲಂಬಿತ’ ಎಂದು ಹೇಳಿದ್ದರು. ರಕ್ಷಣಾ ಸಚಿವರ ಈ ಹೇಳಿಕೆ ಭಾರೀ ಸದ್ದು ಮಾಡಿತ್ತು.

click me!