
ಚಿಕ್ಕಮಗಳೂರು: ಮಲೆನಾಡಿನಲ್ಲಿ ಒಂದು ದಶಕದಿಂದ ಶಸ್ತ್ರಾಸ್ತ್ರ ಹೋರಾಟ ನಡೆಸುತ್ತಿದ್ದ ಕನ್ಯಾಕುಮಾರಿ ಸೇರಿದಂತೆ ಮೂವರು ನಕ್ಸಲೀಯರು ಸೋಮವಾರ ಜಿಲ್ಲಾಡಳಿತ ಹಾಗೂ ಎಡಪಂಥೀಯ ಶರಣಾಗತ ಸಮಿತಿಯ ಮುಂದೆ ಹಾಜರಾಗಿ ಶರಣಾದರು.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುಜೇಖಾನ್ ಗ್ರಾಮದ ಕನ್ಯಾಕುಮಾರಿ, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಚೆನ್ನಮ್ಮ ಅಲಿಯಾಸ್ ಸುಮಾ ಹಾಗೂ ಬೆಂಗಳೂರಿನ ನಿವಾಸಿ ಶಿವು ಆಲಿಯಾಸ್ ಜ್ಞಾನದೇವ್ ಶರಣಾಗಿದ್ದಾರೆ. ಈ ಮೂಲಕ ಚಿಕ್ಕಮಗ ಳೂರು ಜಿಲ್ಲಾಡಳಿತ ಎದುರು ಶರಣಾದ ನಕ್ಸಲೀಯ ಸಂಖ್ಯೆ13ಕ್ಕೆ ಏರಿದೆ.
ಕನ್ಯಾಕುಮಾರಿ 13-14 ವರ್ಷಗಳಿಂದ ನಕ್ಸಲ್ ಸಂಬಂಧಿತ ಚಟುವಟಿಕೆ ಯಲ್ಲಿ ತೊಡಗಿದ್ದು, ಅವರ ವಿರುದ್ಧ ಚಿಕ್ಕಮಗಳೂರು, ಉಡುಪಿ, ಶಿವ ಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 33 ಪ್ರಕರಣ ದಾಖಲಾಗಿದ್ದವು. 5 ಪ್ರಕರಣಗಳಲ್ಲಿ ವಾರಂಟ್ ಕೂಡ ಇದೆ. ಬೆಂಗಳೂರಿನ ಶಿವುನೊಂದಿಗೆ ಕನ್ಯಾಕುಮಾರಿ ಮದುವೆಯಾಗಿದ್ದು, ದಂಪತಿಗೆ 6 ತಿಂಗಳ ಗಂಡು ಮಗುವಿದೆ.
ಕನ್ಯಾಕುಮಾರಿ ವಿರುದ್ಧ ಪ್ರಕರಣಗಳು ಇರುವುದರಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಇನ್ನು ಚೆನ್ನಮ್ಮ ರಾಯಚೂರು ಸೇರಿದಂತೆ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಮಂಗಳೂರು ಜಿಲ್ಲೆಗಳಲ್ಲಿ 1999ರಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದರು. ಅವರ ವಿರುದ್ಧ ಇದ್ದ ಎಲ್ಲ 3 ಪ್ರಕರಣಗಳು ಖುಲಾಸೆಯಾಗಿವೆ. ಶಿವು ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಅದ್ದರಿಂದ ಚೆನ್ನಮ್ಮ ಹಾಗೂ ಶಿವು ಅವರನ್ನು ಬಿಡುಗಡೆಗೊಳಿಸಲಾಗುತ್ತದೆ. ಅವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ತೆರಳಿ, ಸಂಬಂಧಿತ ನೋಡಲ್ ಅಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳಬೇಕು. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮಾಹಿತಿ ನೀಡಿದರು. ಶರಣಾಗತಿಯಾದ ನಕ್ಸಲೀಯರಿಗೆ ಸರ್ಕಾರದ ಪುನರ್ ವಸತಿ ಪ್ಯಾಕೇಜ್‌ಯಡಿ .4 ಲಕ್ಷ ಪರಿಹಾರ ನೀಡಲಾಗುತ್ತದೆ. ಭೂ ಮಂಜೂರು ಮಾಡಿ, ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು. ತರಬೇತಿ ಕಾಲಾವಧಿಯಲ್ಲಿ ಪ್ರತಿ ತಿಂಗಳು .5 ಸಾವಿರ ಸ್ಟೈಫಂಡ್ ನೀಡಲಾಗುವುದು ಎಂದು ಹೇಳಿದರು. ಎಡಪಂಥೀಯ ಶರಣಾಗತಿ ರಾಜ್ಯ ಸಮಿತಿಯ ಸದಸ್ಯರಾದ ಎ.ಕೆ.ಸುಬ್ಬಯ್ಯ, ಗೌರಿ ಲಂಕೇಶ್, ಜಿಲ್ಲಾ ಸಮಿತಿ ಸದಸ್ಯರೂ ಆಗಿರುವ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ರಾಗಪ್ರಿಯಾ ಉಪಸ್ಥಿತರಿದ್ದರು.
ನಕ್ಸಲ್ ಮುಕ್ತ ರಾಜ್ಯ- ಎ.ಕೆ.ಸುಬ್ಬಯ್ಯ: ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡುವುದು ರಾಜ್ಯ ಸರ್ಕಾರದ ಮೂಲ ಆಶಯವಾಗಿದೆ. ಅದಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ನಕ್ಸಲೀಯರು ಶಸ್ತ್ರಾಸ್ತ್ರ ಹಿಡಿದು ಹೋರಾಟ ಮಾಡಿರುವುದು, ಮಾಡುತ್ತಿರುವುದು ಸರಿಯಲ್ಲ ಎಂದು ಎಡಪಂಥೀಯ ಶರಣಾಗತಿ ರಾಜ್ಯ ಸಮಿತಿ ಸದಸ್ಯರಾದ ಎ.ಕೆ. ಸುಬ್ಬಯ್ಯ ಹೇಳಿದರು. ಮುಖ್ಯವಾಹಿನಿಗೆ ಬಂದವರಿಗೆ ಜಿಲ್ಲಾಡಳಿತ ಮತ್ತು ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸುತ್ತಿವೆ. ಅದುದರಿಂದ ಕಾಡಿನಲ್ಲಿರುವ ನಕ್ಸಲೀಯರು ಮುಖ್ಯ ವಾಹಿನಿಗೆ ಬರಬೇಕು ಎಂದರು. ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿ, ಜನಪರ ಮತ್ತು ಅಭಿವೃದ್ಧಿ ಪರ ಜಿಲ್ಲಾಡಳಿತ ಇದೆ. ಯಾವುದೋ ಕಾರಣದಿಂದಾಗಿ ನಕ್ಸಲೀಯರಾಗಿದ್ದಾರೆ. ಅವರೆಲ್ಲ ಮುಖ್ಯವಾಹಿನಿಗೆ ಬರಬೇಕು ಎಂದು ಮನವಿ ಮಾಡಿದರು.
ಯಾವಾಗ ಯಾರ್ಯಾರು ಶರಣು?
2010: ಅಗಲಗಂಜಿ ವೆಂಕಟೇಶ್, ಮಲ್ಲಿಕ್ಞಾ ಜಯ, ಕೋಮಲ.
2014: ಸಿರಿಮನೆ ನಾಗರಾಜ್, ನೂರ್ ಜುಲ್ಫಿಕರ್
2016: ನಿಲುಗುಳಿ ಪದ್ಮನಾಭ್, ರಿಜ್ವಾನ್, ಭಾರತಿ , ಪರಶಿವ
2017: ಕನ್ಯಾಕುಮಾರಿ, ಶಿವು , ಚೆನ್ನಮ್ಮ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.