
ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ರಾಜ್ಯ ವಿಧಾನಮಂಡಲ ಅಧಿವೇಶನ ದಲ್ಲೇ ಮಹಾರಾಷ್ಟ್ರ ಮಾದರಿ ‘ಮೌಢ್ಯ ನಿಷೇಧ ಪ್ರತಿಬಂಧಕ ಕುರಿತ ವಿಧೇಯಕ' ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
2 ವರ್ಷ ಹಿಂದೆಯೇ ಸಿದ್ಧವಾಗಿದ್ದ ಈ ವಿಧೇಯಕಕ್ಕೆ ಕೆಲವು ಬದಲಾವಣೆ ಮಾಡಿ ಈ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸಭೆಯಲ್ಲಿ ಸೋಮವಾರ ಈ ವಿಚಾರ ತಿಳಿಸಿದ್ದಾರೆ.
ಇದರೊಂದಿಗೆ ರಾಜ್ಯ ಸರ್ಕಾರ 2014ರಲ್ಲೇ ಮಂಡಿಸಲು ಸಿದ್ಧತೆ ನಡೆಸಿ ಕೈಬಿಟ್ಟಿದ್ದ ವಿಧೇಯಕಕ್ಕೆ ಮತ್ತೆ ಜೀವ ಬಂದಂತಾಗಿದೆ.
ಅಷ್ಟೇ ಅಲ್ಲ. ಈ ಬಾರಿ ಮಹಾರಾಷ್ಟ್ರ ಮಾದರಿಯ ವಿಧೇಯಕ ಸಿದ್ಧಪಡಿಸಲಾಗಿದ್ದು, ಇದಕ್ಕೆ ಈಗಾಗಲೇ ಸಚಿವ ಸಂಪುಟ ಉಪ ಸಮಿತಿ ಒಪ್ಪಿಗೆಯನ್ನೂ ಸೂಚಿಸಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕದ ಕರಡು ಚರ್ಚೆಗೆ ಬಂದರೆ ನಂತರ ಇದೇ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಲಿದೆ. ಇಲ್ಲವಾದರೆ ವಿಧೇಯಕ ಮಂಡನೆ ಮುಂದಿನ ಅಧಿವೇಶನಕ್ಕೆ ಹೋದರೂ ಅಚ್ಚರಿ ಇಲ್ಲ ಎನ್ನುತ್ತವೆ ಕಾನೂನು ಇಲಾಖೆ ಮೂಲಗಳು.
ಸಿಎಂ ಹೇಳಿದ್ದೇನು?: ವಿಧಾನಸಭೆಯಲ್ಲಿ ಸೋಮ ವಾರ ಬರ ಪರಿಸ್ಥಿತಿ ಚರ್ಚೆ ವೇಳೆ ಪ್ರತಿ ಪಕ್ಷ ನಾಯಕ ಜಗದೀಶ್ ಶೆಟ್ಟರ್, ಪರ್ಜನ್ಯ ಹೋಮ ಮಾಡುವ ಸರ್ಕಾರ ಮೌಢ್ಯವನ್ನು ಪೋಷಿಸುತ್ತಿದ್ದರೂ ವಿಚಾರವಾ ದಿಗಳು ಏಕೆ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು. ನಿಮಗೆ ಪ್ರತಿ 6 ತಿಂಗಳಿಗೊಮ್ಮೆ ವಿಚಾರವಾದಿಗಳು, ಸ್ವಾಮೀಜಿಗಳು ಮೌಢ್ಯ ನಿಷೇಧ ಕಾಯ್ದೆ ಜಾರಿಗೊಳಿ ಸುವಂತೆ ಮನವಿ ಸಲ್ಲಿಸುತ್ತಾರೆ. ಅವರೆಲ್ಲಾ ಈಗ ಪರ್ಜನ್ಯ ಹೋಮದ ಬಗ್ಗೆ ಮಾತನಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಣಕಿದರು.
ಇದರಿಂದ ಸಿಟ್ಟಾದ ಸಿದ್ದರಾಮಯ್ಯ, ನಂಬಿಕೆಗೂ, ಮೂಢ ನಂಬಿಕೆಗೂ ವ್ಯತ್ಯಾಸವಿದೆ. ಕೆಲವರು ದೇವರನ್ನು ನಂಬಿ ಪೂಜಿಸುತ್ತಾರೆ. ಅದರಿಂದ ಸಮಾಜಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಅದೇ ಮೂಢನಂಬಿಕೆ ಸಮಾಜಕ್ಕೆ ಕಂಟಕ ತರುತ್ತದೆ. ಆದ್ದರಿಂದ ಸರ್ಕಾರ ಮೌಢ್ಯ ನಿಷೇಧಿಸುವ ವಿಧೇಯಕ ಸಿದ್ಧಪಡಿಸಿದೆ ಎಂದು ಅವರು ಹೇಳಿದರು. ಈ ಅಧಿವೇಶನದಲ್ಲೇ ಸರ್ಕಾರ ವಿಧೇಯಕ ಮಂಡಿಸುತ್ತಿದ್ದು, ಪ್ರತಿಪಕ್ಷಗಳು ಇದರ ಮೇಲೆ ಚರ್ಚೆ ನಡೆಸಬಹುದಾಗಿದೆ ಎಂದೂ ಅವರು ತಿಳಿಸಿದರು. ಈ ಮೂಲಕ ಮೌಢ್ಯ ನಿಷೇಧ ಕಾಯ್ದೆಗೆ ಸರ್ಕಾರ ಸಿದ್ಧವಿರುವುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಕರಡು ಕಾನೂನು ಶಾಲೆ ಸಹಯೋಗದಲ್ಲಿ 2013ರಲ್ಲೇ ಸಿದ್ಧವಾಗಿತ್ತು. ಆದರೆ, ಇದಕ್ಕೆ ಬಿಜೆಪಿ ಮತ್ತು ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದರು. ಕಾಯ್ದೆ ಜಾರಿಗೆ ತಂದರೆ ಜನರು ಪೂಜೆ ಮಾಡುವುದಕ್ಕೆ ಅವಕಾಶವಿಲ್ಲ ಎಂದೆಲ್ಲಾ ಆರೋಪಿಸಿ ಸರ್ಕಾರವನ್ನು ಟೀಕಿಸಲಾಗಿತ್ತು. ಇದರಿಂದ ಸರ್ಕಾರ ಕರಡು ವಿಧೇಯಕ ಸಿದ್ಧವಾದರೂ ಸದನದಲ್ಲಿ ಮಂಡಿಸಲಿಲ್ಲ. ಬದಲಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಸಚಿವ ಕಾಗೋಡು ತಿಮ್ಮಪ್ಪ ಅವರನ್ನೊಳಗೊಂಡ ಸಂಪುಟ ಉಪ ಸಮಿತಿ ರಚಿಸಿತ್ತು. ಈ ಸಮಿತಿ ಹಿಂದಿನ ವಿಧೇಯಕಕ್ಕೆ ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲಾಗಿ ರುವ ಅಂಶಗಳನ್ನು ಕರಡು ಪ್ರಸ್ತಾವಕ್ಕೆ ಸೇರಿಸಿದೆ. ಈ ಮೂಲಕ ಮಹಾರಾಷ್ಟ್ರ ಮಾದರಿ ಎನ್ನುವಂತೆ ಮಾರ್ಪಾಡು ಮಾಡಿ ಅನುಮೋದಿಸಿದೆ. ಈ ಕರಡು ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕಿದ್ದು, ನಂತರ ಸದನದಲ್ಲಿ ಮಂಡನೆಯಾಗಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಸಿದ್ಧತೆಯನ್ನು ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.