ಹೇಳಿ ಕೇಳಿ ಈತ 2000 ಕೋಟಿ ಒಡೆಯ; ಜಿಪುಣತನ ತೋರಿಸಿದ್ದಕ್ಕೆ ಮಾಡಿದ್ರು ಕಿಡ್ನಾಪ್!

By Suvarna Web DeskFirst Published Jan 27, 2018, 10:34 AM IST
Highlights

ಕೋಟ್ಯಧೀಶ ಉದ್ಯಮಿ ಮಲ್ಲಿಕಾರ್ಜುನ್ ಅವರ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಡಿಎಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಆ್ಯಂಡ್ ಗ್ಯಾಂಗ್‌'ನ ಬಗ್ಗೆ ಬಗೆದಷ್ಟು ಕುತೂಹಲಕಾರಿ ಸಂಗತಿಗಳು ಬಯಲಾಗುತ್ತಿವೆ.

ಬೆಂಗಳೂರು (ಜ.27): ಕೋಟ್ಯಧೀಶ ಉದ್ಯಮಿ ಮಲ್ಲಿಕಾರ್ಜುನ್ ಅವರ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಡಿಎಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಆ್ಯಂಡ್ ಗ್ಯಾಂಗ್‌'ನ ಬಗ್ಗೆ ಬಗೆದಷ್ಟು ಕುತೂಹಲಕಾರಿ ಸಂಗತಿಗಳು ಬಯಲಾಗುತ್ತಿವೆ.

ಆಗರ್ಭ ಶ್ರೀಮಂತನಾಗಿರುವ ಮಲ್ಲಿಕಾರ್ಜುನ್ ಹಣ ಬಿಚ್ಚುತ್ತಿಲ್ಲ ಎಂಬ ಕಾರಣಕ್ಕೆ ಉದ್ಯಮಿಯನ್ನು ಆರೋಪಿಗಳು ಅಪಹರಿಸಿದ್ದರು. ವಿಚಿತ್ರ ಎಂದರೆ ಪ್ರಕರಣದಲ್ಲಿ ಜೈಲು ಸೇರಿರುವ ಜೆಡಿಎಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ  ಅರ್ಷಿಯಾ (32) 20 ಕೋಟಿ, ಈಕೆಯ ಪ್ರಿಯಕರ ರೇಣುಕಾ ಪ್ರಸಾದ್ (41) 300 ಕೋಟಿ, ಕಾಂತರಾಜ್‌ಗೆ ಕೋಟ್ಯಂತರ ರೂಪಾಯಿ ಆಸ್ತಿ ಎಚ್‌ಎಸ್‌ಆರ್ ಲೇಔಟ್'ನಲ್ಲಿದೆ ಎನ್ನಲಾಗಿದೆ.

ಕೋಗಿಲು ಕ್ರಾಸ್ ನಿವಾಸಿ ಉದ್ಯಮಿ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಣ್ಣ (70) ಅವರ ಘೋಷಿತ ಆಸ್ತಿ ಬರೋಬ್ಬರಿ ₹2 ಸಾವಿರ ಕೋಟಿ. ಪರಿಚಯದ ಆಧಾರದಲ್ಲಿ ಮಲ್ಲಣ್ಣ ಬಳಿ ರೇಣುಕಾ ಪ್ರಸಾದ್ ಕೆಲ ತಿಂಗಳ ಹಿಂದೆ ಆರೋಪಿ   ಕಾಂತರಾಜ್‌'ನ ಸಹೋದರ ಲಕ್ಷ್ಮೀಪತಿಗೆ ಉದ್ಯಮಿ ಬಳಿ ₹30 ಲಕ್ಷ ಸಾಲ ಕೊಡಿಸಿದ್ದ. ಲಕ್ಷ್ಮೀಪತಿ ಪಡೆದ ಹಣಕ್ಕೆ ಸರಿಯಾಗಿ ಬಡ್ಡಿ ಕಟ್ಟದ್ದಕ್ಕೆ  ಸಾಲ ಕೊಡಿಸಿದ್ದ ರೇಣುಕಾಪ್ರಸಾದ್‌ನನ್ನು  ನಿಂದಿಸಿದ್ದರು.

ಕಾಂತರಾಜ್ ಬಾಗಲೂರು ಬಳಿ ಜಮೀನು ಮಾರಾಟದ ಬಗ್ಗೆ ತಿಳಿಸಿದ್ದರೂ ಮಲ್ಲಣ್ಣ ಆಸಕ್ತಿ  ತೋರಿರಲಿಲ್ಲ. ಇಷ್ಟೊಂದು ದುಡ್ಡಿದ್ದರೂ ಹಣ ಬಿಚ್ಚುತ್ತಿಲ್ಲವಲ್ಲ ಎಂದು ಆರೋಪಿಗಳು ಕೋಪಗೊಂಡಿದ್ದರು. ಬಳಿಕ ಕಾಂತರಾಜ್ ತನ್ನ ಸಹಚರ ಪ್ರದೀಪ್ ಜತೆ ಕಾರಿನಲ್ಲಿ ಕೋಗಿಲು ಕ್ರಾಸ್  ಮಾರುತಿನಗರಕ್ಕೆ ಜ.11 ರಂದು ಬೆಳಗ್ಗೆ ಬಂದು ಮನೆ ಬಳಿಯೇ ಮಲ್ಲಣ್ಣರನ್ನು ಅಪಹರಿಸಿದ್ದ. ಬಳಿಕ ರೇಣುಕಾ ಪ್ರಸಾದ್ ಮತ್ತು ಅರ್ಷಿಯಾಗೆ ವಿಷಯ ತಿಳಿಸಿ, ತಾನಿದ್ದ ಎಚ್‌ಎಸ್‌ಆರ್ ಲೇಔಟ್‌ಗೆ ಕರೆಯಿಸಿಕೊಂಡಿದ್ದ.

ಅಲ್ಲಿಂದ ಆರೋಪಿಗಳು ಅರ್ಷಿಯಾಳ ಇನ್ನೋವಾ ಕಾರಿನಲ್ಲಿ ಉದ್ಯಮಿ ಕೈ ಕಟ್ಟಿ, ಮುಖಕ್ಕೆ ಬಟ್ಟೆ ಕಟ್ಟಿ ಹಿಂಬದಿ ಸೀಟಿನಲ್ಲಿ ಹಾಕಿ ಚಿಕ್ಕಬಳ್ಳಾಪುರಕ್ಕೆ ಕರೆದೊಯ್ದು ಕೂಡಿ ಹಾಕಿ ಹಣ ಪೀಕಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದರು.

ಕೈಗೆ ಸಿಕ್ಕವರ ಬಿಟ್ಟು ಕಳಿಸಿದ್ರು:

ಚಿಕ್ಕಬಳ್ಳಾಪುರದ ಕಡೆ ಆರೋಪಿಗಳು ಹೋಗುತ್ತಿದ್ದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿನ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಅದೇ ರಸ್ತೆಯಲ್ಲಿ  ಬಂದ ಆರೋಪಿಗಳು ಸ್ವಲ್ಪ ದೂರುದಲ್ಲಿಯೇ ಪೊಲೀಸರನ್ನು ನೋಡಿ ಕಾರು ನಿಲ್ಲಿಸಿದ್ದರು. ಈ ವೇಳೆ ಪ್ರದೀಪ್ ಕಾರಿನಿಂದ ಇಳಿದು ಕಾಲ್ಕಿತ್ತಿದ್ದ. ವಾಹನದ ಮೇಲೆ ‘ಗವರ್ನ್'ಮೆಂಟ್ ಆಫ್ ಇಂಡಿಯಾ’ ಎಂದು ಬರೆದಿದ್ದರಿಂದ ಪೊಲೀಸರು ಹೆಚ್ಚು ಪ್ರಶ್ನೆ ಮಾಡದೆ ಬಿಟ್ಟು ಕಳುಹಿಸಿದ್ದರು. ವಿಚಿತ್ರ ಎಂದರೆ ಪ್ರದೀಪ್‌ಗೆ ಉದ್ಯಮಿಯನ್ನು ಅಪಹರಿಸುವ ಸಂಚಿನ ಬಗ್ಗೆ ಕಾಂತರಾಜ್ ತಿಳಿಸಿರಲಿಲ್ಲ.

ದೂರು ನೀಡಲು ನಿರಾಕರಣೆ:

ತಂದೆ ಅಪಹರಣ ವಿಚಾರ ತಿಳಿದ ಕೂಡಲೇ ಉದ್ಯಮಿ ಪುತ್ರ ರವಿಕುಮಾರ್ ನೇರವಾಗಿ ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ದೂರು ನೀಡುವ ಮುನ್ನವೇ ಆರೋಪಿಗಳಿಗೆ ಹಣ ಕೊಟ್ಟು ತಂದೆಯನ್ನು ಬಿಡಿಸಿಕೊಂಡು ಬಂದಿದ್ದರು. ಬಳಿಕ ದೂರು ನೀಡುವಂತೆ ಅಧಿಕಾರಿಗಳು ಕೇಳಿದರೆ, ಬೇಜವಾಬ್ದಾರಿಯಾಗಿ ಉತ್ತರಿಸಿದ್ದರು. ಬಳಿಕ ಪೊಲೀಸರ ಒತ್ತಾಯಕ್ಕೆ ಮಣಿದು ರವಿಕುಮಾರ್ ದೂರು ನೀಡಿದ್ದರು.

 

click me!