ಮಹಿಳಾ ಆತ್ಮಾಹುತಿ ದಾಳಿಗಾರ್ತಿ ಅರೆಸ್ಟ್

By Suvarna Web DeskFirst Published Jan 27, 2018, 10:00 AM IST
Highlights

ಆತ್ಮಹತ್ಯಾ ದಾಳಿಕೋರಳು ಎನ್ನಲಾದ ಪುಣೆ ಮೂಲದ ಯುವತಿಯೊಬ್ಬಳನ್ನು ಜಮ್ಮು-ಕಾಶ್ಮೀರ ಪೊಲೀಸರು ಗುರುವಾರ ತಡರಾತ್ರಿ ಇಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಶ್ರೀನಗರ : ಆತ್ಮಹತ್ಯಾ ದಾಳಿಕೋರಳು ಎನ್ನಲಾದ ಪುಣೆ ಮೂಲದ ಯುವತಿಯೊಬ್ಬಳನ್ನು ಜಮ್ಮು-ಕಾಶ್ಮೀರ ಪೊಲೀಸರು ಗುರುವಾರ ತಡರಾತ್ರಿ ಇಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಗಣರಾಜ್ಯ ದಿನದ ಸಂದರ್ಭದಲ್ಲಿ ಕಾಶ್ಮೀರೇತರ ಮಹಿಳೆಯೊಬ್ಬಳು ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದಾಳೆ ಎಂಬ ಖಚಿತ ಮಾಹಿತಿ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಈಕೆ ಸಿಕ್ಕಿಬಿದ್ದಿದ್ದಾಳೆ. ಇದರೊಂದಿಗೆ ಭಾರಿ ಸಂಭಾವ್ಯ ದಾಳಿಯೊಂದನ್ನು ಜಮ್ಮು-ಕಾಶ್ಮೀರ ಪೊಲೀಸರು ತಪ್ಪಿಸಿದ್ದಾರೆ.

ಯುವತಿಯನ್ನು ಸಾದಿಯಾ ಅನ್ವರ್ ಶೇಖ್ ಎಂದು ಗುರುತಿಸಲಾಗಿದೆ, ಈಕೆ ಕಾಶ್ಮೀರ ಕಣಿವೆಗೆ ಸ್ಥಳಾಂತರಗೊಂಡಿದ್ದಳು. ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರ ಸಂಪರ್ಕದಲ್ಲಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ, ‘ನಮಗೆ ಈ ಬಗ್ಗೆ ಸುಳಿವು ಇತ್ತು. ಈ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೆವು. ಇದರ ಜಾಡು ಬೆನ್ನಟ್ಟಿ ಹೋದಾಗ ಪುಣೆ ಮೂಲದ ಯುವತಿ ಸಿಕ್ಕಿಬಿದ್ದಳು’ ಎಂದು ಎಡಿಜಿಪಿ ಮುನೀರ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.

ಬಂಧಿತಳ ವಿಚಾರಣೆ ನಡೆದಿದೆ. ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳೊಂದಿಗೂ ನಾವು ಸಂಪರ್ಕದಲ್ಲಿದ್ದೇವೆ. ಇನ್ನೂ ಕೆಲವು ಮಾಹಿತಿಗಳು ಸಿಗಬೇಕಿದೆ. ಆನಂತರ ಈ ವಿಷಯದಲ್ಲಿ ಒಂದು ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿದೆ ಎಂದು ಅವರು ಹೇಳಿದರು.

2015ರಲ್ಲೂ ವಿಚಾರಣೆ ನಡೆದಿತ್ತು: ಪುಣೆ ಕಾಲೇಜೊಂದರಲ್ಲಿ ಕೇವಲ 11ನೇ ತರಗತಿ (ಪ್ರಥಮ ಪಿಯುಸಿ) ಬಾಲಕಿಯಾದ ಸಾದಿಯಾ ಶೇಖ್, 2015ರಲ್ಲಿ ಕೂಡ ಒಮ್ಮೆ ಪುಣೆ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿದ್ದಳು. ಐಸಿಸ್ ತತ್ವಗಳ ಸೆಳೆತಕ್ಕೆ ಒಳಗಾಗಿ ಈಕೆ ಸಿರಿಯಾ ಹಾಗೂ ಇರಾಕ್‌ಗೆ ತೆರಳಲು ಯೋಚನೆ ಮಾಡುತ್ತಿದ್ದಳು ಎಂಬ ಶಂಕೆಯ ಮೇರೆಗೆ ಪುಣೆ ಭಯೋತ್ಪಾದಕ ನಿಗ್ರಹ ದಳದವರು ಈಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಈಕೆಯನ್ನು ವಿಚಾರಣೆ ನಡೆಸಿ ಮನಃಪರಿವರ್ತನೆ ಕೇಂದ್ರಕ್ಕೂ ಕಳಿಸಿ ಕೊಟ್ಟಿದ್ದರು. ಆದರೆ ಹಳೆಯ ಚಾಳಿ ಬಿಡದ ಈಕೆ ಕಾಶ್ಮೀರಕ್ಕೆ ತೆರಳಿ ಉಗ್ರ ಚಟುವಟಿಕೆಯಲ್ಲಿ ನಿರತಳಾಗಿದ್ದಳು ಎಂದು ಹೇಳಲಾಗಿದೆ.

click me!