
ಬೆಂಗಳೂರು(ಸೆ.20) ಆಪರೇಶನ್ ಕಮಲ ವಿಚಾರಕ್ಕೆ ಇಷ್ಟು ದಿನ ಸುಮ್ಮನಿದ್ದ ಕುಮಾರಸ್ವಾಮಿ ಏಕಾಏಕಿ ಪ್ರತಿಕ್ರಿಯೆ ನೀಡಿದ್ದು ಬಿಎಸ್ ವೈ ಮೇಲೆ ವಾಗ್ದಾಳಿ ಮಾಡಿದ್ದು ಅಲ್ಲದೇ ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ವಿಚಾರವನ್ನು ಮತ್ತೆ ಕೆದಕಿದರು. ಸರಕಾರ ನಮ್ಮ ಕೈಯಲ್ಲಿದೆ ಎಂಬ ಎಚ್ಚರಿಕೆ ನೀಡಿದರು.
ಇದಾಗಿ ಅರ್ಧ ಗಂಟೆಯಲ್ಲೆ ಪ್ರತಿಕ್ರಿಯೆ ನೀಡಿದ ಬಿಎಸ್ ವೈ, ಕೇಂದ್ರ ಸರಕಾರ ನಮ್ಮದು, ತನಿಖೆ ಬೇಕಾದರೆ ಮಾಡಿಕೊಳ್ಳಲಿ ಎಂದು ಪ್ರತಿ ಸವಾಲು ಹಾಕಿದರು. ಈ ನಡುವೆ ಇಪ್ಪತ್ತು ಅಧಿಕ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಲಾಗಿದೆ ಎಂಬ ಸುದ್ದಿ ಸದ್ದು ಮಾಡಿತು.
ಹಾಸನದಲ್ಲಿ ಮತ್ತೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಾನೇ ಶಾಸಕರನ್ನು ಮುಂಬೈಗೆ ಕಳಿಸಿದ್ದೇನೆ. ಬಿಎಸ್ ವೈ ಗೆ ತೊಂದರೆ ಆಗಬಾರದು ಎಂದು ಹೀಗೆ ಮಾಡಿದ್ದೇನೆ ಎಂದು ವ್ಯಂಗ್ಯವಾಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಶಾಸಕರನ್ನು ಕಳಿಸಿರುವುದು ಊಹಾಪೋಹ ಎಂದರು. ಯಡಿಯೂರಪ್ಪ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಶುರು ಮಾಡಿದರು.
ಆದರೆ ಯಾವ ಸ್ಪಷ್ಟತೆಯೂ ಇದರಿಂದ ಸಿಗುತ್ತಿಲ್ಲ. ಒಂದೇ ದಿನಕ್ಕೆ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಸುಮ್ಮನೆ ಕುಳಿತುಕೊಂಡಿಲ್ಲ ಎನ್ನುವುದೆಂತೂ ಸತ್ತ. ಹಾಗಾದರೆ ನಿಜಕ್ಕೂ ಬೆಳಗಾವಿ ಬಂಡಾಯ ಶಮನವಾಗಿಲ್ಲವಾ? ಇಷ್ಟಕ್ಕೂ ಮೈತ್ರಿ ಸರಕಾರಕ್ಕೆ ಕಂಟಕ ಶುರುವಾಗಿರುವುದು ಎಲ್ಲಿಂದ? ಸರಕಾರದಲ್ಲಿ ಇರುವ ಗೊಂದಲಗಳಿಗೆ ಕಾರಣಗಳು
1. ವಿರೋಧ ಪಕ್ಷವಾಗಿದ್ದ ಬಿಜೆಪಿ ಸರಕಾರದ ಮೇಲೆ ದಾಳಿ ಮಾಡಿದ್ದಕ್ಕಿಂತ ಹೆಚ್ಚು ಕಾಲ ಕಾಂಗ್ರೆಸ್ ನಾಯಕರ ಕಿತ್ತಾಟವೇ ಸರಕಾರಕ್ಕೆ ಮುಜುಗರ ತಂದಿತು. ಒಂದು ಕಡೆ ಸಮನ್ವಯ ಸಮಿತಿಯಲ್ಲಿನ ಗೊಂದಲ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಗಳು ಮೈತ್ರಿ ಸರಕಾರಕ್ಕೆ ಮುಜುಗರ ತಂದಿಟ್ಟವು
2. ಬೆಳಗಾವಿ ಬಂಡಾಯ: ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರಾದ ಜಾರಕಿಹೊಳಿ ಬ್ರದರ್ಸ್ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಶೀತಲ ಸಮರ ಮೈತ್ರಿ ಸರಕಾರಕ್ಕೆ ದೊಡ್ದ ಕಂಟಕವಾಗಿ ಕಂಡುಬಂತು.
3. ಬಳ್ಳಾರಿ ಬಂಡಾಯ: ಬಳ್ಳಾರಿಯ ಶಾಸಕರು ಬೆಂಗಳೂರಿಗೆ ಬಂದು ನಮ್ಮ ಜಿಲ್ಲೆಯ ಯಾವುದಾದರೂ ಒಬ್ಬ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
4. ಸಮನ್ವಯ ಕೊರತೆ: ಹಿಂದಿನ ಸರಕಾರದಲ್ಲಿ ಪ್ರಭಾವಿಗಳು ಎನಿಸಿಕೊಂಡ ಕಾಂಗ್ರೆಸ್ ನ ಒಂದು ತಂಡ ನಿಧಾನವಾಗಿ ತೆರೆ ಮರೆಗೆ ಸರಿಯಿತು. ಸರಿಯಿತು ಎನ್ನುವುದಕ್ಕಿಂತ ಸರಿಸಲಾಯಿತು ಎನ್ನುಬಹುದು. ಹಾಗಾಗಿ ಸ್ಥಾನ ಕಳೆದುಕೊಂಡವರು ಸುಮ್ಮನೆ ಕೂರಲಿಲ್ಲ.
5. ರೇವಣ್ಣ ಹಸ್ತಕ್ಷೇಪ: ವರ್ಗಾವಣೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸೂಪರ್ ಸಿಎಂ ಎಂಬ ವರ್ತನೆ ಮಾಡುತ್ತಿದ್ದಾರೆ ಎಂಬ ಆರೋಪ ಮೈತ್ರಿ ಸರಕಾರ ಭಾಗವಾಗಿರುವ ಕಾಂಗ್ರೆಸ್ ನಿಂದಲೇ ಕೇಳಿಬಂದಿತ್ತು.
"
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.