ವಾಸಿಸುವವನೇ ಮನೆಯೊಡೆಯ; ಐತಿಹಾಸಿಕ ಕಾಯ್ದೆಗೆ ರಾಷ್ಟ್ರಪತಿ ಅಂಕಿತ

Published : Oct 26, 2017, 07:40 AM ISTUpdated : Apr 11, 2018, 01:02 PM IST
ವಾಸಿಸುವವನೇ ಮನೆಯೊಡೆಯ; ಐತಿಹಾಸಿಕ ಕಾಯ್ದೆಗೆ ರಾಷ್ಟ್ರಪತಿ ಅಂಕಿತ

ಸಾರಾಂಶ

ರಾಜ್ಯದ 58 ಸಾವಿರ ತಾಂಡಾ, ಹಟ್ಟಿ, ದೊಡ್ಡಿ, ಪಾಳ್ಯ ಮತ್ತು ಕ್ಯಾಂಪ್‌'ಗಳಂತಹ ದಾಖಲೆ ಇಲ್ಲದ ಜನವಸತಿ ಪ್ರದೇಶಗಳಲ್ಲಿ ವಾಸವಾಗಿರುವ ವಾಸದ ಮನೆಗಳನ್ನು ಇನ್ನು ಮುಂದೆ ವಾಸವಾಗಿರುವವರ ಹೆಸರಿನಲ್ಲೇ ನೋಂದಣಿ ಮಾಡಿಕೊಳ್ಳುವ ಹಕ್ಕನ್ನು ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ ನೀಡುತ್ತದೆ.

ಬೆಂಗಳೂರು(ಅ.26): ರಾಜ್ಯದ 58 ಸಾವಿರ ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ವಾಸಿಸುವವನೇ ಮನೆಯೊಡೆಯ ಎಂಬ ಹಕ್ಕು ನೀಡುವ ಕ್ರಾಂತಿಕಾರಿ ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ರಾಷ್ಟ್ರಪತಿಗಳು ಕೊನೆಗೂ ಅಂಕಿತ ಹಾಕಿದ್ದಾರೆ.

ಕಳೆದ ಮಾರ್ಚ್ 25ರಂದೇ ವಿಧಾನಮಂಡಲದಲ್ಲಿ ಅಂಗೀಕಾರಗೊಂಡಿದ್ದರೂ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಒಪ್ಪಿಗೆಗೆ ಶಿಫಾರಸು ಮಾಡಿದ್ದರು. ಈ ಬಗ್ಗೆ ಶಾಸಕ ಕೆ.ಶಿವಮೂರ್ತಿ ನಾಯಕ್ ನೇತೃತ್ವದ ನಿಯೋಗ ಹಿಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ, ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಮನವಿಯನ್ನೂ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ಸಂಜೆ ಮಸೂದೆಗೆ ಅಂಕಿತ ಹಾಕಿದ್ದಾರೆ.

1961ರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದ 58 ಸಾವಿರ ಜನವಸತಿಗಳಾದ ಗೊಲ್ಲರ ಹಟ್ಟಿ, ಲಂಬಾಣಿ ತಾಂಡಾ, ವಡ್ಡರ ಹಟ್ಟಿ, ಕುರುಬರ ಹಟ್ಟಿ, ನಾಯಕರ ಹಟ್ಟಿ, ಮಜರೆ ಗ್ರಾಮ, ದೊಡ್ಡಿ, ಪಾಳ್ಯ, ಕ್ಯಾಂಪ್, ಗೌಳಿ ದೊಡ್ಡಿ, ಕಾಲೋನಿಯಂತಹ ದಾಖಲೆ ಇಲ್ಲದ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವುದು ಕಾಯ್ದೆಯ ಉದ್ದೇಶವಾಗಿದೆ. ದೇಶದಲ್ಲಿ ಉಳುವವನೇ ಒಡೆಯ ಎಂಬ ಕಾಯ್ದೆ ಬಂದ ತರುವಾಯ ವಾಸಿಸುವವನೇ ಮನೆಯೊಡೆಯ ಎಂಬ ಈ ಕಾಯ್ದೆಯು ಕ್ರಾಂತಿಕಾರಕ ಎಂದೇ ಬಣ್ಣಿಸಲಾಗಿದೆ. ರಾಜ್ಯದಲ್ಲಿ ಮನೆ ಇಲ್ಲದ ಲಕ್ಷಾಂತರ ಕುಟುಂಬಗಳಿಗೆ ಈ ಕಾಯ್ದೆಯಿಂದ ಸ್ವಂತ ಸೂರು ದೊರಕಲಿದೆ.

ಕಾಯ್ದೆಯಿಂದ ಆಗುವ ಪರಿಣಾಮ ಏನು?

ರಾಜ್ಯದ 58 ಸಾವಿರ ತಾಂಡಾ, ಹಟ್ಟಿ, ದೊಡ್ಡಿ, ಪಾಳ್ಯ ಮತ್ತು ಕ್ಯಾಂಪ್‌'ಗಳಂತಹ ದಾಖಲೆ ಇಲ್ಲದ ಜನವಸತಿ ಪ್ರದೇಶಗಳಲ್ಲಿ ವಾಸವಾಗಿರುವ ವಾಸದ ಮನೆಗಳನ್ನು ಇನ್ನು ಮುಂದೆ ವಾಸವಾಗಿರುವವರ ಹೆಸರಿನಲ್ಲೇ ನೋಂದಣಿ ಮಾಡಿಕೊಳ್ಳುವ ಹಕ್ಕನ್ನು ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ ನೀಡುತ್ತದೆ.

ಭೂ ಸುಧಾರಣೆಗಳ ತಿದ್ದುಪಡಿ ಕಾಯ್ದೆಯಲ್ಲಿ ‘ಯಾವುದೇ ಇತರ ಕಾನೂನು ಏನೇ ಇದ್ದರೂ, 1979ರ ಜನವರಿ ಮೊದಲ ದಿನಕ್ಕೆ ನಿಕಟಪೂರ್ವದಲ್ಲಿ ಯಾವುದೇ ಕೃಷಿ ಕಾರ್ಮಿಕನು, ಯಾವುದೇ ಗ್ರಾಮದಲ್ಲಿ ತನಗೆ ಸೇರಿರದ ಭೂಮಿಯಲ್ಲಿರುವ ವಾಸದ ಮನೆಯಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದಲ್ಲಿ, ಅಂಥ ವಾಸದ ಮನೆಯನ್ನು, ಅದು ಇರುವ ನಿವೇಶನದ ಸಹಿತವಾಗಿ ಮತ್ತು ಅದಕ್ಕೆ ನಿಕಟವಾಗಿ ತಾಗಿಕೊಂಡಿರುವ ಮತ್ತು ಅದರ ಅನುಭೋಗಕ್ಕೆ ಅವಶ್ಯವಾಗಿರುವ ಭೂಮಿಯು ಅದರ ಮಾಲೀಕನಾಗಿ ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು’ ಎಂದು ಹೇಳಿದೆ. ಅಂದರೆ, ದಾಖಲೆಗಳಿಲ್ಲದಿದ್ದರೂ, ಕೃಷಿ ಕಾರ್ಮಿಕ 1979ರ ಜನವರಿಗೂ ಪೂರ್ವದಲ್ಲಿ ತಾನು ವಾಸವಾಗಿರುವ ಮನೆ ಮತ್ತು ಅದಕ್ಕೆ ಹೊಂದಿಕೊಂಡ ಕನಿಷ್ಠ ಬಳುವಳಿಯ ಭೂಮಿಯು ಆತನದ್ದೇ ಎಂಬುದನ್ನು ಕಾಯ್ದೆ ಹೇಳುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್