ಭೌತಿಕ ಚಿನ್ನ, ಗೋಲ್ಡ್ ಇಟಿಎಫ್ ಅಥವಾ ಗೋಲ್ಡ್ ಬಾಂಡ್- ಯಾವುದರಲ್ಲಿ ಹಣ ಹೂಡುವುದು ಉತ್ತಮ?

By ಆಧಿಲ್ ಶೆಟ್ಟಿFirst Published Oct 25, 2017, 9:32 PM IST
Highlights

ದೀರ್ಘಾವಧಿ ಹೂಡಿಕೆಯ ಅವಕಾಶಗಳನ್ನು ಎದುರು ನೋಡುತ್ತಿದ್ದೀರಾ? ಒಳ್ಳೆಯ ಲಾಭ, ಜೊತೆಗೆ, ಬಂದ ಆದಾಯದ ಮೇಲೆ ತೆರಿಗೆ ಪ್ರಯೋಜನ ಪಡೆಯಬೇಕೆ? ಹಾಗಾದರೆ ಭೌತಿಕ ಚಿನ್ನ ಖರೀದಿಸುವ ಯೋಚನೆಗಿಂತ ಒಂದು ಹೆಜ್ಜೆ ಮುಂದಿಟ್ಟು ಯೋಚಿಸಿ...         

ಕೆಲವು ಸಂದರ್ಭಗಳಲ್ಲಿ ಚಿನ್ನ ಖರೀದಿಸುವುದು ಮಂಗಳದಾಯಕ ಎಂಬ ನಂಬಿಕೆ ಭಾರತೀಯರಲ್ಲಿದೆ. ಇನ್ನೊಂದು ಕಡೆ, ಚಿನ್ನಕ್ಕೆ ಪರ್ಯಾಯವಾಗಿರುವ ಗೋಲ್ಡ್ ಎಕ್ಸ್’ಚೇಂಜ್ ಟ್ರೇಡೆಡ್ ಫಂಡ್ (ETF) ಹಾಗೂ  ಸವರಿನ್ ಗೋಲ್ಡ್ ಬಾಂಡ್ (SGB)ಗಳು ಕೂಡಾ ಜನಪ್ರಿಯವಾಗಿವೆ.

ಇಂತಹ ಸಂದರ್ಭದಲ್ಲಿ ನೀವು ಚಿನ್ನದಲ್ಲಿ ಹೂಡಿಕೆ ಮಾಡುವ ಆಲೋಚನೆಯಲ್ಲಿದ್ದರೆ, ನೀವು ಅದರ ನಗದೀಕರಣ, ಸುರಕ್ಷತೆ, ತೆರಿಗೆ ಹಾಗೂ ಹೂಡಿಕೆಯ ಸರಳತೆಯ ದೃಷ್ಟಿಯಿಂದಲೂ ಯೋಚಿಸುವ ಅಗತ್ಯವಿದೆ. ಆದುದರಿಂದ ಚಿನ್ನದಲ್ಲಿ ಯಾವ್ಯಾವ ರೀತಿಯಲ್ಲಿ ಹೂಡಿಕೆ ಮಾಡಬಹುದು ಎಂದು ನೋಡೋಣ...

ನಗದೀಕರಣ:

ಭೌತಿಕ ಚಿನ್ನದಲ್ಲಿ ಹೂಡಿಕೆ ಮಾಡುವುದಕ್ಕೆ ಅದರ ಸುಲಭ ನಗದೀಕರಣ ಮುಖ್ಯಕಾರಣ. ಈ ರೀತಿಯ ಹೂಡಿಕೆಯಲ್ಲಿ, ಹೂಡಿಕೆದಾರರು ಚಿನ್ನದ ದರಕ್ಕೆ ಅನುಗುಣವಾಗಿ ಯಾವಾಗ ಬೇಕಾದರೂ ಹಿಂದೆಸರಿಯಬಹುದು.  ಆದರೆ, ಇಂತಹ ಸಂದರ್ಭಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆಗಳಾಗುವುದನ್ನು ಗಮನದಲ್ಲಿಡಬೇಕು.   ಉದಾಹರಣೆಗೆ,  ಚಿನ್ನದ ವರ್ತಕ  ಮಾರಾಟ ಮಾಡುವ ಬೆಲೆ ₹30000/10 ಗ್ರಾಂ ಎಂದಿಟ್ಟುಕೊಳ್ಳಿ.  ಆಗ ಆತ ನಿಮ್ಮಿಂದ ಖರೀದಿಸುವ ಬೆಲೆ ಸುಮಾರು ₹28000/10 ಗ್ರಾಂ ಆಗಿರುವುದು.  ನೀವು ಕಡಿಮೆ ಅವಧಿಯಲ್ಲಿ ಚಿನ್ನ ಖರೀದಿ -ಮಾರಾಟ ಮಾಡುವುದಾದರೆ, ಸ್ವಲ್ಪ ಸ್ವಲ್ಪವೆಂದೇ ದೊಡ್ಡ ಮೊತ್ತವನ್ನುನಷ್ಟಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು.

ನಗದೀಕರಣ ಆಯಾಮದಿಂದ ನೋಡುವುದಾದರೆ, ಗೋಲ್ಡ್ ETFಗಳು ಕೂಡಾ ಒಳ್ಳೆಯ ಆಯ್ಕೆ. ದರೆ ಇದು ಶೇರು ಮಾರುಕಟ್ಟೆ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ಕೂಡಾ ಯಾವುದೇ ಕ್ಷಣದಲ್ಲಿ ಮಾರಾಟ ಮಾಡಬಹುದಾಗಿದೆ; ಇಲ್ಲಿ ಭೌತಿಕ ಚಿನ್ನದ ಮಾರಾಟಕ್ಕೆ ಹೋಲಿಸಿದಾಗ ಮಾರಾಟ ವೆಚ್ಚವೂ ಕಡಿಮೆ. ಇಲ್ಲಿ ನೀವು ಬ್ರೋಕರೇಜ್ ಮೊತ್ತ ( ಸರ್ಕಾರಿ ತೆರಿಗೆ ಒಳಗೊಂಡಂತೆ)  ಮಾತ್ರ ಪಾವತಿಸಬೇಕಾಗುತ್ತದೆ. ಆದುದರಿಂದ ಖರೀದಿಸುವ ಹಾಗೂ ಮಾರಾಟ ಮಾಡುವಾಗ ಆಗುವ ವ್ಯತ್ಯಾಸ ಬಹಳ ಕಡಿಮೆಯಾಗಿರುತ್ತದೆ.  

ಅದೇ ರೀತಿ, ಅಧಿಕೃತ ಬ್ಯಾಂಕುಗಳು, NBFC ಹಾಗೂ ಸ್ಟಾಕ್ ಎಕ್ಸ್’ಚೇಂಜ್ ಸಂಸ್ಥೆಗಳಲ್ಲಿ SGBಯನ್ನು ಖರೀದಿಸಬಹುದು. ಇಲ್ಲಿಯೂ ಕೂಡಾ  ಖರೀದಿಸುವ ಹಾಗೂ ಮಾರಾಟ ಮಾಡುವಾಗ ಆಗುವ ವ್ಯತ್ಯಾಸ ಬಹಳ ಕಡಿಮೆ.   SGB ಹಾಗೂ ETFಗಳಲ್ಲಿ ಚಿನ್ನ ಖರೀದಿ ಹಾಗೂ ಮಾರಾಟ ಒಂದೇ ರೀತಿ, ಆದರೆ ತೆರಿಗೆಗಳು ಮಾತ್ರ ಭಿನ್ನ.

ಸುರಕ್ಷತೆ:

ಸುರಕ್ಷತೆ ದೃಷ್ಟಿಯಿಂದ ನೋಡುವುದಾದರೆ ಭೌತಿಕ ಚಿನ್ನದ ಮೇಲೆ ಹಣ ಹೂಡುವುದರಿಂದ  ಕಳವು, ದರೋಡೆ ಇತ್ಯಾದಿಗಳ ಆತಂಕ ಇದ್ದೇ ಇದೆ. ETF ಮತ್ತು SGBಗಳಲ್ಲಿ ಆ ಚಿಂತೆ ಇರುವುದಿಲ್ಲ. ಚಿನ್ನದ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು ಹಾಗೂ ಮನೆಗಳಲ್ಲಿ ಇಡುವುದು ಕೂಡಾ ಸುರಕ್ಷಿತವಲ್ಲ. ETF ಮತ್ತು SGBಗಳಲ್ಲಿ ಡಿಮ್ಯಾಟ್ ಖಾತೆಗಳ ಮೂಲಕ  ಹಣ ಹೂಡಲಾಗುತ್ತದೆ. ಆದುದರಿಂದ ಬಹಳ ಸುರಕ್ಷಿತವಾಗಿರುತ್ತದೆ.

ತೆರಿಗೆ:

ಭೌತಿಕ ಚಿನ್ನ, ETF ಮತ್ತು SGBಗಳಲ್ಲಿ 3 ವರ್ಷಕ್ಕಿಂತ ಹೆಚ್ಚು ಅವಧಿಗೆ ಹಣ ಹೂಡಿದರೆ, ಶೇ. 20 ಇಂಡೆಕ್ಸೇಶನ್’ನೊಂದಿಗೆ ದೀರ್ಘಾವಧಿ ಕ್ಯಾಪಿಟಲ್ ಗೇನ್ (LTCG) ಹೂಡಿಕೆಯಾಗಿ ಅದು ಪರಿಗಣಿಸಲ್ಪಡುತ್ತದೆ.  ಅದಕ್ಕಿಂತ ಕಡಿಮೆ ಅವಧಿಯು ಅಲ್ಪಾವಧಿ ಕ್ಯಾಪಿಟಲ್ ಗೇನ್ (STCG) ಆಗಿ ಪರಿಗಣಿಸಲ್ಪಡುತ್ತದೆ, ಹಾಗೂ ಅದಕ್ಕನುಗುಣವಾಗಿ ತೆರಿಗೆ ವಿಧಿಸಲ್ಪಡುತ್ತದೆ.

ಆದರೆ SGBಯಾಗಿದ್ದಲ್ಲಿ ಇನ್ನೊಂದು ಪ್ರಯೋಜನವಿದೆ. ಬಾಂಡ್’ನ ಮೆಚುರಿಟಿ ಅವಧಿ ಮುಗಿದ ಬಳಿಕ ಅದನ್ನು ಮಾರಿದರೆ, ಸಂಪೂರ್ಣ ತೆರಿಗೆಮುಕ್ತವಾಗಿರುತ್ತದೆ.  

ಲಾಭಾಂಶ:

ETF ಮತ್ತು SGBಗಳ ಬೆಲೆಗಳು ಭೌತಿಕ ಚಿನ್ನದ ಬೆಲೆಯ ಮೇಲೆಯೇ ಅವಲಂಬಿತವಾಗಿರುತ್ತದೆ. ಆದುದರಿಂದ ಈ ಎಲ್ಲಾ 3 ವಿಧದ ಹೂಡಿಕೆಯಲ್ಲಿ ಲಾಭಾಂಶವೂ ಒಂದೇ ಆಗಿರುವುದು; ಆದರೆ, SGBಯಲ್ಲಿ ಹೆಚ್ಚುವರಿ ಅಂಶವೇನೆಂದರೆ - ಇದರಲ್ಲಿ ವಾರ್ಷಿಕ ಶೇ.2.5 ದರದಲ್ಲಿ ಬಡ್ಡಿ ಸಿಗುತ್ತದೆ.  ನೀವು ದೀರ್ಘಾವಧಿಗಾಗಿ ಚಿನ್ನದಲ್ಲಿ ಹಣ ಹೂಡುವ ಯೋಜನೆಯಿದ್ದರೆ, ಈ ಮೂಲಕ ಹೆಚ್ಚು ಲಾಭ ಪಡೆಯಬಹುದು.

ಸಾಲ ಸೌಲಭ್ಯ:

ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವುದು ಹಿಂದಿನಿಂದ ನಡೆದುಬಂದ ಪದ್ಧತಿ. ಅದೇ ರೀತಿ SGBಯ ಆಧಾರದಲ್ಲಿ ಕೂಡಾ ಅಗತ್ಯ ಬಿದ್ದಾಗ ಸಾಲವನ್ನು ಪಡೆಯಬಹುದಾಗಿದೆ. ಆದರೆ ETFಗೆ ಸಾಲ ಸೌಲಭ್ಯ ಅನ್ವಯಿಸುವುದಿಲ್ಲ.

ಹೂಡಿಕೆಯಲ್ಲಿ ಸರಳತೆ:

ETF ಮತ್ತು SGBಯ ಮೂಲಕ ಹಣ ಹೂಡುವುದಾದರೆ 1 ಗ್ರಾಂ. ಚಿನ್ನದ ಮೇಲೂ ಹಣ ಹೂಡಬಹುದು. ಆದರೆ, ಭೌತಿಕ ಚಿನ್ನವಾದರೆ, ಇಷ್ಟು ಸಣ್ಣ ಪ್ರಮಾಣದಲ್ಲಿ ಹಣ ಹೂಡುವುದು ಕಷ್ಟ.  ಸ್ವಲ್ಪಸ್ವಲ್ಪವಾಗಿ ಚಿನ್ನದಲ್ಲಿ ಹಣವನ್ನು ಹೂಡುವವರಿಗೆ ಭೌತಿಕ ಚಿನ್ನಕ್ಕಿಂತ ETF ಮತ್ತು SGBಗಳು ಹೆಚ್ಚು ಅನುಕೂಲವಾಗಿರುತ್ತವೆ.

ಚಿನ್ನಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೀರ್ಘಾವಧಿ ಹೂಡಿಕೆಯ ಅವಕಾಶಗಳನ್ನು ಎದುರು ನೋಡುತ್ತಿದ್ದು,  ಒಳ್ಳೆಯ ಲಾಭವನ್ನು ಗಳಿಸಬೇಕೆ? ಬಂದ ಆದಾಯದ ಮೇಲೆ ತೆರಿಗೆ ಪ್ರಯೋಜನವನ್ನೂ ಪಡೆಯಬೇಕಾದರೆ, ಭೌತಿಕ ಚಿನ್ನ ಖರೀದಿಸುವುದರ ಹೊರತಾಗಿ ETF ಮತ್ತು SGBಗಳಳು ಕೂಡಾ ಉತ್ತಮ ಆಯ್ಕೆಯಾಗಿವೆ.

click me!