
ಜಮ್ಮು- ಕಾಶ್ಮೀರ(ನ.22): ಜಮ್ಮು- ಕಾಶ್ಮೀರದಲ್ಲಿ ಹತ್ಯೆಯಾದ ಇಬ್ಬರು ಉಗ್ರರ ಬಳಿ 2000 ರೂಪಾಯಿಯ ಹೊಸ ನೋಟುಗಳು ಹಾಗೂ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಒಂದೆಡೆ ಜನಸಾಮಾನ್ಯರು ಹೊಸ ನೋಟುಗಳಿಗಾಗಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದರೆ ಅತ್ತ ಈ ನೋಟುಗಳು ಉಗ್ರರ ಬಳಿ ಪತ್ತೆಯಾಗಿರುವುದು ಆತಂಕಕಾರಿ ವಿಚಾರವೇ ಸರಿ. ಉಗ್ರರ ಬಳಿ 15000 ರೂಪಾಯಿ ಪತ್ತೆಯಾಗಿದ್ದು, ಇದರಲ್ಲಿ 2000 ರೂಪಾಯಿಯ ಎರಡು ನೋಟುಗಳು ಹಾಗೂ ನೂರು ರೂಪಾಯಿಯ 110 ನೋಟುಗಳು ಇದ್ದ ಮಾಹಿತಿ ಲಭ್ಯವಾಗಿದೆ.
ಈ ಕುರಿತಾಗಿ ಮಾಹಿತಿ ನೀಡಿದ ಪೊಲೀಸರು ಬೋನಿಖಾನ್ ಪ್ರದೇಶದಲ್ಲಿ ಉಗ್ರರು ಅಡಗಿರುವ ರಹಸ್ಯ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಮೇರೆಗೆ 13 ರಾಷ್ಟ್ರೀಯ ರೈಫಲ್ ತುಕಡಿ ಹಾಗೂ ರಾಜ್ಯ ಪೊಲೀಸರು ಒಟ್ಟಾಗಿ ದಾಳಿ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದಿರುವುದಾಗಿ ತಿಳಿಸಿದ್ದಾರೆ.
ಸೇನಾ ತುಕಡಿ ಉಗ್ರರು ಅಡಗಿದ್ದ ಪ್ರದೇಶಕ್ಕೆ ತಲುಪುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಉಗ್ರರು ಲಷ್ಕರ್-ಏ- ತೊಯ್ಬಾ ಉಗ್ರ ಸಂಘಟನೆಯವರೆಂಬ ಶಂಕೆ ವ್ಯಕ್ತವಾಗಿದೆ.
ನಕಲಿ ನೋಟು ಹಾಗೂ ಉಗ್ರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂಪಾಯಿ ನೋಟು ಬ್ಯಾನ್ ಮಾಡಿ 2000ರೂಪಾಯಿಯ ಹೊಸ ನೋಟನ್ನು ಚಲಾವಣೆಗೆ ತಂದಿದ್ದರು. ಆದರೆ ಹತರಾದ ಉಗ್ರರ ಬಳಿ ಈ ಹೊಸ ನೋಟುಗಳೂ ಪತ್ತೆಯಾಗಿರುವುದರಿಂದ ಉಗ್ರರ ಚಟುವಟಿಕೆಗಳು ಎಷ್ಟು ಶೀಘ್ರವಾಗಿವೆ ಎಂಬುವಿದನ್ನು ಅಂದಾಜು ಮಾಡಬಹುದಾಗಿದೆ.
ಇನ್ನು ಸೋಮವಾರದಂದು ಜಮ್ಮು- ಕಾಶ್ಮೀರದ ಬ್ಯಾಂಕ್ ಒಂದರ ಮೇಲೆ ಮುಸುಕುಧಾರಿಗಳ ಗುಂಪೊಂದು ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿ 13 ಲಕ್ಷ ದರೋಡೆ ಮಾಡಿತ್ತು. ಆದರೆ ದರೋಡೆ ಮಾಡಿದ ಹಣದಲ್ಲಿ ಹಳೆ ನೋಟುಗಳೇ ಇದ್ದವೆಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.