
ಶಬರಿಮಲೆ: ಮಾಸಿಕ ಪೂಜೆಯ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ತೆರೆಯಲ್ಪಟ್ಟಿರುವ ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಶನಿವಾರವೂ ಹೈಡ್ರಾಮಾ ನಡೆದಿದೆ. ತಮಿಳುನಾಡಿನ 50 ವರ್ಷದೊಳಗಿನ ಮಹಿಳೆಯೊಬ್ಬರು ದೇಗುಲ ಪ್ರವೇಶಿಸುತ್ತಿದ್ದಾರೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿ, ಆ ಮಹಿಳೆಯನ್ನು ಪತ್ತೆ ಮಾಡಿ ಭಕ್ತಾದಿಗಳು ಅಡ್ಡಿಪಡಿಸಿದ್ದಾರೆ.
ಈ ಘಟನೆಯಿಂದ ವಿಚಲಿತರಾಗಿ ಕಣ್ಣೀರು ಹಾಕಿರುವ ಮಹಿಳೆ, ತನಗೆ 52 ವರ್ಷ ವಯಸ್ಸಾಗಿದ್ದು, ಎರಡನೇ ಬಾರಿಗೆ ದೇಗುಲಕ್ಕೆ ಬರುತ್ತಿದ್ದೇನೆ ಎಂದು ಹೇಳಿ ಆಧಾರ್ ಕಾರ್ಡ್ ತೋರಿಸಿದ ತರುವಾಯವಷ್ಟೇ ಆಕೆಗೆ ದರ್ಶನ ಅವಕಾಶ ಕಲ್ಪಿಸಲಾಗಿದೆ.
ಈ ಘಟನೆಗಳನ್ನು ಹೊರತುಪಡಿಸಿದರೆ, ಕಳೆದ ನಾಲ್ಕು ದಿನಗಳಿಗೆ ಹೋಲಿಸಿದರೆ ಶಬರಿಮಲೆ ಅಯ್ಯಪ್ಪ ದೇಗುಲ ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ಸ್ಥಳಗಳಲ್ಲಿ ಪರಿಸ್ಥಿತಿ ಬಹುತೇಕ ಶಾಂತವಾಗಿತ್ತು. ಭಾರಿ ಸಂಖ್ಯೆಯಲ್ಲಿ ಪೊಲೀಸರು ಜಮಾವಣೆಯಾಗಿದ್ದು, 144ನೇ ಕಲಮಿನ ಅಡಿ ನಿಷೇಧಾಜ್ಞೆ ಜಾರಿಯಲ್ಲಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
38ರ ಮಹಿಳೆ ಅಯ್ಯಪ್ಪ ದೇಗುಲಕ್ಕೆ: ಇಂದು ನಿರ್ಧಾರ
ಪಂಪಾ: ಕೇರಳದ ದಲಿತ ಮಹಿಳಾ ಒಕ್ಕೂಟದ ಮಂಜು (38) ಎಂಬುವರು ದೇಗುಲ ಪ್ರವೇಶಿಸಲು ಶನಿವಾರ, ಶಬರಿಮಲೆಯ ಕೆಳಗಿರುವ ಪಂಪಾಗೆ ಆಗಮಿಸಿದ್ದಾರೆ. ಪೊಲೀಸ್ ಭದ್ರತೆಗೂ ಮೊರೆ ಇಟ್ಟಿದ್ದಾರೆ. ಆದರೆ ಮಳೆಯಿಂದಾಗಿ ಅವರ ಯಾತ್ರೆ ಕೈಗೂಡಲಿಲ್ಲ. ಪಂಪಾದಲ್ಲೇ ಕಾಯುತ್ತಿರುವ ಈಕೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಭಾನುವಾರ ಈಕೆಯ ದೇಗುಲ ಭೇಟಿ ಬಗ್ಗೆ ನಿರ್ಧರಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಯಾವುದೇ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ದೇಗುಲ ಪ್ರವೇಶಿಸಲು ಮಹಿಳೆಯರು ಪ್ರಯತ್ನ ಪಡುತ್ತಿದ್ದಾರಾದರೂ ಫಲ ಕೊಡುತ್ತಿಲ್ಲ. ಶುಕ್ರವಾರ ಇಬ್ಬರು ಮಹಿಳೆಯರು ದೇಗುಲದ ಸಮೀಪಕ್ಕೆ ಬಂದು ವಾಪಸ್ ಹೋಗಿದ್ದರು. ಶನಿವಾರ ಕೇರಳದ ದಲಿತ ಹೋರಾಟಗಾರ್ತಿ ಮಂಜು ಎಂಬುವರು ದೇಗುಲ ಪ್ರವೇಶಿಸಲು ಬಂದರು. ಪಂಪಾ ನದಿ ದಂಡೆಯಿಂದ ಯಾತ್ರೆ ಆರಂಭಿಸಲು ಪೊಲೀಸ್ ಭದ್ರತೆಯನ್ನು ಅವರು ಕೋರಿದರು. ಆದರೆ ಭಾರಿ ಮಳೆ ಹಿನ್ನೆಲೆಯಲ್ಲಿ ತಮ್ಮ ಯಾತ್ರೆಯನ್ನು ಮುಂದೂಡಿದರು.
ಮಹಿಳೆಗೆ ದಿಗ್ಬಂಧನ: ತಮಿಳುನಾಡಿನ ತಿರುಚಿಯ ಲತಾ ಎಂಬುವರು ತಮ್ಮ ಕುಟುಂಬ ಸದಸ್ಯರ ಜತೆ ಶಬರಿಮಲೆ ಏರಿ ಅಯ್ಯಪ್ಪ ದೇಗುಲದ ಬಳಿಗೆ ಬಂದರು. ಆಕೆ 50 ವರ್ಷಕ್ಕಿಂತ ಕೆಳಗಿನವರು ಎಂಬ ವದಂತಿ ಹಬ್ಬಿದ ಪರಿಣಾಮ ಲತಾ ಅವರು ಮುಂದೆ ಹೋಗಲು ಭಕ್ತಾದಿಗಳು ಅವಕಾಶ ನೀಡಲಿಲ್ಲ. ಇದರಿಂದ ಹೆದರಿದ ಲತಾ ಅವರು ಕಣ್ಣೀರು ಹಾಕಿದರು. ತಾವು 50 ವರ್ಷ ಮೇಲ್ಪಟ್ಟವರು ಎಂಬುದನ್ನು ಸಾಬೀತುಪಡಿಸುವ ಪುರಾವೆ ನೀಡಿದರು. ಅಲ್ಲದೆ ಇದು ತನ್ನ ಎರಡನೇ ಯಾತ್ರೆಯಾಗಿದ್ದು, ಕಳೆದ ವರ್ಷ ಕೂಡ ಬಂದಿದ್ದೆ ಎಂದು ಹೇಳಿದ ಬಳಿಕ ಆಕೆ 18 ಮೆಟ್ಟಿಲು ಏರಿ ಅಯ್ಯಪ್ಪ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.