#26/11 ಮುಂಬೈ ದಾಳಿಗೆ 10 ವರ್ಷ.., ಎಂದೂ ಮರೆಯಲಾಗದ ಭೀಕರ ದಾಳಿ!

By Web DeskFirst Published Nov 26, 2018, 9:14 AM IST
Highlights

ಭಾರತದ ಆರ್ಥಿಕ ರಾಜಧಾನಿ ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್‌- ಎ- ತೊಯ್ಬಾ ಉಗ್ರರು ದಾಳಿ ನಡೆಸಿ ಇಂದಿಗೆ 10 ವರ್ಷ. ಸತತ ಮೂರು ದಿನಗಳ ಕಾಲ ಮುಂಬೈ ಮಹಾನಗರಿ ಉಗ್ರರ ಕಪಿಮುಷ್ಟಿಯಲ್ಲಿ ನಲುಗಿತ್ತು. ಲಷ್ಕರ್‌ ಉಗ್ರ ಸಂಘಟನೆಯ 10 ಉಗ್ರರು ಜನನಿಬಿಡ ಪ್ರದೇಶಗಳಲ್ಲಿ ಜನರ ಮಾರಣಹೋಮವನ್ನೇ ನಡೆಸಿದ್ದರು. ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯಕ್ಕೆ ಸಾಕ್ಷಿಯಾದ ಈ ದಾಳಿಯ ಹಿನ್ನೋಟ ಇಲ್ಲಿದೆ.

ದಾಳಿ ನಡೆದಿದ್ದು ಹೇಗೆ?

2008 ನ.21ರಂದು ಪಾಕಿಸ್ತಾನದ 10 ಮಂದಿ ಉಗ್ರರು ಬೋಟ್‌ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್‌, ರೈಲ್ವೆ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್‌ ಸ್ಫೋಟ ಮತ್ತು ಗುಂಡಿನ ದಾಳಿ ನಡೆಸಿ 166 ಜನರ ಸಾವಿಗೆ ಕಾರಣರಾದರು. 300ಕ್ಕೂ ಹೆಚ್ಚು ಜನರು ಗಾಯಗೊಂಡರು. ದೇಶದ ವಾಣಿಜ್ಯೋದ್ಯಮದ ಹೆಮ್ಮೆಯಾಗಿ ತಲೆಯೆತ್ತಿ ನಿಂತಿದ್ದ ತಾಜ್‌, ಒಬೇರಾಯ್‌ ನಂತಹ ಹೋಟೆಲ್‌ಗಳು ಉಗ್ರರ ಗುಂಡಿನ ದಾಳಿ ಮತ್ತು ಬಾಂಬ್‌ ಬ್ಲಾಸ್ಟ್‌ಗೆ ಹೊತ್ತಿ ಉರಿದವು. ಜನರು ಉಗ್ರರ ಕಪಿಮುಷ್ಠಿಯಲ್ಲಿ ನರಳಿ ಅಕ್ಷರಶಃ ನರಕ ದರ್ಶನ ಕಂಡರು.

4 ವರ್ಷದ ನಂತರ ಕಸಬ್‌ ಗಲ್ಲಿಗೆ

ದಾಳಿ ವಿಚಾರ ತಿಳಿಯುತ್ತಲೇ ಜನರ ರಕ್ಷಣೆಗೆ ಆಗಮಿಸಿದ ಪೋಲಿಸ್‌ ಅಧಿಕಾರಿಗಳಾದ ಹೇಮಂತ್‌ ಕರ್ಕರೆ, ವಿಜಯ್‌ ಸಾಲಸ್ಕರ್‌, ಅಶೋಕ್‌ ಕಾಮ್ಟೆಮತ್ತು ತುಕಾರಾಮ್‌ ಓಂಬ್ಳೆ ಮತ್ತು ಯೋಧ ಸಂದೀಪ್‌ ಉನ್ನಿಕೃಷ್ಣನ್‌ ಉಗ್ರರಿಂದ ಹತರಾದರು. ಉಗ್ರ ಹಾರಿಸಿದ ಗುಂಡುಗಳು ಎದೆಯನ್ನು ಸೀಳಿದರೂ ಅಪ್ರತಿಮ ಶೌರ್ಯತೋರಿದ ತುಕಾರಾಮ್‌ ಕೊನೆಯುಸಿರೆಳೆಯುವ ಹಂಂತದಲ್ಲಿದ್ದರೂ ಕಸಬ್‌ನ ಮೇಲೆ ಗುಂಡು ಹಾರಿಸಿ, ಆತನನ್ನು ಸೆರೆಹಿಡಿಯುವಂತೆ ಮಾಡಿದರು. ಈ ಕಾರಣಕ್ಕಾಗಿ ಭಾರತ ಸರ್ಕಾರವು 2009ರಲ್ಲಿ ಓಂಬ್ಳೆಗೆ ಅಶೋಕ ಚಕ್ರ ಗೌರವ ನೀಡಿದೆ. ತಾಜ್‌ ಹೋಟೆಲ್‌, ರೈಲು ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ 58 ಜನರನ್ನು ಬಲಿ ಪಡೆದಿದ್ದ ಅಜ್ಮಲ್‌ ಕಸಬ್‌ನನ್ನು 2012 ನವೆಂಬರ್‌ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಮಾಸ್ಟರ್‌ ಮೈಂಡ್‌ ಹಫೀಜ್‌ ಬಂಧಮುಕ್ತ!

ಮುಂಬೈ ದಾಳಿ ನಡೆಸಿದ್ದು ಪಾಕಿಸ್ತಾನದ ಉಗ್ರರೇ ಎಂಬುದಕ್ಕೆ ಬಲವಾದ ಸಾಕ್ಷ್ಯಗಳನ್ನು ಭಾರತ ನೀಡಿದ್ದರೂ ಅದನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಸಿದ್ಧವಿಲ್ಲ. ಭಾರತದ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಪಾಕ್‌ನ ಲಷ್ಕರ್‌ ಎ-ತೊಯ್ಬಾ ಕಮಾಂಡರ್‌ ಹಫೀಜ್‌ ಸಯೀದ್‌. ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಮೀನಮೇಷ ಎಣಿಸುತ್ತಿರುವ ಪಾಕ್‌, ಅಂತಾರಾಷ್ಟೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದಾಗಲೆಲ್ಲಾ ಆತನನ್ನು ಗೃಹಬಂಧನದಲ್ಲಿರುವ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಅಮೆರಿಕ ಆತನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸಿದ ಬಳಿಕ ಆತನನ್ನು ಕಳೆದ ಕೆಲವು ತಿಂಗಳಿನಿಂದ ಬಂಧನದಲ್ಲಿ ಇರಿಸಲಾಗಿತ್ತು. ಆದರೆ, ಬಂಧನ ಅವಧಿ ವಿಸ್ತರಿಸಲು ಲಾಹೋರ್‌ ಹೈಕೋರ್ಟ್‌ನ ನ್ಯಾಯಾಂಗ ಪರಿಶೀಲನಾ ಮಂಡಳಿ ನಿರಾಕರಿಸಿದ ಬೆನ್ನಲ್ಲೇ ಪಾಕ್‌ ಸರ್ಕಾರ ಹಫೀಜ್‌ನನ್ನು ಬಂಧನದಿಂದ ಬಿಡುಗಡೆ ಮಾಡಿದೆ. ದಾಳಿಯಲ್ಲಿ ಭಾಗಿಯಾದ ಉಳಿದ 7 ಜನ ಪಾಕಿಸ್ತಾನಿ ಶಂಕಿತರಿಗೂ ಇದುವರೆಗೆ ಯಾವುದೇ ಶಿಕ್ಷೆಯಾಗಿಲ್ಲ. ಭಾರತ ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದರೂ ಪಾಕ್‌ ಮಾತ್ರ ಬುದ್ಧಿ ಕಲಿಯುತಿಲ್ಲ.

ಮುಂಬೈಗೆ ಬರಲು ಸಜ್ಜಾಗಿತ್ತು ಅಮೆರಿಕದ ವಿಶೇಷ ಪಡೆ!

2008ರಲ್ಲಿ ಮುಂಬೈ ಮೇಲೆ ಪಾಕ್‌ ಉಗ್ರರು ನಡೆಸಿದ ದಾಳಿ ವೇಳೆ, ಅಗತ್ಯಬಿದ್ದಲ್ಲಿ ದಾಳಿ ನಡೆಸಲೆಂದು ಅಮೆರಿಕ ಸರ್ಕಾರ ವಿಶೇಷ ಪಡೆಯೊಂದನ್ನು ಸಿದ್ಧ ಮಾಡಿ ಇಟ್ಟಿತ್ತು. ಬಾಹ್ಯ ಪ್ರದೇಶವೊಂದರಿಂದ ನೇರವಾಗಿ ಮುಂಬೈಗೆ ವಿಶೇಷ ಯೋಧರ ಪಡೆಯನ್ನು ಅಧ್ಯಕ್ಷ ಜಾಜ್‌ರ್‍ ಬುಷ್‌ ನೇತೃತ್ವದ ಅಮೆರಿಕ ಸರ್ಕಾರ ಸಜ್ಜು ಮಾಡಿತ್ತು. ಅಮೆರಿಕ ಯೋಧರ ಆಗಮನಕ್ಕೆ ಭಾರತ ಸರ್ಕಾರ ಅನುಮತಿ ನೀಡುವ ಮೊದಲೇ ಭಾರತೀಯ ಯೋಧರು, ಪಾಕ್‌ ಉಗ್ರರನ್ನು ಪೂರ್ಣವಾಗಿ ಹೊಡೆದುರುಳಿಸಿದರು ಎಂದು ಆಗ ಶ್ವೇತಭವನದ 26/11 ಘಟನೆ ನಿರ್ವಹಣಾ ತಂಡದ ಸದಸ್ಯರಾಗಿದ್ದ ಅನಿಶ್‌ ಗೋಯೆಲ್‌ ಬಹಿರಂಗಪಡಿಸಿದ್ದಾರೆ.

ಮುಂಬೈ ಈಗೆಷ್ಟು ಸುರಕ್ಷಿತ?

2008ರ ಭಯೋತ್ಪಾದಕರ ನಡೆಸಿದ ದಾಳಿಯ ನಂತರ ಮುಂಬೈ ತನ್ನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದೆ. ಭಾರತೀಯ ಸೇನೆ, ಕೋಸ್ಟಲ್‌ ಗಾರ್ಡ್‌ ಮತ್ತು ಮರೈನ್‌ ಪೊಲೀಸ್‌ ಸೇರಿ ಮೂರು ಹಂತದಲ್ಲಿ ಕರಾವಳಿ ಪ್ರದೇಶದಲ್ಲಿ ಹದ್ದಿನಕಣ್ಣಿಡಲಾಗಿದೆ. ಜೊತೆಗೆ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ರಡಾರ್‌, ಹೈಪವರ್‌ ಅಂಡರ್‌ ವಾಟರ್‌ ಸೆನ್ಸಾರ್‌, ಡ್ರೈವರ್‌ ಡಿಟೆಕ್ಷನ್‌ ಸೋನಾ​ರ್‍ಸ್ ಇರುವ ಆರ್ಟ್‌ ಹಾರ್ಬರ್‌ ಡಿಫೆನ್ಸ್‌ ಸಿಸ್ಟಮ್‌ ಜಾರಿಗೊಳಿಸಿದೆ. ಜೊತೆಗೆ ಮುಂಬೈ ಪೊಲೀಸರು ನೂತನ ಡಿಜಿಟಲ್‌ ವ್ಯಾಪ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಅಲ್ಲದೆ ನಗರದಾದ್ಯಂತ 5,200 ಹೈ ಟೆಕ್ನಾಲಜಿ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 2016ರಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಮುಂಬೈನಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಲಾಗಿದೆ.

ಮತ್ತೆ ದಾಳಿ ನಡೆದರೆ ಯುದ್ಧ ಖಚಿತ: ಅಮೆರಿಕ ತಜ್ಞರು

2008ರಲ್ಲಿ ನಡೆದ ರೀತಿಯ ಮತ್ತೊಂದು ದಾಳಿಯೇನಾದರೂ ಭಾರತದ ಮೇಲೆ ನಡೆದದ್ದೇ ಆದಲ್ಲಿ, ಅದರ ಮೂಲ ಪಾಕಿಸ್ತಾನವೇ ಆಗಿದ್ದಲ್ಲಿ, ಉಪಖಂಡದಲ್ಲಿ ಯುದ್ಧ ಖಚಿತ ಎಂದು ಅಮೆರಿಕದ ತಜ್ಞರು, ಮಾಜಿ ರಾಜತಾಂತ್ರಿಕರು ಎಚ್ಚರಿಸಿದ್ದಾರೆ. ದಾಳಿಯ ಸಂಚುಕೋರ ಸಂಘಟನೆಯಾದ ಲಷ್ಕರ್‌ ಎ ತೊಯ್ಬಾ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಇನ್ನೂ ನ್ಯಾಯಾಂಗವನ್ನು ಎದುರಿಸಿಲ್ಲ. ದುರದೃಷ್ಟವಶಾತ್‌ ಪಾಕಿಸ್ತಾನದಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಘಟನೆಯಲ್ಲಿ ಮಡಿದವರ ಕುಟುಂಬಗಳಿಗೆ ನ್ಯಾಯ ಇನ್ನು ಕನಸಾಗಿಯೇ ಉಳಿದಿದೆ. ಹೀಗಾಗಿ ಮತ್ತೊಮ್ಮೆ ಏನಾದರೂ ಇಂಥ ದಾಳಿ ನಡೆದದ್ದೇ ಆದಲ್ಲಿ ಉಭಯ ದೇಶಗಳ ನಡುವೆ ಯುದ್ಧ ಖಚಿತ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎನ ಮಾಜಿ ಅಧಿಕಾರಿ ಬ್ರೂಸ್‌ ರೀಡೆಲ್‌ ಹೇಳಿದ್ದಾರೆ.

click me!