
ಇವರ ಹೆಸರು ಶಿಲ್ಪಾ ಎ. ಹುಟ್ಟಿಬೆಳೆದದ್ದು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ. ಚಿಕ್ಕಂದಿನಿಂದಲೂ ಐಎಎಸ್ ಮಾಡುವ ಕನಸು. ಯಾರು ಕೇಳಿದರೂ ‘ನಾನು ಐಎಎಸ್ ಆಫೀಸರ್ ಆಗ್ತೀನಿ' ಎಂದೇ ಹೇಳುತ್ತಿದ್ದ ಶಿಲ್ಪಾ 10ನೇ ಕ್ಲಾಸ್‌ವರೆಗೂ ಓದಿದ್ದು ಕನ್ನಡ ಮೀಡಿಯಂ ಶಾಲೆಯಲ್ಲಿ. ನಂತರ ಪಿಯುಸಿ, ಪದವಿ, ಎಂ.ಕಾಂ ಮಾಡಿದ ಮೇಲೆ ಅಯಾಚಿತವಾಗಿ ಸಿಕ್ಕಿದ್ದು ಐಬಿಎಂನಲ್ಲಿ ಉದ್ಯೋಗ. ನಂತರ ಎಚ್‌ಪಿಯಲ್ಲಿ ದೊಡ್ಡ ಹುದ್ದೆ ಸಿಕ್ಕಿತು. ಅದಾಗಿ ಆಸ್ಪ್ರೇಲಿಯಾ-ನ್ಯೂಜಿಲೆಂಡ್ ಬ್ಯಾಂಕ್(ಎ.ಎನ್.ಝಡ್)ನಲ್ಲೂ ಸೇವೆ ಸಲ್ಲಿಸಿದರು. ನಂತರ ಹೆಚ್ಚಿನ ಭತ್ಯೆ ನೀಡಿ ಬ್ಯಾಂಕ್ ಅವರನ್ನು ಆಸ್ಪ್ರೇಲಿಯಾಗೆ ಕರೆಸಿಕೊಂಡಿತು.
1) ಈ ದೇಶದಲ್ಲಿ ಹುಟ್ಟಿವಿದೇಶಿ ಕಂಪೆನಿಗ್ಯಾಕೆ ಕೆಲಸ ಮಾಡ್ಬೇಕು?
ಸಂಬಳ, ಹುದ್ದೆಯೇನೋ ದೊಡ್ಡದಿತ್ತು. ಆಸ್ಪ್ರೇಲಿಯಾದ ಮೆಲ್ಬರ್ನ್ ಜೀವನದಲ್ಲಿ ಸಣ್ಣ ಕೊರತೆಯೂ ಇರಲಿಲ್ಲ. ಆದರೆ ಮನಸ್ಸಲ್ಲಿ ಯಾವತ್ತೂ ಅದೇ ಯೋಚನೆ, ‘ನಾನ್ಯಾಕೆ ಈ ದೇಶದ ಜನರಿಗೆ ಕೆಲಸ ಮಾಡ್ಬೇಕು, ನನ್ನ ದೇಶದವರಿಗೆ ಸೇವೆ ಮಾಡಿದ್ರೆ ಒಳ್ಳೆಯದಲ್ವಾ?' ಅಂತ. ಈ ಯೋಚನೆ ಎಷ್ಟುತೀವ್ರವಾಗಿತ್ತು ಅಂದ್ರೆ, ಲಕ್ಷಾಂತರ ರೂಪಾಯಿ ಸಂಬಳದ ಆ ಕೆಲಸ ತೊರೆಯುವಷ್ಟು.
2) ಎಷ್ಟೊಂದು ಅಡ್ಡಿ ಆತಂಕ ..
ಕೆಲಸ ಬಿಟ್ಟು ಐಎಎಸ್ ಬರೆಯಲು ನಿರ್ಧರಿಸಿದ್ದಾಯ್ತು. ಅದಕ್ಕೋಸ್ಕರ ದೆಹಲಿಗೆ ಹೋಗಿ ಕೋಚಿಂಗ್ ತಗೊಂಡೂ ಆಯ್ತು, ಆದ್ರೆ ದುರದೃಷ್ಟವಶಾತ್, ಆ ವರ್ಷ ಸಿಲೆಬಸ್ ಬದಲಾಗಿ ಎಕ್ಸಾಂ ಪಾಸಾಗಲಿಲ್ಲ. ಅದೇ ಹೊತ್ತಿಗೆ ಕೆಪಿಎಸ್ಸಿ ಎಕ್ಸಾಂಗೆ ಕಾಲ್ ಫಾರ್ ಮಾಡಿದ್ರು. ಇದಾಗಿದ್ದು ಐದು ವರ್ಷಗಳ ಹಿಂದೆ. ಶಿಲ್ಪಾ ಕೆಪಿಎಸ್ಸಿ ಎಕ್ಸಾಂ ಬರೆಯಲು ನಿರ್ಧರಿಸಿ ಸಿದ್ಧತೆ ಮಾಡಿ ಪರೀಕ್ಷೆ ಬರೆದರು. ಆದರೆ ಆ ಬಾರಿಯ ಕೆಪಿಎಸ್ಸಿ ವಿವಾದವಾಗಿ ಕೋರ್ಟ್ ಮೆಟ್ಟಿಲೇರಿ ಮೂರು ವರ್ಷದ ನಂತರ ಬಂದ ಪಟ್ಟಿಯಲ್ಲಿ ಇವರ ಹೆಸರಿರಲಿಲ್ಲ. ಕೊನೆಗೆ 2014 ರಲ್ಲಿ ಪುನಃ ಪರೀಕ್ಷೆ ಬರೆದರು. ಕೊನೆಗೂ ಸೆಲೆಕ್ಷನ್ ಆಯ್ತು!
3) ಐದು ವರ್ಷ ಕಾಯುವ ಶಿಕ್ಷೆ!
ಲಕ್ಷಾಂತರ ರೂಪಾಯಿ ಸಂಬಳ ಬರುತ್ತಿದ್ದ ಹುದ್ದೆ ತ್ಯಜಿಸಿ ಬಂದಾಗಲೇ ಬಂಧು ಬಳಗದಲ್ಲಿ ಅಪಸ್ವರ ಕೇಳಿಬಂದಿತ್ತು. ಎಕ್ಸಾಂ ಬರೆದು ಎರಡು ವರ್ಷವಾದರೂ ಎಕ್ಸಾಂ ರಿಸಲ್ಟ್ ಬರದಿದ್ದಾಗ ಎದುರು ಸಿಕ್ಕಿದವರೆಲ್ಲ ಮತ್ತೆ ಹಿಂದಿನ ಉದ್ಯೋಗಕ್ಕೆ ಮರಳಲು ಸೂಚನೆ ಕೊಡುವವರೇ. ಎರಡೆರಡು ಬಾರಿ ಎಕ್ಸಾಂ ಬರೆದು ಐದು ವರ್ಷ ಕಾಯುವ ಹಿಂಸೆ . ‘ಅದು ಅಸಹನೀಯ ಅವಧಿ. ಐದಾರು ವರ್ಷ ಅನವಶ್ಯಕವಾಗಿ ವೇಸ್ಟ್ ಆಗುತ್ತಿರುವ ಸಂಕಟ, ನಾವೇನೂ ಶ್ರೀಮಂತರಲ್ಲ, ಅಷ್ಟುವರ್ಷ ದುಡಿಮೆಯಿಲ್ಲದ ಕಾರಣ ಆರ್ಥಿಕ ಸಮಸ್ಯೆಯೂ ಇತ್ತು. ಮನೆಯಿಂದ ಹೊರಗೆ ಬರೋದೇ ಹಿಂಸೆ, ಎದುರು ಸಿಕ್ಕವರೆಲ್ಲ ಪ್ರಶ್ನೆ ಮಾಡುವವರೇ, ಎಷ್ಟೊಳ್ಳೆ ಕೆಲಸ ಬಿಟ್ಟು ಬಂದ್ರಿ ಅನ್ನುವವರೇ. ಎಷ್ಟೋ ಸಲ ಹಿಂದಿನ ಉದ್ಯೋಗಕ್ಕೆ ವಾಪಾಸ್ ಹೋಗಲೇ ಎಂಬ ಯೋಚನೆಯೂ ಬಂದಿತ್ತು. ಆದರೆ ನನಗೆ ಗುರಿಯ ಬಗ್ಗೆ ಸ್ಪಷ್ಟಕಲ್ಪನೆಯಿದ್ದ ಕಾರಣ ಹಿಂದೆ ಸರಿಯಲಿಲ್ಲ'ಎನ್ನುತ್ತಾರೆ ಶಿಲ್ಪಾ.
4) ಮಗುವಿನ ಯೋಚನೆಯನ್ನೂ ಮುಂದೂಡಿದ್ವಿ!
‘ಮಗುವನ್ನಿಟ್ಟುಕೊಂಡು ಪರೀಕ್ಷೆಗೆ ತಯಾರಿ ಮಾಡೋದು ಬಹಳ ಕಷ್ಟ. ಕೆಲವು ಹೆಣ್ಮಕ್ಕಳು ಮಕ್ಕಳನ್ನಿಟ್ಟುಕೊಂಡೂ ಎಕ್ಸಾಂ ಬರೆಯುತ್ತಾರೆ. ಆದರೆ ವೈಯುಕ್ತಿಕವಾಗಿ ನನ್ನಿಂದ ಅದು ಕಷ್ಟ. ಹೀಗಾಗಿ ಮಗುವಿನ ಯೋಚನೆಯನ್ನೇ ಇಲ್ಲಿಯವರೆಗೂ ಮುಂದೂಡಿದೆವು' ಎಂದು ನೋವಿನಲ್ಲಿ ಹೇಳುತ್ತಾರೆ. ಕೆಪಿಎಸ್ಸಿ ಪರೀಕ್ಷೆಗಳ ಗೊಂದಲ, ತಾಂತ್ರಿಕ ಸಮಸ್ಯೆಗಳಿಂದ ಎಷ್ಟೋ ವಿದ್ಯಾರ್ಥಿಗಳ ಭವಿಷ್ಯವೇ ಅಡಕತ್ತರಿಯಲ್ಲಿ ಸಿಲುಕಿದಂತಾಗಿರುವ ಬಗ್ಗೆಯೂ ಅವರಿಗೆ ಬೇಸರವಿದೆ.
5) ಜನಸೇವೆಯ ಕನಸು
ಈಗ ಶಿಲ್ಪಾ ತಹಶೀಲ್ದಾರ್ ಆಗಿ ಆಯ್ಕೆಯಾಗಿದ್ದಾರೆ. ಪೋಸ್ಟಿಂಗ್ ಯಾವ ಊರಿಗಾಗುವುದೋ ಗೊತ್ತಿಲ್ಲ. ಎಲ್ಲಿ ಸಿಕ್ಕರೂ ಖುಷಿಯಿಂದ ಜನಸೇವೆ ಮಾಡುವ ಹುಮ್ಮಸ್ಸಿದೆ. ಹಳ್ಳಿಗಾಡಿನ ಅನಕ್ಷರಸ್ಥ ಹೆಣ್ಮಕ್ಕಳ ಸಬಲೀಕರಣ ಶಿಲ್ಪಾ ಅವರ ಕನಸು. ಇದರ ಜೊತೆಗೆ ಆಡಳಿತದಲ್ಲಿ ಪಾರದರ್ಶಕತೆ ತರಬೇಕೆಂಬ ತುಡಿತವೂ ಇದೆ.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.