
ನವದೆಹಲಿ: ತಮಗೆ ನಷ್ಟವಾಗಿದೆ ಎಂದು ಲೆಕ್ಕ ತೋರಿಸಿ ಆದಾಯ ತೆರಿಗೆ ವಂಚಿಸುತ್ತಿರುವ ಉದ್ಯಮಿಗಳ ಮೇಲೆ ಕೇಂದ್ರ ಸರ್ಕಾರದ ಕಣ್ಣು ಬಿದ್ದಿದ್ದು, ತಂತ್ರಜ್ಞಾನ ಬಳಸಿ ಅವರನ್ನು ಮಟ್ಟಹಾಕುವ ಕಾರ್ಯ ಆರಂಭಿಸಲಾಗಿದೆ ಎಂದು ಎಚ್ಚರಿಕೆ ನೀಡಿದೆ.
ಇದೇ ವೇಳೆ, ದೇಶದ ಬೊಕ್ಕಸಕ್ಕೆ ಆದಾಯ ತೆರಿಗೆ ಪಾವತಿಸುವುದರಲ್ಲಿ ತಿಂಗಳ ಸಂಬಳದ ನೌಕರರೇ ಉದ್ಯಮಿಗಳಿಗಿಂತ ಮೂರು ಪಟ್ಟು ಮೇಲಿದ್ದಾರೆ ಎಂಬ ಅಚ್ಚರಿಯ ಸಂಗತಿಯನ್ನೂ ಕೇಂದ್ರ ವಿತ್ತ ಮಂತ್ರಾಲಯ ಹೊರಗೆಡವಿದೆ.
2016-17ನೇ ಸಾಲಿನಲ್ಲಿ 1.89 ಕೋಟಿ ವೇತನದಾರ ನೌಕರರು ಆದಾಯ ತೆರಿಗೆ ರಿಟನ್ಸ್‌ರ್ ಸಲ್ಲಿಸಿದ್ದು, ಒಟ್ಟು 1.44 ಲಕ್ಷ ಕೋಟಿ ರು. ಆದಾಯ ತೆರಿಗೆ ಪಾವತಿಸಿದ್ದಾರೆ. ಅಂದರೆ, ದೇಶದ ಒಬ್ಬ ಸಂಬಳದಾರ ಸರಾಸರಿ 76,306 ರು. ಆದಾಯ ತೆರಿಗೆ ಪಾವತಿಸಿದ್ದಾನೆ. ಇದಕ್ಕೆ ವ್ಯತಿರಿಕ್ತವಾಗಿ, 1.88 ಕೋಟಿ ಉದ್ಯಮಿಗಳು ಆದಾಯ ತೆರಿಗೆ ರಿಟನ್ಸ್‌ರ್ ಸಲ್ಲಿಸಿದ್ದು, ಒಟ್ಟು 48000 ಕೋಟಿ ರು. ಮಾತ್ರ ತೆರಿಗೆ ಪಾವತಿಸಿದ್ದಾರೆ. ಅಂದರೆ, ಒಬ್ಬ ಉದ್ಯಮಿ ಸರಾಸರಿ 25,753 ರು. ತೆರಿಗೆ ಪಾವತಿಸಿದ್ದಾನೆ. ದೇಶದಲ್ಲಿ ಐಟಿ ರಿಟನ್ಸ್‌ರ್ ಸಲ್ಲಿಕೆ ಮಾಡುವ 7 ಲಕ್ಷ ಕಂಪನಿಗಳಿದ್ದು, ಅವುಗಳಲ್ಲಿ ಅರ್ಧಕ್ಕರ್ಧ ಕಂಪನಿಗಳ ಮಾಲಿಕರು ಶೂನ್ಯ ಆದಾಯ ಅಥವಾ ನಷ್ಟವಾಗಿರುವ ಲೆಕ್ಕ ನೀಡಿದ್ದಾರೆ ಎಂದು ಕೇಂದ್ರ ವಿತ್ತ ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದ್ದಾರೆ.
ದೇಶದಲ್ಲಿ 1.88 ಕೋಟಿ ಉದ್ಯಮಿಗಳು ಐಟಿ ರಿಟನ್ಸ್‌ರ್ ಸಲ್ಲಿಸುತ್ತಿದ್ದರೂ ಅವರು ಪಾವತಿಸುವ ಒಟ್ಟಾರೆ ಆದಾಯ ತೆರಿಗೆಯು ಹೆಚ್ಚುಕಮ್ಮಿ ಅಷ್ಟೇ ಸಂಖ್ಯೆಯ (1.89 ಕೋಟಿ) ವೇತನದಾರ ನೌಕರರು ಪಾವತಿಸುವ ಆದಾಯ ತೆರಿಗೆಗಿಂತ ಮೂರು ಪಟ್ಟು ಕಡಿಮೆಯಿದೆ ಎಂಬ ಸಂಗತಿ ಅಚ್ಚರಿ ಮೂಡಿಸಿದೆ.
ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಹಸ್ಮುಖ್ ಅಧಿಯಾ, ಆದಾಯ ತೆರಿಗೆ ಪಾವತಿಯಲ್ಲಿರುವ ಈ ‘ವ್ಯತ್ಯಾಸವನ್ನು’ ಸರಿಪಡಿಸಲು ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದೇವೆ. ಜಿಎಸ್‌ಟಿ ಜಾರಿ ಹಾಗೂ ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ ಆದಾಯ ತೆರಿಗೆ ಹಾಗೂ ಪರೋಕ್ಷ ತೆರಿಗೆಗಳ ಪಾವತಿ ಹೆಚ್ಚಿದೆ. ಆದಾಯ ತೆರಿಗೆ ಪಾವತಿಸುವವರ ಸಂಖ್ಯೆಯೂ 6.47 ಕೋಟಿಯಿಂದ 8.27 ಕೋಟಿಗೆ ಹೆಚ್ಚಾಗಿದೆ. ಇ-ವೇ ಬಿಲ್ ಹಾಗೂ ಇನ್‌ವಾಯ್‌್ಸ (ಬಿಲ್)ಗಳನ್ನು ಹೊಂದಿಸಿ ನೋಡುವ ವ್ಯವಸ್ಥೆ ಬಂದಿರುವುದರಿಂದ ತೆರಿಗೆ ವಂಚನೆ ಕಡಿಮೆಯಾಗುತ್ತಿದೆ. ಭಾರತವು ತೆರಿಗೆ ಪಾವತಿಸುವ ಸಮಾಜವಾಗಿ ಮಾರ್ಪಡುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.