
ನವದೆಹಲಿ(ಮೇ.17]: ಎಸ್‌ಸಿ/ಎಸ್‌ಟಿ ಕಾಯ್ದೆಗೆ ಸಂಬಂಧಿಸಿ ಮಾ.20ರಂದು ನೀಡಿದ್ದ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿಕೊಂಡಿದೆ. ಸೂಕ್ತ ನಿಯಮಗಳನ್ನು ಅನುಸರಿಸದೆ ಯಾರನ್ನೇ ಆದರೂ ಬಂಧಿಸುವುದಕ್ಕೆ ಸಂಸತ್ತು ಕೂಡ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ. ಬಂಧನಕ್ಕೂ ಮೊದಲು ದೂರುಗಳ ಪರಿಶೀಲನೆಗೆ ಆದೇಶಿಸುವ ಮೂಲಕ ಅಮಾಯಕರ ಸ್ವಾತಂತ್ರ್ಯ ಮತ್ತು ಜೀವಿಸುವ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲಾಗಿದೆ ಎಂದು ಕೋರ್ಟ್ ತಿಳಿಸಿದೆ.
ನ್ಯಾ.ಆದರ್ಶ್ ಗೋಯಲ್ ಮತ್ತು ನ್ಯಾ.ಯು.ಯು. ಲಲಿತ್ ನ್ಯಾಯಪೀಠ ಈ ವಿಷಯ ತಿಳಿಸಿದೆ. ವಿಷಯಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳ ವಿಚಾರಣೆಯನ್ನು ಮುಂದೂಡಿ, ಕೋರ್ಟ್ ರಜಾಕಾಲದ ಬಳಿಕ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ. ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕೇಂದ್ರ ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಹಲವು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ಸಂಸತ್ತಿನಲ್ಲಿ ರಚಿಸಲಾದ ಕಾನೂನಿನಲ್ಲಿರುವ ನ್ಯೂನತೆಗಳನ್ನು ಕೋರ್ಟ್ ತುಂಬಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಸಂವಿಧಾನದ ಪರಿಚ್ಛೇದ 21 ಅನ್ನು ಕಾಪಾಡಬೇಕು ಎಂಬ ಈ ಹಿಂದಿನ ತೀರ್ಪುಗಳ ಆಧಾರದಲ್ಲಿ ಮಾ.20ರ ತೀರ್ಪು ನೀಡಲಾಗಿದೆ. ಪರಿಶೀಲನೆಯಿಲ್ಲದೆ, ಒಂದು ಕಡೆಯ ನಿಲುವಿನ ಆಧಾರದಲ್ಲಿ ಒಬ್ಬರನ್ನು ಬಂಧಿಸಲು ಹೇಗೆ ಅವಕಾಶ ಮಾಡಿಕೊಡುವುದು. ಪರಿಶೀಲಿಸದೆ ಅಮಾಯಕ ವ್ಯಕ್ತಿಯನ್ನು ಜೈಲಿಗೆ ಕಳುಹಿಸಿದರೆ, ಮೂಲಭೂತ ಹಕ್ಕುಗಳನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.
ಮಾ.20ರ ತೀರ್ಪು ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ ಎಂದು ಆಪಾದಿಸಿ ವಿವಿಧ ರಾಜ್ಯಗಳಲ್ಲಿ ದಲಿತ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ ತೀರ್ಪನ್ನು ಪ್ರಶ್ನಿಸಲು ಕೇಂದ್ರ ಹಾಗೂ ವಿವಿಧ ರಾಜ್ಯಗಳು ಮುಂದಾಗಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.