ಗೊಂದಲದ ಗೂಡಾದ ಐಟಿ ಅಧಿಕಾರಿ ಮಗನ ವಿಲಕ್ಷಣ ಅಪಹರಣ ಪ್ರಕರಣ

By Suvarna Web DeskFirst Published Sep 15, 2017, 4:14 PM IST
Highlights

ಕಳೆದ ನಾಲ್ಕು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರ ಪುತ್ರನ ನಾಪತ್ತೆ ಪ್ರಕರಣ ಮತ್ತಷ್ಟು ನಿಗೂಢವಾಗಿದ್ದು, ಇದೀಗ ಬಿಡುಗಡೆಗೆ ದುಷ್ಕರ್ಮಿಗಳು ₹50 ಲಕ್ಷ ಬೇಡಿಕೆ ಇಟ್ಟಿರುವ ಬಗ್ಗೆ ಅಧಿಕಾರಿಯ ಪುತ್ರನ ವಾಟ್ಸಪ್ ವಿಡಿಯೋ ಬಹಿರಂಗಗೊಂಡಿದೆ.

ಬೆಂಗಳೂರು: ಕಳೆದ ನಾಲ್ಕು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರ ಪುತ್ರನ ನಾಪತ್ತೆ ಪ್ರಕರಣ ಮತ್ತಷ್ಟು ನಿಗೂಢವಾಗಿದ್ದು, ಇದೀಗ ಬಿಡುಗಡೆಗೆ ದುಷ್ಕರ್ಮಿಗಳು ₹50 ಲಕ್ಷ ಬೇಡಿಕೆ ಇಟ್ಟಿರುವ ಬಗ್ಗೆ ಅಧಿಕಾರಿಯ ಪುತ್ರನ ವಾಟ್ಸಪ್ ವಿಡಿಯೋ ಬಹಿರಂಗಗೊಂಡಿದೆ.

ಅಪಹರಿಸಿ ಒತ್ತೆಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪುತ್ರನ ಮೂಲಕ ವಿಡಿಯೋ ಮಾಡಿಸಿ ವಾಟ್ಸಪ್ ಮೂಲಕ ಅಧಿಕಾರಿಗೆ ಕಳುಹಿಸಿಕೊಡಲಾಗಿದೆ. ಈ ನಡುವೆ, ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ.

ಕೆಂಗೇರಿ ಬಳಿಯ ಉಲ್ಲಾಳು ನಿವಾಸಿ ಹಾಗೂ ಐಟಿ ಅಧಿಕಾರಿ ನಿರಂಜನ್ ಅವರ ಪುತ್ರ ಶರತ್ (19) ಅಪಹರಣ ಯುವಕ. ಸೆ.10ರ ರಾತ್ರಿ ಅಪಹರಣವಾಗಿದ್ದು, ನಾಲ್ಕು ದಿನಗಳಾದರೂ ದುಷ್ಕರ್ಮಿಗಳ ಸುಳಿವು ಲಭ್ಯವಾಗಿಲ್ಲ.

ವಿಡಿಯೋ ಮೂಲಕ ಹಣದ ಬೇಡಿಕೆ ಇಟ್ಟ ಬಳಿಕ ಆರೋಪಿಗಳು ಯಾವುದೇ ಕರೆ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಡಿಪ್ಲೋಮಾ 2ನೇ ವರ್ಷ ವಿದ್ಯಾಭ್ಯಾಸ ಮಾಡುತ್ತಿರುವ ಶರತ್‌ಗೆ ಪೋಷಕರು ಬುಲೆಟ್ ಖರೀದಿಸಿ ನೀಡಿದ್ದರು. ಸೆ.10ರ ಬೆಳಗ್ಗೆ ದೇವಾಲಯಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ಬಂದ ಶರತ್ ಅದೇ ದಿನ ರಾತ್ರಿ ಸ್ನೇಹಿತರಿಗೆ ಬುಲೆಟ್ ತೋರಿಸಿ ಬರುವುದಾಗಿ ಹೇಳಿ ಹೋಗಿದ್ದ.

ಆದರೆ, ನಂತರ ಶರತ್ ಮನೆಗೆ ಹಿಂತಿರುಗಿಲ್ಲ. ಬುಲೆಟ್ ಸಹ ನಾಪತ್ತೆಯಾಗಿದೆ. ಅಪಹರಣ ವಿಡಿಯೋ ಅನ್ನು ಶರತ್ ತನ್ನ ಅಕ್ಕ, ತಾಯಿ ಮತ್ತು ತಂದೆಯ ಮೊಬೈಲ್‌ಗೆ ವಾಟ್ಸಪ್ ಮೂಲಕ ಕಳುಹಿಸಿಕೊಟ್ಟಿದ್ದ. ಬುಧವಾರ ಇದು ಬಹಿರಂಗಗೊಂಡಿದೆ. ಶರತ್‌ನ ಆತ್ಮೀಯ ಸ್ನೇಹಿತರನ್ನು ವಿಚಾರಣೆ ಮಾಡಲಾಗಿದೆ. ಆದರೆ, ಭಾನುವಾರ ಆತ ಯಾರನ್ನು ಭೇಟಿಯಾಗಿಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಹಣದ ಬೇಡಿಕೆ ಇಟ್ಟಿರುವ ಬಗ್ಗೆ ವಿಡಿಯೋ ಕೈ ಸೇರುತ್ತಿದ್ದಂತೆ ಪೋಷಕರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಸಿಸಿಬಿ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದುಷ್ಕರ್ಮಿಗಳು ₹50 ಲಕ್ಷಕ್ಕೆ ಬೇಡಿಕೆ ಇಡಲಾಗಿದೆ. ಆರೋಪಿಗಳ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದಿದ್ದಾರೆ.

ಶರತ್ ಮೇಲೆ ಅನುಮಾನ?:ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಪೊಲೀಸರಿಗೆ ಶರತ್‌ನ ಮೇಲೆಯೇ ಅನುಮಾನ ಮೂಡಿದೆ. ಪೋಷಕರಿಗೆ ರವಾನಿಸಿರುವ ವಾಟ್ಸಪ್ ವಿಡಿಯೋದಲ್ಲಿ ಶರತ್ ಮೊಗದಲ್ಲಿ ಆತಂಕ ಕಾಣುತ್ತಿಲ್ಲ. ಅಲ್ಲದೇ, ಧ್ವನಿಯಲ್ಲಿ ದುಗುಡವೂ ಇಲ್ಲ. ಹೀಗಾಗಿ ಆತನೇ ವಿಡಿಯೋ ಮಾಡಿ ಹಣದ ಬೇಡಿಕೆ ಇಟ್ಟಿರುವ ಸಾಧ್ಯತೆಗಳಿವೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಅಪಹರಣಕಾರರು ಬುಲೆಟ್ ಜತೆ ಶರತ್’ನನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಸಾಮಾನ್ಯವಾಗಿ ಅಪಹರಣಕಾರರು ಬುಲೆಟ್ ಜತೆ ಅಪಹರಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಅಲ್ಲದೇ, ಸ್ನೇಹಿತರಿಗೆ ತೋರಿಸುವುದಾಗಿ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಸ್ನೇಹಿತರನ್ನು ವಿಚಾರಿಸಿದರೆ ಯಾವ ಸ್ನೇಹಿತರ ಭೇಟಿಯಾಗಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಸಾಕಷ್ಟು ಅನುಮಾನ ಮೂಡಿದೆ. ಆದರೂ ಎಲ್ಲಾ ರೀತಿಯ ಕೋನದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

 

click me!