ಬೆಂಗಳೂರಲ್ಲಿ ಸಿಕ್ಕಿಬಿದ್ಳು ಆಲ್ ಇಂಡಿಯಾ ವಾಂಟೆಡ್ ಕ್ರಿಮಿನಲ್ ಒಂಟಿ ಕೈ ಸುಂದರಿ ಲೇಡಿ ಕೊಕೋವಾ

By Suvarna Web DeskFirst Published Nov 5, 2016, 3:14 AM IST
Highlights

ಒಬ್ಬ ವಂಚಕಿಯ ವಂಚನೆಯ ಹಾದಿಯ ಎಕ್ಸ್​'ಕ್ಲೂಸಿವ್ ಸ್ಟೋರಿ ಇದು. ದುಡ್ಡಿರೋ ಶ್ರೀಮಂತರು, ದುಡ್ಡಿಲ್ಲದೇ ಇರೋ ಬಡವರು ಇದನ್ನ ನೋಡಬೇಕು. ಸುಂದರಿಯೊಬ್ಬಳು 5 ರಾಜ್ಯಗಳಲ್ಲಿ ವಾಂಟೆಡ್ ಆಗಿದ್ದು, 200 ಜನರಿಗೆ ವಂಚಿಸಿರೋ ಈ ಕಥೆ, ಈ ವಂಚನೆಯಲ್ಲಿರೋ ಮೋಸದ ಹಾದಿ ದಿಗ್ಭ್ರಮೆ ಮೂಡಿಸುತ್ತೆ.

ಬೆಂಗಳೂರು(ನ. 05): ಸೌಂದರ್ಯ ಹಾಗೂ ಬುದ್ಧಿವಂತಿಕೆಯನ್ನೇ ಬಂಡವಾಳ ಮಾಡಿಕೊಂಡು ಬರೋಬ್ಬರಿ 200ಕ್ಕೂ ಹೆಚ್ಚು ಮಂದಿಯನ್ನು ಮಹಿಳೆಯೊಬ್ಬಳು ಏಮಾರಿಸಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ರಾಜಸ್ಥಾನ ಮೂಲದ ಈಕೆ ಹಾಕದ ವೇಷವಿಲ್ಲ, ಮಾಡದ ಮೋಸವಿಲ್ಲ. ಐದು ರಾಜ್ಯಗಳಿಗೆ ಬೇಕಾದ ವಾಂಟೆಡ್ ಮಹಿಳೆಯಾದ ಖುಷ್ಬು ಶರ್ಮಾಳನ್ನು ಬೆಂಗಳೂರಿನ ಪೊಲೀಸರು ನಿನ್ನೆ ಹಿಡಿದುಹಾಕಿದ್ದಾರೆ. ಈಕೆಯ ಸ್ಟೋರಿ ಒಂದು ರೋಚಕ ಸಿನಿಮಾ ಮಾಡುವಷ್ಟು ಭರ್ಜರಿಯಾಗಿದೆ.

ಅಪಘಾತದಲ್ಲಿ ಒಂದು ಕೈ ಕಳೆದುಕೊಂಡರೂ ಖುಷ್ಬೂ ಶರ್ಮಾಳ ವಂಚನೆಯ ಬುದ್ಧಿಗೇನೂ ಕೊರತೆ ಇರಲಿಲ್ಲ. ಇವಳ ಕಿರುನಗೆಯಲ್ಲಿ ಮರುಳು ಮಾಡುವ ಮಾದಕತೆಯಿದೆ. ಎದುರಿಗೆ ಸಾಗುವ ಪ್ರತಿಯೊಬ್ಬ ರಸಿಕನೂ ಇವಳತ್ತ ನೋಡದೇ ಇರಲಾರ. ಈಕೆಯ ಸುಳಿವು ಹಿಡಿಯುವುದೆಂದರೆ ಮೀನಿನ ಹೆಜ್ಜೆ ಹುಡುಕಿದಂತೆ..! ಈಕೆ ಐಎಎಸ್ ಅಧಿಕಾರಿಯೂ ಹೌದು.. ಸುಪ್ರೀಂಕೋರ್ಟ್ ವಕೀಲೆಯೂ ಹೌದು.. ಇನ್ನೂ ಹಲವು ವೇಷ ತೊಡುವ ಮಹಾನ್ ಕಲಾವಿದೆ. ಈಕೆ ಓದಿರುವುದು ಬರೇ 8ನೇ ಕ್ಲಾಸಾದರೂ ಇಂಗ್ಲೀಷನ್ನು ಅರಳು ಹುರಿದಂತೆ ಮಾತನಾಡುತ್ತಾಳೆ. ಇವಳಿಗೆ ಒಂದು ಕೈ ಇಲ್ಲ. ಶಾಲೆಯಲ್ಲಿದ್ದಾಗ ಅಪಘಾತವೊಂದರಲ್ಲಿ ಬಲಗೈ ಕಳೆದುಕೊಂಡಿದ್ದಾಳೆ. ಆದರೂ ಅಮಾಯಕರನ್ನು ಪಟ್ಟುಹಾಕಿ ಬಲೆಗೆ ಕೆಡುವುವಷ್ಟು ಸಮರ್ಥೆಯಾದ ಇವಳು ಒಂಟಿಗೈ ವಂಚಕಿ.

200ಕ್ಕೂ ಹೆಚ್ಚು ಕೇಸ್;
ಶ್ರೀಮಂತರಿಗೆ ಬಲೆ ಬೀಸುತ್ತಿದ್ದ ಈ ಒಂಟಿಗೈ ಸುಂದರಿಗೆ ವಂಚನೆಯೇ ಫುಲ್ ಟೈಂ ವೃತ್ತಿ. ರಾಜಸ್ತಾನ, ಮಹಾರಾಷ್ಟ್ರ, ದೆಹಲಿ, ಹೈದರಾಬಾದ್ ಪೊಲೀಸರು ಈಕೆಯನ್ನು ಹುಡುಕುತ್ತಲೇ ಇದ್ದಾರೆ. ಮೂರು ಬಾರಿ ಅರೆಸ್ಟ್ ಆಗಿ, ಜಾಮೀನು ಪಡೆದು ಹೊರಬಂದಿದ್ದರೂ ಮೋಸದ ಬುದ್ದಿಯನ್ನು ಮುಂದುವರಿಸಿದಳು. ಆದರೆ, ಬೆಂಗಳೂರಿನಲ್ಲಿ ನಾಲ್ಕೈದು ಪ್ರಕರಣಗಳಲ್ಲಿ ಈಕೆ ಕರಾಮತ್ತು ತೋರಿಸಿದ ಬಳಿಕ ಸಿಕ್ಕಿಬಿದ್ದಿದ್ದಾಳೆ. ದಾಖಲಾಗಿರುವ ಪ್ರಕರಣಗಳಿಗೂ ವಾಸ್ತವವಾಗಿ ವಂಚನೆಗೊಳಗಾದವರ ಪ್ರಮಾಣಕ್ಕೂ ಅಜಗಜಾಂತರವಿದೆ. ಮುಜುಗರದ ಕಾರಣದಿಂದಾಗಿ ದೂರು ದಾಖಲಿಸಲು ಸಾಕಷ್ಟು ಮಂದಿ ಹಿಂದೇಟು ಹಾಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸುತ್ತಾರೆ.

ಜೈಲು-ಜಾಮೀನು?
ಹಲವು ವಂಚನೆಯ ಪ್ರಕರಣಗಳಲ್ಲಿ ಖುಷ್ಬು ಶರ್ಮಾ ಮೂರು ಬಾರಿ ಜೈಲು ಸೇರಿರುತ್ತಾಳೆ. ಆದರೆ, ಪ್ರತೀ ಬಾರಿಯೂ ಜಾಮೀನಿನ ಮೇಲೆ ಹೊರಬಂದಿರುತ್ತಾಳೆ. ಈಕೆಯನ್ನ ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿ ರಾಜಸ್ಥಾನದ ಪೊಲೀಸರು ಪ್ರಕಟಣೆ ಕೂಡ ನೀಡಿರುತ್ತಾರೆ. ಈಕೆಗೆ ಒಂದು ಕೈ ಇಲ್ಲವೆಂಬ ಅನುಕಂಪದಿಂದ ಜಾಮೀನು ಸಿಗುತ್ತಿದೆಯಾ? ಅಥವಾ ಈಕೆಯ ವಂಚನೆಯ ಹಿಂದೆ ದೊಡ್ಡದೊಡ್ಡವರ ಕೈವಾಡ ಇದೆಯಾ? ಎಂದು ಈಕೆಯಿಂದ ವಂಚನೆಗೊಳಗಾದ ಬೆಂಗಳೂರಿಗ ಪ್ರವೀಣ್ ಎಂಬುವವರು ಸುವರ್ಣನ್ಯೂಸ್'ನಲ್ಲಿ ಪ್ರಶ್ನಿಸಿದ್ದಾರೆ.

ಎಲ್ಲೆಲ್ಲಿ ಕೇಸು?
ರಾಜಸ್ಥಾನದಲ್ಲಿ 150ಕ್ಕೂ ಹೆಚ್ಚು ಕೇಸು
ಪುಣೆಯಲ್ಲಿ 18ಕ್ಕೂ ಹೆಚ್ಚು ಕೇಸ್
ತೆಲಂಗಾಣ ಮತ್ತು ಆಂಧ್ರದಲ್ಲಿ 10ಕ್ಕೂ ಹೆ
ಬೆಂಗಳೂರಲ್ಲಿ 2 ಕೇಸು

ವಂಚಕಿಯ ಟೈಮ್'ಲೈನ್:
2015ರ ಜೂನ್-ಜುಲೈನಲ್ಲಿ ರಾಜಸ್ಥಾನದಲ್ಲಿ ಈಕೆಯಿಂದ ಹಲವರಿಗೆ ವಂಚನೆ
2015ರ ಜುಲೈನಿಂದ ಸೆಪ್ಟಂಬರ್'ವರೆಗೂ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಹಲವರಿಗೆ ಟೋಪಿ
2015ರ ನವೆಂಬರ್'ನಿಂದ 2016ರ ಫೆಬ್ರವರಿವರೆಗೂ ಪುಣೆಯಲ್ಲಿ ಹಲವರಿಗೆ ವಂಚನೆ
2016ರ ಫೆಬ್ರವರಿಯಿಂದ ದೆಹಲಿಯಲ್ಲಿ ಹಲವರ ಸುಲಿಗೆ
ಕೆಲ ತಿಂಗಳಿನಿಂದೀಚೆ ಬೆಂಗಳೂರಿನಲ್ಲೂ ಈಕೆಯ ಕರಾಮತ್ತು
2016ರ ನ. 4ರಂದು ಬೆಂಗಳೂರಿನ ಪೊಲೀಸರಿಂದ ಬಂಧನ

ರಾಜಸ್ತಾನದ ಈ ಹುಡುಗಿಯ ವಯಸ್ಸು ಕೇವಲ 27. ಮೂಲ ಹೆಸರು ಖುಷ್ಬು ಶರ್ಮಾ ಆದರೂ, ಈಕೆಗೆ ಇನ್ನೂ ಐದಾರು ಹೆಸರುಗಳಿವೆ.
1) ಖುಷ್ಬೂ ಶರ್ಮಾ
2) ಸ್ಮೃತಿ ಶರ್ಮಾ
3) ಲೇಡಿ ಕೊಕೋವಾ
4) ಲೇಡಿ ಡಾನ್

ಈಕೆ ತೊಟ್ಟ ನಕಲಿ ವೇಷಗಳು:
1) ಸುಪ್ರೀಂಕೋರ್ಟ್ ವಕೀಲೆ
2) ಐಎಎಸ್ ಅಧಿಕಾರಿ
3) ಐಎಎಸ್ ಅಧಿಕಾರಿಯ ಪುತ್ರಿ
4) ರೈಲ್ವೆ ಅಧಿಕಾರಿಯ ಮಗಳು
5) ಖ್ಯಾತ ಚಿತ್ರನಟಿ ತೃಪ್ತಿ ದೇಶಪಾಂಡೆಯ ಮಗಳು

ಪೊಲೀಸರಿಗೆ ಪತ್ತೆಯಾಗಿದ್ದು:
1) ಹತ್ತಾರು ನಕಲಿ ಐಡಿ ಕಾರ್ಡ್'ಗಳು
2) 8 ನಕಲಿ ಇ-ಮೇಲ್ ಐಡಿ
3) ವಿವಿಧ ಹೆಸರುಗಳಲ್ಲಿ 7 ಫೇಸ್ಬುಕ್ ಐಡಿ
4) ನೂರಕ್ಕೂ ಹೆಚ್ಚು ಸಿಮ್'ಕಾರ್ಡ್'ಗಳು

ಶ್ರೀಮಂತರಿಗೆ ಬ್ಲ್ಯಾಕ್'ಮೇಲ್ ಹೇಗೆ?
ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಬಲ್ಲ ಈಕೆ ಸಿರಿವಂತ ಯುವಕರನ್ನು ಪುಸಲಾಯಿಸಿ ತಾನಿದ್ದ ಸ್ಥಳಕ್ಕೆ ಕರೆಸಿಕೊಳ್ಳುತ್ತಿದ್ದಳು. ತನ್ನ ಜೊತೆ ಸಲುಗೆ ಬೆಳೆಸಿಕೊಳ್ಳಲು ಈಕೆಯೇ ಕುಮ್ಮಕ್ಕು ಕೊಡುತ್ತಾಳೆ. ಆ ಅಮಾಯಕರು ಇವಳ ಜೊತೆ ಮುಂದುವರಿದರೆ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡುತ್ತಾಳೆ. ನಂತರ ಆ ಶ್ರೀಮಂತರನ್ನು ಬ್ಲ್ಯಾಕ್'ಮೇಲ್ ಮಾಡಲು ಆರಂಭಿಸಿ ಹಣ ಪೀಕಿಸುತ್ತಾಳೆ.

ವಂಚನೆ ಪ್ರಕರಣ 1:
ಬೆಂಗಳೂರಿನ ಖ್ಯಾತ ವಕೀಲರನ್ನು ಭೇಟಿಯಾಗಿದ್ದ ಖುಷ್ಬೂ ಶರ್ಮಾ, ತಾನೊಬ್ಬ ವಕೀಲೆ ಎಂದು ಪರಿಚಯಿಸಿಕೊಳ್ಳುತ್ತಾಳೆ. ತಮ್ಮ ಬಳಿ ಜೂನಿಯರ್ ಆಗಿ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತಾಳೆ. ಬಳಿಕ, ಯುಬಿ ಸಿಟಿಯಲ್ಲಿ ಕಚೇರಿಗೆ ರೂಮು ಕೊಡಿಸುವುದಾಗಿ ನಂಬಿಸುತ್ತಾಳೆ. ಆ ನಂತರ, ಆ ರೂಮಿನ ಇಂಟೀರಿಯರ್ ಡಿಸೈನ್'ಗಾಗಿ ಒಂದು ಲಕ್ಷ ಹಣ ಪಡೆದುಕೊಂಡು ನಾಪತ್ತೆಯಾಗುತ್ತಾಳೆ.

ವಂಚನೆ ಪ್ರಕರಣ 2:
ಜೈಪುರದ ಆದರ್ಶ ನಗರ್ ಕಾರ್ ಕಳವು ಪ್ರಕರಣವಿದು. ಅಜ್ಮೇರ್ ರಸ್ತೆ ಬಳಿ ಕಾರೊಂದರಲ್ಲಿ ಲಿಫ್ಟ್ ಪಡೆಯುತ್ತಾಳೆ. ಕಾರು ಚಲಾಯಿಸುತ್ತಿದ್ದವನ ಸಲುಗೆ ಪಡೆದು ರಾಜಾ ಪಾರ್ಕ್'ಗೆ ಡ್ರಾಪ್ ಮಾಡುವಂತೆ ಕೇಳುತ್ತಾಳೆ. ತನ್ನೊಂದಿಗೆ ಸೆಕ್ಸ್ ಮಾಡಲು ಇಷ್ಟವಿದ್ದರೆ ಮೆಡಿಕಲ್ ಶಾಪ್'ನಿಂದ ಗರ್ಭನಿರೋಧಕ ಮಾತ್ರೆ ತೆಗೆದುಕೊಂಡು ಬರುವಂತೆ ಆ ವ್ಯಕ್ತಿಗೆ ತಿಳಿಸುತ್ತಾಳೆ. ಈಕೆಯ ಅಂದಚಂದ ಮತ್ತು ಪ್ರಲೋಬನೆಯ ಮಾತುಗಳಿಂದ ಮರುಳಾದ ಆ ಶ್ರೀಮಂತ ವ್ಯಕ್ತಿ ಕಾರಿನಿಂದ ಕೆಳಗಿಳಿದು ಹೊರಹೋಗುತ್ತಾಳೆ. ಆತ ಹೋಗುತ್ತಿದ್ದಂತೆಯೇ ಈಕೆ ಕಾರನ್ನು ಸ್ಟಾರ್ಟ್ ಮಾಡಿ ಕದ್ದೊಯ್ಯುತ್ತಾಳೆ.

ವಂಚನೆ ಪ್ರಕರಣ 3:
ರಾಜಸ್ಥಾನದ ಖ್ಯಾತ ನಟಿ ತೃಪ್ತಿ ಪಾಂಡೆಯ ಮಗಳ ಹೆಸರಿನಲ್ಲಿ ಫೇಸ್ಬುಕ್ ಐಡಿ ರಚಿಸುತ್ತಾಳೆ. ತಾನು ನಟಿಯ ಪುತ್ರಿ ಎಂದು ಆ ಫೇಸ್ಬುಕ್'ನಲ್ಲಿ ಮಾಹಿತಿ ಹಾಕುತ್ತಾಳೆ. ತೃಪ್ತಿ ಪಾಂಡೆಯ ಹೆಸರಿನಲ್ಲಿ ಎನ್'ಜಿಓಗಾಗಿ ಹಲವರಿಂದ ಹಣ ಪಡೆದು ವಂಚಿಸುತ್ತಾಳೆ. ಆದರೆ, ತನಗೂ ಖುಷ್ಬೂಗೂ ಯಾವುದೇ ಸಂಬಂಧ ಇಲ್ಲ ಎಂದು ತೃಪ್ತಿ ಪಾಂಡೆ ಸ್ಪಷ್ಟಪಡಿಸಿದಾಗ ಖುಷ್ಬೂ ಮಾಡಿದ ಮೋಸ ಎಲ್ಲರಿಗೂ ಅರಿವಾಗುತ್ತದೆ.

- ರಮೇಶ್ ಕೆ.ಹೆಚ್. ಕ್ರೈಂ ಬ್ಯೂರೋ, ಸುವರ್ಣ ನ್ಯೂಸ್

click me!