
ಭಾರತದಲ್ಲಿರುವ ಹಲವು ವಿವಾದಾತ್ಮಕ ಸ್ವಾಮೀಜಿಗಳಲ್ಲಿ ರಾಮ್'ಪಾಲ್ ಬಾಬಾ ಕೂಡ ಒಬ್ಬರು. ಸ್ವಘೋಷಿತ ದೇವಮಾನವರಾಗಿರುವ ರಾಮ್'ಪಾಲ್ ಸಾಕಷ್ಟು ಅನುಯಾಯಿಗಳನ್ನ ಸಂಪಾದಿಸಿದ್ದಾರೆ. ಜೊತೆಗೆ ಹಲವು ಕ್ರಿಮಿನಲ್ ಮೊಕದ್ದಮೆಗಳನ್ನೂ ಸೆಳೆದುಕೊಂಡಿದ್ದಾರೆ.
ರಾಮಪಾಲ್ ಅವರು ಹರಿಯಾಣದ ಸೋನೆಪತ್ ಜಿಲ್ಲೆಯ ಕುಗ್ರಾಮವೊಂದರಲ್ಲಿ ರೈತರ ಕುಟುಂಬದಲ್ಲಿ ಜನಿಸಿದವರು. ಕರ್ನಾಲ್'ನ ನಿಲೋಖೆರಿಯಲ್ಲಿ ಐಟಿಐ ಡಿಪ್ಲೊಮಾ ಮಾಡಿ ಉದ್ಯೋಗದಲ್ಲಿದ್ದವರು. ಭಜನೆಗಳನ್ನ ಹಾಡುವ ಹವ್ಯಾಸವಿದ್ದ ಅವರು ಆ ಮೂಲಕವೇ ಜನಪ್ರಿಯತೆ ಸಾಧಿಸಿದರು. 18 ವರ್ಷ ಕೆಲಸ ಮಾಡಿದ ಬಳಿಕ ಉದ್ಯೋಗಕ್ಕೆ ತಿಲಾಂಜಲಿ ಹೇಳಿದ ಅವರು 1999ರಲ್ಲಿ ಸತ್'ಲೋಕ್ ಆಶ್ರಮ ಸ್ಥಾಪಿಸಿದರು. ಕಬೀರ್ ಪಂಥದ ಭಕ್ತಿ ಮಾರ್ಗವನ್ನು ಅವರು ಜನರಿಗೆ ಬೋಧಿಸಿದರು. ಅವರಿಗೆ ಓರ್ವ ಪತ್ನಿ ಹಾಗೂ ನಾಲ್ವರು ಮಕ್ಕಳಿದ್ದಾರೆ. ಅವರ ಇಡೀ ಕುಟುಂಬವು ಸತ್'ಲೋಕ್ ಆಶ್ರಮದಲ್ಲೇ ನೆಲಸಿದೆ.
ಟೀಕಾ ಜಗತ್ತು:
ರಾಮ್'ಪಾಲ್ ಬಾಬಾ ಅವರದ್ದು ಕಬೀರರ ಭಕ್ತಿ ಮಾರ್ಗವಾದರೂ ಅವರು ಅನ್ಯ ಧರ್ಮಗಳ ಟೀಕೆಗಳ ಮೂಲಕವೇ ತಮ್ಮ ಪಂಥದ ಪ್ರಚಾರ ಮಾಡುತ್ತಾರೆಂಬ ಆರೋಪವಿದೆ. ದೇವರ ಅಸ್ತಿತ್ವದ ಕುರಿತು ವಿವಿಧ ಧರ್ಮಗಳ ನಿಲುವನ್ನು ಅವರು ಸದಾ ಪ್ರಶ್ನಿಸುತ್ತಲೇ ಇರುತ್ತಾರೆ. ಹಿಂದೂ, ಮುಸ್ಲಿಮ್, ಸಿಖ್, ಕ್ರೈಸ್ತ ಎಂಬ ಯಾವುದೇ ಧರ್ಮಗಳಿಲ್ಲ; ಮನುಕುಲವೊಂದೇ ಧರ್ಮ ಎಂಬುದು ಅವರ ತತ್ವ. ಸಂತ ಕಬೀರರನ್ನ ಪರಮಾತ್ಮನೆಂದೇ ಅವರು ಕರೆಯುತ್ತಾರೆ.
ಆರ್ಯಸಮಾಜದವರ ಜೊತೆ ಕ್ಯಾತೆ:
ಹಿಂದೂ ಧರ್ಮದ ಸುಧಾರಣೆಗೆಂದು ಅಸ್ತಿತ್ವಕ್ಕೆ ಬಂದಿದ್ದ ಆರ್ಯ ಸಮಾಜದ ವಿರುದ್ಧ ರಾಮ್'ಪಾಲ್ ಬಾಬಾ ಸದಾ ತಗಾದೆ ತೆಗೆಯುತ್ತಲೇ ಇದ್ದರೆನ್ನಲಾಗಿದೆ. ಆರ್ಯ ಸಮಾಜ ಸಂಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ ಬರೆದಿದ್ದ ಸತ್ಯಾರ್ಥ್ ಪ್ರಕಾಶ್ ಎಂಬ ಪುಸ್ತಕದ ಕುರಿತು ರಾಮ್'ಪಾಲ್ ಬಾಬಾ ಟೀಕೆ ಮಾಡಿದ್ದರು. ಈ ವಿಚಾರವಾಗಿ ಬಾಬಾ ಬೆಂಬಲಿಗರು ಆರ್ಯ ಸಮಾಜದವ ಅನುಯಾಯಿಗಳ ಮೇಲೆ ಹಿಂಸಾಚಾರ ನಡೆಸಿದ್ದರು. 20 ವರ್ಷದ ವ್ಯಕ್ತಿಯೊಬ್ಬನ ಹತ್ಯೆಯೂ ಆಗಿತ್ತು.
ಈ ಪ್ರಕರಣದಲ್ಲಿ ರಾಮಪಾಲ್ ಬಾಬಾ ಸೇರಿದಂತೆ 38 ಜನರನ್ನು ಪೊಲೀಸರು ಬಂಧಿಸಿದ್ದರು. 2008ರಲ್ಲಿ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣದ ಕೋರ್ಟ್ ವಿಚಾರಣೆಗೆ 43 ಬಾರಿ ಸಮನ್ಸ್ ಕರೆದರೂ ಅವರು ಹಾಜರಾಗಿರಲಿಲ್ಲ. 2014ರಲ್ಲಿ ಹೈಡ್ರಾಮಾ ಬಳಿಕ ಅವರನ್ನು ಪೊಲೀಸರು ಮತ್ತೊಮ್ಮೆ ಬಂಧಿಸಿದ್ದರು.
ಕ್ಷೀರಾಭಿಷೇಕ:
ರಾಮ್'ಪಾಲ್ ಬಾಬಾ ಬಗ್ಗೆ ಮತ್ತೊಂದು ಕುತೂಹಲದ ವಿಚಾರವಿದೆ. ಬಾಬಾ ನಿತ್ಯವೂ ಹಾಲಿನಲ್ಲಿ ಸ್ನಾನ ಮಾಡುತ್ತಿರುತ್ತಾರೆ. ಅದೇ ಹಾಲು ಬಳಸಿ ಹಾಲಿನ ಕೀರನ್ನು ಮಾಡಿ ಪ್ರಸಾದವಾಗಿ ಭಕ್ತರಿಗೆ ಹಂಚಲಾಗುತ್ತಿತ್ತು. ಈ ಖೀರು ಅನಾರೋಗ್ಯ ನಿವಾರಣೆಗೆ ರಾಮಬಾಣವೆಂಬು ನಂಬಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.