
ಬೆಂಗಳೂರು (ಜು.24): ಈಗಾಗಲೇ 11,500 ಸಾವಿರಕ್ಕೂ ಅಧಿಕ ಪೌರ ಕಾರ್ಮಿಕರ ಕಾಯಮಾತಿ ಪ್ರಕ್ರಿಯೆಗೆ ಚಾಲನೆ ನೀಡಿರುವ ರಾಜ್ಯ ಸರ್ಕಾರ, 3 ಸಾವಿರಕ್ಕೂ ಅಧಿಕ ಪೌರ ಕಾರ್ಮಿಕರಿಗೆ ತಲಾ 7.5 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲು ನಿರ್ಧರಿಸಿದೆ.
ನೈರ್ಮಲ್ಯ ಕುರಿತ ಅಧ್ಯಯನಕ್ಕೆ ಸಿಂಗಪೂರ್‌ಗೆ ಮಂಗಳವಾರ ತೆರಳಲಿರುವ ರಾಜ್ಯದ 39 ಪೌರ ಕಾರ್ಮಿಕರ ತಂಡವನ್ನು ಸೋಮವಾರ ವಿಕಾಸಸೌಧದಲ್ಲಿ ಬೀಳ್ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಈ ವಿಷಯ ತಿಳಿಸಿದರು. ಪೌರ ಕಾರ್ಮಿಕರ ಸಮಗ್ರ ಬದುಕಿನ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಗಳನ್ನಿಟ್ಟಿದೆ. ಈಗಾಗಲೇ 14 ಸಾವಿರಕ್ಕೂ ಅಧಿಕ ಗುತ್ತಿಗೆ ಆಧಾರದ ಕಾರ್ಮಿಕರ ಪೈಕಿ 11,500 ಕ್ಕೂ ಅಧಿಕ ಕಾರ್ಮಿಕರ ಕಾಯಮಾತಿಗೆ ಚಾಲನೆ ನೀಡಿದ್ದೇವೆ. ಪೌರ ಕಾರ್ಮಿಕರಿಗೆ 16 ರಿಂದ 17 ಸಾವಿರ ರೂಗಳವರೆಗೆ ಕನಿಷ್ಠ ವೇತನ ಸೌಲಭ್ಯ ಸ್ಥಳೀಯ ಸಂಸ್ಥೆಗಳಿಂದಲೇ ನೀಡಲಾಗುತ್ತಿದೆ. ಇದೀಗ ಮೊದಲ ಹಂತದಲ್ಲಿ ಮೂರು ಸಾವಿರ ಕಾರ್ಮಿಕರಿಗೆ ತಲಾ ಏಳುವರೆ ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲು ನಿರ್ಧರಿಸಿದ್ದೇವೆ. ಈ ಯೋಜನೆಯಡಿ ರಾಜ್ಯ ಸರ್ಕಾರ ತಲಾ ಪೌರ ಕಾರ್ಮಿಕನ ಮನೆ ನಿರ್ಮಾಣಕ್ಕೆ 6 ಲಕ್ಷ ರೂಗಳ ವೆಚ್ಚ ಭರಿಸಿದರೆ, ಕೇಂದ್ರ ಸರ್ಕಾರದಿಂದ ಒಂದೂವರೆ ಲಕ್ಷ ರೂಗಳ ನೆರವು ಸಿಗಲಿದೆ. ಹಂತಹಂತವಾಗಿ ಎಲ್ಲ ಕಾರ್ಮಿಕರಿಗೂ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು. ಇನ್ನು ಆರ್‌ಟಿಇ ಕಾಯ್ದೆಯಡಿ ಉಚಿತ ಶಿಕ್ಷಣ ಮತ್ತು ಸೀಟು ಹಂಚಿಕೆ ವೇಳೆ ಪೌರ ಕಾರ್ಮಿಕರ ಮಕ್ಕಳಿಗೆ ಮೀಸಲಾತಿ ಕೊಡಲು ಸರ್ಕಾರ ಮುಂದಾಗಿದೆ. ಪೌರ ಕಾರ್ಮಿಕರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸೌಲಭ್ಯ ದಕ್ಕಬೇಕು ಎಂಬುದು ಸರ್ಕಾರದ ಉದ್ದೇಶ ಎಂದರು.
ಸಿಂಗಪೂರ್ ಮಾತ್ರವಲ್ಲ, ಜಪಾನ್ ಕೋರಿಯಾಕ್ಕೂ ಪ್ರವಾಸ
ನೈರ್ಮಲ್ಯ ನಿರ್ವಹಣೆ ಮಾಡುವ ಪೌರ ಕಾರ್ಮಿಕರಲ್ಲಿ ಹೆಚ್ಚಿನ ತಾಂತ್ರಿಕ ಅರಿವು, ಕೌಶಲ್ಯ ವೃದ್ಧಿಗಾಗಿ ಸಿಂಗಪೂರ್‌ಗೆ ಅಧ್ಯಯನ ಪ್ರವಾಸವನ್ನು ಕೇವಲ ಸಿಂಗಪೂರ್ ಮಾತ್ರವಲ್ಲದೇ ಜಪಾನ್, ದಕ್ಷಿಣ ಕೋರಿಯಾ ಮತ್ತು ಶ್ರೀಲಂಕಾ ದೇಶಗಳಿಗೂ ಪ್ರವಾಸ ಆಯೋಜಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಸಚಿವ ಖಂಡ್ರೆ ತಿಳಿಸಿದರು. ರಾಜ್ಯ ಸರ್ಕಾರ ತಲಾ ಪೌರ ಕಾರ್ಮಿಕರ ಪ್ರವಾಸಕ್ಕೆ 100 ಡಾಲರ್ ಪಾಕೆಟ್ ಮನಿ ಮತ್ತು 75 ಸಾವಿರ ರೂ ಪ್ರಯಾಣ ವೆಚ್ಚ ಸೇರಿದಂತೆ ಸುಮಾರು ಒಂದೂವರೆ ಲಕ್ಷ ರೂ ವೆಚ್ಚ ಮಾಡುತ್ತಿದೆ. ಈಗಾಗಲೇ ಮೊದಲ ತಂಡದಲ್ಲಿ 40 ಮಂದಿ ತೆರಳಿದ್ದು, ಜು.25 ರಂದು 39 ಮಂದಿ ಪೌರ ಕಾರ್ಮಿಕರು ಹಾಗೂ ಮೂವರು ಅಧಿಕಾರಿಗಳ ತಂಡ ತೆರಳಲಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.