
ಬೆಂಗಳೂರು/ಹರಪನಹಳ್ಳಿ (ಜೂ. 01): ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ಸರ್ಕಾರವು ಈಗ ವರುಣನ ಕೃಪೆಗೆ ಮುಜರಾಯಿ ದೇವಾಲಯಗಳಲ್ಲಿ ಜೂ.6 ರಂದು ವಿಶೇಷ ಪೂಜೆ ಆಯೋಜನೆ ನಿರ್ಧರಿಸಿದೆ.
ವರುಣನ ದೇವನ ಪ್ರಾರ್ಥನೆಗಾಗಿ ಮುಜರಾಯಿ ಇಲಾಖೆಗೆ ಒಳಪಡುವ ಆರ್ಥಿಕವಾಗಿ ಸದೃಢವಾಗಿರುವ ದೇವಾಲಯಗಳಲ್ಲಿ ಜೂ.6ರ ಗುರುವಾರ ಅಭಿಷೇಕ, ಪರ್ಜನ್ಯ ಜಪ, ಹೋಮ ನಡೆಸಬೇಕು. ಇವುಗಳನ್ನು ಬಾಹ್ಮೀ ಮುಹೂರ್ತದಿಂದ ಪ್ರಾರಂಭಿಸಬೇಕು.
ಈ ವಿಶೇಷ ಪೂಜೆಗೆ .10 ಸಾವಿರ ವೆಚ್ಚ ಮೀರಬಾರದು. ದೇವಾಲಯಗಳ ನಿಧಿಯಿಂದಲೇ ಆ ವೆಚ್ಚ ಭರಿಸಲು ಅನುಮತಿ ನೀಡಬೇಕು ಎಂದು ಕಂದಾಯ ಇಲಾಖೆ (ಮುಜರಾಯಿ) ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ತಿಪ್ಪೀರಮ್ಮ ಆದೇಶಿಸಿದ್ದಾರೆ.
ಈ ಬಗ್ಗೆ ಹರಪನಹಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಮುಜರಾಯಿ ಹಾಗೂ ಮೂಲಸೌಕರ್ಯ ಖಾತೆ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು, ಮಳೆಗಾಗಿ ಸಮ್ಮಿಶ್ರ ಸರ್ಕಾರ ದೇವರ ಮೊರೆ ಹೋಗಲು ತೀರ್ಮಾನಿಸಿದ್ದು, ಜೂ.6ರಂದು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಮುಂಚೂಣಿ ದೇವಾಲಯಗಳಲ್ಲಿ ಪರ್ಜನ್ಯ ಜಪ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಆವರಿಸಿದ್ದು, ಮಳೆ ಬಾರದಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರ ಅನುಮತಿ ಪಡೆದು ರೈತರ ಹಿತಕ್ಕಾಗಿ ಪರ್ಜನ್ಯ ಜಪ ಮಾಡಲು ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.
ಈಗಾಗಲೇ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಸೂಚಿಸಿದ್ದೇನೆ. ಅಂದು ಬೆಳಗಿನ ಜಾವ 5 ಗಂಟೆಗೆ ಪರ್ಜನ್ಯ ಜಪ ಪೂಜೆ ನಡೆಯುವುದು ಎಂದು ಅವರು ಹೇಳಿದರು.
- ಸಾಂದರ್ಭಿಕ ಚಿತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.