ಡ್ರಗ್ಸ್ ಅಪರಾಧಗಳಿಗೆ ಗಲ್ಲು ಶಿಕ್ಷೆ ಖಾಯಂ!

First Published Jul 13, 2018, 5:01 PM IST
Highlights

ಡ್ರಗ್ಸ್ ಅಪರಾಧಗಳಿಗೆ ಮರಣದಂಡನೆಯೇ ಗತಿ

ಶ್ರೀಲಂಕಾ ಸರ್ಕಾರದ ಮಹತ್ವದ ಆದೇಶ

40 ವರ್ಷಗಳ ಬಳಿಕ ಗಲ್ಲು ಶಿಕ್ಷೆಗೆ ಅನುಮೋದನೆ

ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ನಿರ್ಧಾರ

ಕೋಲಂಬೋ(ಜು.13): ಮಾದಕ ದ್ರವ್ಯ ಅಪರಾಧಿಗಳಿಗೆ ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆ ಕಾಯಂಗೊಳಿಸಲಾಗಿದೆ. ಈ ಮೂಲಕ ಡ್ರಗ್ ಸಂಬಂಧಿತ ಅಪರಾಧಗಳಿಗೆ ಮರಣದಂಡನೆ ವಿಧಿಸುವ ಸೂಚನೆಗೆ ಸುಮಾರು 40 ವರ್ಷಗಳ ಬಳಿಕ ಶ್ರೀಲಂಕಾ ಸರ್ಕಾರ ಸರ್ವಾನುಮತದದಿಂದ ಅನುಮೋದನೆ ನೀಡಿದೆ.

1978ರಿಂದಲೂ ಶ್ರೀಲಂಕಾದಲ್ಲಿ ಯಾವುದೇ ಅಪರಾಧಕ್ಕೂ ಮರಣದಂಡನೆ ಶಿಕ್ಷೆ ಜಾರಿಯಾಗಿಲ್ಲ. ಆದರೆ ಗಂಭೀರ ಅಪರಾಧಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಈ ನಿರ್ಧಾರಕ್ಕೆ ಬಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಗಾಮಿನಿ ಜಯವಿಕ್ರೇಮಾ ಪೆರಾರಾ, ಡ್ರಗ್ಸ್ ಸಂಬಂಧಿತ ಅಪರಾಧಗಳಿಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಈಗಲೂ ಕಾರಾಗೃಹಗಳ ಮೂಲಕ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿದ್ದು, ದೇಶವನ್ನು ಹಾಳು ಮಾಡಲು ಕೈದಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೆರಾರಾ ತಿಳಿಸಿದ್ದಾರೆ.

1978ರಿಂದ ಮರಣದಂಡನೆ ಶಿಕ್ಷೆ ರದ್ದುಗೊಳಿಸಿದ್ದ ಶ್ರೀಲಂಕಾ ಕೇವಲ ಜೀವಿತಾವಧಿವರೆಗೆ ಕಾರಾಗೃಹದಲ್ಲಿ ವಾಸಿಸುವ ಶಿಕ್ಷೆಯನ್ನಷ್ಟೇ ಜಾರಿಗೊಳಿಸಿತ್ತು. ಆದರೆ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಅಪರಾಧಗಳು ಹೆಚ್ಚಾಗುತ್ತಿರುವುದರಿಂದ ಮತ್ತೆ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

click me!