ಕಂಬದಿಂದಾಗಿ ಜೀವ ಉಳೀತು : ಬೆಂಗಳೂರಿಗರು ಪಾರಾದ ಕಥೆ

By Web DeskFirst Published Apr 24, 2019, 7:35 AM IST
Highlights

ಶ್ರೀಲಂಕಾದ ಶಾಂಗ್ರಿಲಾ ಹೋಟೆಲ್‌ನಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ ವೇಳೆ ಬಾಂಬ್‌ ಸ್ಫೋಟದ ಸ್ಥಳದಲ್ಲೇ ಕುಳಿತು ಉಪಾಹಾರ ಸೇವಿಸುತ್ತಿದ್ದರೂ ದೊಡ್ಡ ಪಿಲ್ಲರ್‌ (ಕಂಬ) ಅಡ್ಡವಿದ್ದ ಕಾರಣ ಬೆಂಗಳೂರಿನ ಮೂವರು ನಿವಾಸಿಗಳು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಬೆಂಗಳೂರು :  ಶ್ರೀಲಂಕಾದ ಶಾಂಗ್ರಿಲಾ ಹೋಟೆಲ್‌ನಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ ವೇಳೆ ಬಾಂಬ್‌ ಸ್ಫೋಟದ ಸ್ಥಳದಲ್ಲೇ ಕುಳಿತು ಉಪಾಹಾರ ಸೇವಿಸುತ್ತಿದ್ದರೂ ದೊಡ್ಡ ಪಿಲ್ಲರ್‌ (ಕಂಬ) ಅಡ್ಡವಿದ್ದ ಕಾರಣ ಬೆಂಗಳೂರಿನ ಮೂವರು ನಿವಾಸಿಗಳು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಬಾಂಬ್‌ ಸ್ಫೋಟದ ವೇಳೆ ಪಕ್ಕದ ಟೇಬಲ್‌ಗಳಲ್ಲಿ ಕುಳಿತು ಉಪಾಹಾರ ಸೇವಿಸುತ್ತಿದ್ದ 30-40 ಮಂದಿ ಕಣ್ಣೆದುರೇ ಛಿದ್ರ-ಛಿದ್ರಗೊಂಡು ಮಾಂಸದ ಮುದ್ದೆಗಳಾಗಿದ್ದನ್ನು ಕಣ್ಣಾರೆ ಕಂಡ ಸುರೇಶ್‌ಬಾಬು ಅವರ ಕಣ್ಣಿಗೆ ಗಾಜಿನ ಚೂರು ಚುಚ್ಚಿಕೊಂಡಿತ್ತು. ಅದನ್ನು ಹೊರತುಪಡಿಸಿ ಅದೃಷ್ಟವಶಾತ್‌ ಯಾವುದೇ ಅಪಾಯವಿಲ್ಲದೆ ಜೀವಂತವಾಗಿ ಪಾರಾಗಿ ಬೆಂಗಳೂರಿಗೆ ವಾಪಸಾಗಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮೂಲದ ಸುರೇಶ್‌ಬಾಬು, ವೆಂಕಟೇಶ್‌ ಹಾಗೂ ಮಹೇಶ್‌ ಅವರು ಸದ್ಯ ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿ ವಾಸವಿದ್ದು, ಸ್ಫೋಟದಿಂದ ಪಾರಾಗಿ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ತಮ್ಮ ಆತಂಕದ ಕ್ಷಣಗಳನ್ನು ಬಿಚ್ಚಿಟ್ಟಅವರು ಇದು ನಮಗೆ ಪುನರ್‌ಜನ್ಮ ಎಂದು ಹೇಳಿದರು.

5 ಜನರು ಲಂಕೆಗೆ ಹೋಗಿದ್ದೆವು:

ತಮ್ಮ ಅನುಭವ ಹಂಚಿಕೊಂಡ ಎಸ್‌.ಆರ್‌. ಕನ್‌ಸ್ಟ್ರಕ್ಷನ್‌ನ ಸುರೇಶ್‌ಬಾಬು, ಬಿಸಿನೆಸ್‌ಗೆ ಸಂಬಂಧಿಸಿದ ಸಭೆಗಾಗಿ ಒಟ್ಟು ಐದು ಮಂದಿ ಶ್ರೀಲಂಕಾಗೆ ತೆರಳಿದ್ದೆವು. ಶ್ರೀಲಂಕಾದಲ್ಲಿ ಕ್ರಶರ್‌ ಸ್ಥಾಪನೆ ಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿ ಶಾಂಗ್ರಿಲಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆವು. ಬೆಳಗ್ಗೆ 8 ಗಂಟೆಗೆ ಐದು ಮಂದಿಯಲ್ಲಿ ಮೂರು ಮಂದಿ ಉಪಾಹಾರ ಸೇವಿಸಲು ಹೋಗಿದ್ದೆವು. ಈ ವೇಳೆ 8.55ಕ್ಕೆ ಸರಿಯಾಗಿ ಕಿವಿ ತೂತಾಗುವಂತೆ ದೊಡ್ಡ ಮಟ್ಟದ ಸ್ಫೋಟ ಉಂಟಾಯಿತು. ಅದಾದ ಬಳಿಕ 1 ನಿಮಿಷಕ್ಕೆ ಮತ್ತೆ ಬೃಹತ್‌ ಸ್ಫೋಟ ಸಂಭವಿಸಿತು.

ಈ ವೇಳೆ ನಮ್ಮ ಪಕ್ಕದ ಟೇಬಲ್‌ನಲ್ಲಿ ಕುಳಿತು ತಿಂಡಿ ಸೇವಿಸುತ್ತಿದ್ದ ಇಂಡೋನೇಷ್ಯಾ ಮೂಲದ ಒಬ್ಬ ಮಹಿಳೆ ಹಾಗೂ ಅವರ ಮಕ್ಕಳು ನಮ್ಮ ಕಣ್ಣೆದುರೇ ಮೃತಪಟ್ಟರು. ಅಲ್ಲದೆ ಅವರ ಪಕ್ಕದ ಟೇಬಲ್‌ನಲ್ಲಿದ್ದ ಬಾಂಗ್ಲಾದೇಶ ಮೂಲದ ತಾಯಿ ಹಾಗೂ ಮಕ್ಕಳ ಪೈಕಿ ಮಗ ಸ್ಥಳದಲ್ಲೇ ಮೃತಪಟ್ಟಿದ್ದ. ಸ್ಫೋಟದ ತೀವ್ರತೆಗೆ 30-40 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದೃಷ್ಟವಶಾತ್‌ ನಾವು ಅದೇ ಹಾಲ್‌ನಲ್ಲಿ ಕುಳಿತಿದ್ದರೂ ನಮ್ಮ ಟೇಬಲ್‌ಗೆ ಅಡ್ಡವಾಗಿ ದೊಡ್ಡ ಕಂಬ ಒಂದಿತ್ತು. ಟೇಬಲ್‌ನ ವುಡ್‌ ರ್ಯಾಫ್ಟ್‌ ಸೀಳಿಕೊಂಡು ನಮ್ಮ ಮೇಲೆ ಬಂದು ಬಿತ್ತು. ಈ ವೇಳೆ ಗಾಜುಗಳೆಲ್ಲಾ ಪುಡಿಯಾಗಿದ್ದರಿಂದ ನನ್ನ ಕಣ್ಣಿಗೆ ಗಾಜಿನ ಚೂರೊಂದು ಚುಚ್ಚಿಕೊಂಡಿತು. ಅದನ್ನು ಹೊರತುಪಡಿಸಿ ಮೂರೂ ಮಂದಿಗೆ ಏನೂ ಆಗಿಲ್ಲ ಎಂದು ಹೇಳಿದರು.

ನಾವು ಯಾವುದೇ ಆತಂಕವಿಲ್ಲದೆ ವಾಪಸಾಗಲು ಆಂಧ್ರಪ್ರದೇಶದ ಸರ್ಕಾರ ಹಾಗೂ ಅನಂತಪುರ ಜಿಲ್ಲಾಧಿಕಾರಿ ಸಂಪೂರ್ಣ ನೆರವು ನೀಡಿದರು. ಖುದ್ದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕರೆ ಮಾಡಿ ಮಾತನಾಡಿದ್ದರು ಎಂದರು.

click me!