ನೈಋುತ್ವ ರೈಲ್ವೆಯಿಂದ 2200 ಮಕ್ಕಳ ರಕ್ಷಣೆ

By Web DeskFirst Published May 26, 2019, 10:40 AM IST
Highlights

ನೈಋುತ್ವ ರೈಲ್ವೆಯಿಂದ 2200 ಮಕ್ಕಳ ರಕ್ಷಣೆ| ಬೆಂಗಳೂರು, ಮೈಸೂರು, ಹುಬ್ಬಳ್ಳಿ ವಿಭಾಗದಲ್ಲಿ ನಿರಂತರ ಕಾರ್ಯಾಚರಣೆ| ಎರಡೂವರೆ ವರ್ಷದಲ್ಲಿ 2 ಸಾವಿರಕ್ಕೂ ಹೆಚ್ಚು ಕಾಣೆಯಾದ ಮಕ್ಕಳು ಪತ್ತೆ

ಬೆಂಗಳೂರು[ಮೇ.26]: ನೈಋುತ್ಯ ರೈಲ್ವೆಯ ಮೂರು ವಿಭಾಗಗಳಲ್ಲಿ ‘ನನ್ನೆ ಫರಿಷ್ತೆ’ (ಪುಟಾಣಿ ದೇವದೂತರು) ಹೆಸರಿನ ವಿಶೇಷ ಕಾರ್ಯಾಚರಣೆಯಲ್ಲಿ ಎರಡೂವರೆ ವರ್ಷದಲ್ಲಿ ಒಟ್ಟು 2200ಕ್ಕೂ ಹೆಚ್ಚಿನ ಮಕ್ಕಳನ್ನು ರಕ್ಷಿಸಲಾಗಿದೆ. ಇದರಲ್ಲಿ ಶೇ.50ರಷ್ಟುಮಕ್ಕಳು ಬಿಹಾರ, ಒಡಿಶಾ, ರಾಜಸ್ಥಾನ, ನೇಪಾಳ ಸೇರಿದಂತೆ ಉತ್ತರ ಭಾರತದ ಕಡೆಯಿಂದ ಬಂದವರಾಗಿದ್ದಾರೆ.

ಸಂಗೋಳ್ಳಿ ರಾಯಣ್ಣ ಸಿಟಿ ರೈಲ್ವೆ ನಿಲ್ದಾಣದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ರಕ್ಷಣಾ ಪಡೆಯ ಬೆಂಗಳೂರು ವಿಭಾಗದ ಪ್ರಧಾನ ಮುಖ್ಯ ಆಯುಕ್ತ ಬಿ.ಡಿ.ಕಾಸರ್‌, ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ತಡೆಯುವ ಸಲುವಾಗಿ ಭದ್ರತಾ ಸಿಬ್ಬಂದಿಗೆ ಆಗಾಗ ತರಬೇತಿ ನೀಡಲಾಗುತ್ತದೆ. ಹೆಚ್ಚು ಆಸಕ್ತಿ ತೋರಿಸುವ ಸಿಬ್ಬಂದಿಯನ್ನು ಗುರುತಿಸಿ ಪುರಸ್ಕಾರವನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಪ್ರತಿ 8 ನಿಮಿಷಕ್ಕೆ ಒಂದು ಮಗು ಕಾಣೆಯಾಗುತ್ತಿದೆ. ಬಿಹಾರ, ದೆಹಲಿ, ಒಡಿಶಾ, ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಮಕ್ಕಳು ಬರುತ್ತಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲಿ ಅನಾಥವಾಗಿರುವ ಮಕ್ಕಳನ್ನು ಸಿಬ್ಬಂದಿ ಗಮನಿಸಿ ವಿಚಾರಣೆ ನಡೆಸುತ್ತಾರೆ. ಅವರು ಪೋಷಕರಿಂದ ದೂರವಾಗಿ ಕಂಗಾಲಾಗಿದ್ದರೆ, ತಪ್ಪಿಸಿಕೊಂಡಿದ್ದಲ್ಲಿ ಮನೆಗೆ ಸೇರಿಸಲು ನೆರವಾಗುತ್ತಾರೆ. ಮಕ್ಕಳ ಭದ್ರತೆ ದೃಷ್ಟಿಯಿಂದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ಪುನರ್ವಸತಿ ಕಲ್ಪಿಸಲಾಗುತ್ತದೆ. ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.

ಬೆಂಗಳೂರಿನಲ್ಲಿ ಕಳೆದ ವಾರ ನಾಲ್ಕು ಮಕ್ಕಳನ್ನು ರಕ್ಷಿಸಲಾಗಿದೆ. ಮಕ್ಕಳ ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಹಲವು ರೀತಿಯ ಪ್ರಚಾರ ಕಾರ್ಯಗಳನ್ನು ಇಲಾಖೆ ಕೈಗೊಂಡಿದೆ. ಅಲ್ಲಲ್ಲಿ ಫಲಕಗಳನ್ನು ಅಳವಡಿಸಲಾಗಿದೆ. ಆಗಾಗ ಮೈಕ್‌ನಲ್ಲಿ ಘೋಷಣೆ ಮಾಡುವ ಮುಖೇನ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬೆಂಗಳೂರು ವಿಭಾಗದ ರೈಲ್ವೆ ರಕ್ಷಣಾ ದಳದ ಬೆಂಗಳೂರು ವಿಭಾಗದ ಭದ್ರತಾ ಆಯುಕ್ತೆ ದೇಬಶ್ಮಿತಾ ಚಟ್ಟೊಪಾಧ್ಯಾಯ ಬ್ಯಾನರ್ಜಿ ತಿಳಿಸಿದರು.

ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು, ಕಡಿಮೆ ಅಂಕ ಪಡೆದವರು, ಕೆಲಸ ಹುಡುಕಿಕೊಂಡು ಬರುವವರು, ಶೋಷಣೆ, ದೌರ್ಜನ್ಯಕ್ಕೆ ಒಳಗಾದ 12-18 ವರ್ಷದೊಳಗಿನ ಮಕ್ಕಳನ್ನು ರಕ್ಷಿಸಲಾಗಿದೆ. ರಾತ್ರಿ ವೇಳೆ ಮಕ್ಕಳು ಸಿಕ್ಕರೆ ಅವರನ್ನು ಗಾಂಧಿನಗರದಲ್ಲಿರುವ ಮಕ್ಕಳ ಆಶ್ರಯ ತಾಣದಲ್ಲಿ ಇರಿಸಿ ಊಟ, ವಸತಿ ನೀಡಲಾಗುವುದು. ಬೆಳಿಗ್ಗೆ ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗುವುದು. ಅನುಮಾನಾಸ್ಪದವಾಗಿ ಮಕ್ಕಳು ಕಂಡರೆ ಚೈಲ್ಡ್‌ ಲೈನ್‌ ಸಂಖ್ಯೆ 1098ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಕೆಎಸ್‌ಆರ್‌ ರೈಲು ನಿಲ್ದಾಣ ನಿರ್ದೇಶಕ ಸಂತೋಷ ಹೆಗಡೆ ಹೇಳಿದರು.

ವಲಯದಲ್ಲಿ ಪ್ರತಿ ದಿನ ಸರಾಸರಿ ಐವರನ್ನು ಆರ್‌ಪಿಎಫ್‌ ಸಿಬ್ಬಂದಿ ಪತ್ತೆ ಹಚ್ಚುತ್ತಿದ್ದಾರೆ. ಶೇ.50ರಷ್ಟುಮಂದಿ ಪತ್ತೆಯಾಗಿರುವುದು ಬೆಂಗಳೂರು ವಿಭಾಗದಲ್ಲಿ. ಹೆಣ್ಣು ಮಕ್ಕಳು ಬಾಲ್ಯವಿವಾಹ, ಆರ್ಥಿಕ ಸಂಕಷ್ಟ, ಬಡತನ, ಪ್ರೀತಿ-ಪ್ರೇಮ ವಿಚಾರಕ್ಕೆ ಮನೆ ತೊರೆಯುತ್ತಿದ್ದಾರೆ. ಶೇ.60ರಷ್ಟು12 ವರ್ಷದ ಮಕ್ಕಳಿರುತ್ತಾರೆ ಎಂದು ಚೈಲ್ಡ್‌ ಇಂಡಿಯಾ ಕೋಆರ್ಡಿನೇಟರ್‌ ಮಹೇಶ್‌ ಜಕಾತಿ ತಿಳಿಸಿದರು.

ಇದಕ್ಕೂ ಮುನ್ನ ‘ಕಾಣೆಯಾದ ಅಂತಾರಾಷ್ಟ್ರೀಯ ಮಕ್ಕಳ ದಿನ’ವನ್ನು ಆಚರಿಸಲಾಯಿತು. ಮಕ್ಕಳ ಹಕ್ಕು ಹಾಗೂ ರಕ್ಷಣೆ ಕುರಿತಂತೆ ಅರಿವು ಮೂಡಿಸಲು ಕಿರುಚಿತ್ರ ಪ್ರದರ್ಶಿಸಲಾಯಿತು. ನೆಮ್ಮದಿ ಸಾಂಸ್ಕೃತಿಕ ಕಲಾತಂಡದ ಸದಸ್ಯರು ಮಕ್ಕಳ ಹಕ್ಕುಗಳ ಕುರಿತ ಗಾಯನದ ಮೂಲಕ ಎಲ್ಲರ ಗಮನ ಸೆಳೆದರು. ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಿದರು.

ನೈಋುತ್ಯ ರೈಲ್ವೆಯಲ್ಲಿ ಪತ್ತೆಯಾದ ಮಕ್ಕಳು
 

2018 ಬಾಲಕರು ಬಾಲಕಿಯರು ಒಟ್ಟು
ಬೆಂಗಳೂರು 458 65 532
ಮೈಸೂರು 206 26 286
ಹುಬ್ಬಳ್ಳಿ 407 83 490
ಒಟ್ಟು 1125 174 1299

2019: ಬಾಲಕರು -224, ಬಾಲಕಿಯರು-33 ಒಟ್ಟು- 257

click me!