
ಸಿಂಗಾಪುರ (ಜ.08): ಪ್ರಧಾನಿ ನರೇಂದ್ರ ಮೋದಿಯವರ ಒಂದು ಫೋನ್ ಕರೆಗೆ ಧನಾತ್ಮಕವಾಗಿ ಸ್ಪಂದಿಸಿದ ಸೌದಿ ದೊರೆ, ಯುದ್ಧಪೀಡಿತ ಯಮೆನ್ ಮೇಲಿನ ಬಾಂಬ್ ದಾಳಿ ನಿಲ್ಲಿಸಿ ದ್ದರು. ಅಲ್ಲದೆ, ಅಲ್ಲಿ ಸಿಲುಕಿದ್ದ ಭಾರತೀಯರ ತೆರವಿಗೆ ಸಹಕರಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. 2015ರಲ್ಲಿ ಸೌದಿ ಅರೇಬಿಯಾ, ಯೆಮನ್ ಮೇಲೆ ವೈಮಾನಿಕ ದಾಳಿ ಆರಂಭಿಸಿತ್ತು.
ಇದರಿಂದಾಗಿ ಯೆಮನ್ ನಲ್ಲಿದ್ದ 4000ಕ್ಕೂ ಹೆಚ್ಚು ಭಾರತೀಯರು ಸಂಕಷ್ಟದಲ್ಲಿ ಸಿಕ್ಕಿದ್ದರು. ಇವರನ್ನು ಸುರಕ್ಷಿತವಾಗಿ ತೆರವುಗೊಳಿಸಲು ಭಾರತ ವಿಮಾನ ಕಳುಹಿಸಲು ನಿರ್ಧರಿಸಿತ್ತಾದರೂ, ಬಾಂಬ್ ದಾಳಿ ವೇಳೆ ಭಾರತದ ಏರಿಂಡಿಯಾ ವಿಮಾನ ಸಿಕ್ಕಿಬೀಳುವ ಅಪಾಯ ಇತ್ತು. ಈ ವೇಳೆ ತಮ್ಮ ಮಿತ್ರ, ಸೌದಿ ದೊರೆಗೆ ಕರೆ ಮಾಡಿದ್ದ ಪ್ರಧಾನಿ ಮೋದಿ, ತೆರವಿಗೆ ಅನುವಾಗುವಂತೆ ಬಾಂಬ್ ದಾಳಿ ಸ್ಥಗಿತಕ್ಕೆ ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸೌದಿ ದೊರೆ, ನಿಮ್ಮ ಮಾತನ್ನು ಖಂಡಿತಾ ತಿರಸ್ಕರಿಸಲಾಗದು, ಅಂತೆಯೇ ಬಾಂಬ್ ದಾಳಿಯನ್ನೂ ಪೂರ್ಣ ನಿಲ್ಲಿಸಲಾಗದು. ಆದರೆ ಭಾರತೀಯರ ಸುರಕ್ಷಿತ ತೆರವಿಗಾಗಿ ಪ್ರತಿನಿತ್ಯ ಬೆಳಗ್ಗೆ 9-11 ಗಂಟೆಯವರೆಗೆ ಬಾಂಬ್ ದಾಳಿ ಸ್ಥಗಿತಗೊಳಿಸುತ್ತೇವೆ. ಆ ವೇಳೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿ ಎಂದು ಸಲಹೆ ನೀಡಿದ್ದರು.
ಅದರಂತೆ 2015ರ ಏ.1ರಿಂದ 11 ದಿನಗಳ ಕಾಲ ಏಡೆನ್‌ನಿಂದ 4000ಕ್ಕೂ ಹೆಚ್ಚು ಭಾರತೀಯರು ಮತ್ತು ನೆರೆಹೊರೆಯ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ತವರಿಗೆ ಕರೆತರಲಾಗಿತ್ತು. ಭಾನುವಾರ ಇಲ್ಲಿ ಆಸಿಯಾನ್ ಪ್ರವಾಸಿ ಭಾರತೀಯರ ದಿನಾಚರಣೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಮಾಹಿತಿ ಹೊರಗೆಡವಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.