
- ವೆಂ ಸುನೀಲ್‌ಕುಮಾರ್
ಬೆಂಗಳೂರು(ಡಿ.7): ನಗರದಲ್ಲಿರುವ ಟೆಲಿಕಾಂ ಗೋಪುರಗಳನ್ನು (ಮೊಬೈಲ್ ಟವರ್) ತೆರಿಗೆ ವ್ಯಾಪ್ತಿಗೆ ತರಲು ಮುಂದಾಗಿರುವ ಬಿಬಿಎಂಪಿ, ಪ್ರಾಯೋಗಿಕವಾಗಿ ನಗರದಲ್ಲಿರುವ ಟೆಲಿಕಾಂ ಗೋಪುರಗಳ ಸರ್ವೇ ಕಾರ್ಯಕ್ಕೆ ಸಜ್ಜಾಗಿದೆ. ಇದರೊಂದಿಗೆ ನಗರದಲ್ಲಿನ ಗೋಪುರಗಳಿಗೆ ಪರವಾನಗಿ ನೀಡಲು ಬೇಕಾದ ನಿಯಮಾವಳಿಗಳ ರಚನೆಗೆ ಸಿದ್ಧತೆ ನಡೆಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆದಾಯ ಮೂಲಗಳನ್ನು ಪತ್ತೆಹಚ್ಚಿ ಸಂಪನ್ಮೂಲ ಕ್ರೋಡೀಕರಿಸಲು ಮುಂದಾಗಿರುವ ಬಿಬಿಎಂಪಿ, ಜಾಹೀರಾತು ಫಲಕಗಳು, ವಾಣಿಜ್ಯ ಪರವಾನಗಿ ಸೇರಿ ಒಂದಷ್ಟು ತೆರಿಗೆ ಮೂಲಗಳನ್ನು ಗುರುತಿಸಿ ಆದಾಯ ಸಂಗ್ರಹ ಮಾಡಲಾರಂಭಿಸಿದೆ. ಇದೀಗ ನಗರದಲ್ಲಿರುವ ಮೊಬೈಲ್ ಟವರ್‌ಗಳನ್ನು ತೆರಿಗೆ ವ್ಯಾಪ್ತಿಗೆ ತರುತ್ತಿದೆ.
ತೆರಿಗೆ ವ್ಯಾಪ್ತಿಗೆ ತರುವ ಮುನ್ನ ನಗರದಲ್ಲಿರುವ ಟೆಲಿಕಾಂ ಗೋಪುರಗಳ ನಿಖರ ಮಾಹಿತಿ ಪಡೆಯಲು ಸರ್ವೇ ನಡೆಸಲು ಪಾಲಿಕೆ ನಿರ್ಧರಿಸಿದೆ. ಅದರಂತೆ ಎಲ್ಲ ಎಂಟು ವಲಯಗಳ ಜಂಟಿ ಆಯುಕ್ತರಿಗೆ ಆಯಾ ವಲಯಗಳಲ್ಲಿ ಎಷ್ಟು ಗೋಪುರಗಳಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದು, ಗೋಪುರಗಳನ್ನು ಅಳವಡಿಸಿರುವ ಮಾಲೀಕರಿಂದ ಪಡೆಯಬೇಕಾದ ಶುಲ್ಕ ಮೊತ್ತದ ಮಾಹಿತಿ ಕಲೆ ಹಾಕುತ್ತಿದೆ. ಪಾಲಿಕೆಗೆ ಟವರ್‌ಗಳಿಂದ ಬಾಕಿ ಇರುವ ತೆರಿಗೆ ಹಾಗೂ ತೆರಿಗೆ ಸಂಗ್ರಹಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗಳು ನಿರ್ಧರಿಸಲಿವೆ.
ಬಿಬಿಎಂಪಿಯಲ್ಲಿ ಆದಾಯ ಸಂಗ್ರಹಕ್ಕೆ ಸಂಬಂಸಿದ ಲೆಕ್ಕಪರಿಶೋಧನಾ ವರದಿಯಲ್ಲಿ 2010-11ನೇ ಸಾಲಿನಿಂದಲೂ ಮೊಬೈಲ್ ಟವರ್‌ಗಳಿಂದ ಆದಾಯ ಸಂಗ್ರಹಿಸಿಲ್ಲ ಎಂಬ ಬಗ್ಗೆ ಉಲ್ಲೇಖಿಸಲಾಗಿದೆ. ಜತೆಗೆ ಪಾಲಿಕೆಗೆ ಟೆಲಿಕಾಂ ಗೋಪುರಗಳಿಂದಲೇ ವಾರ್ಷಿಕ 13ರಿಂದ 16 ಕೋಟಿ ಬಾಕಿ ಬರಬೇಕಿದೆ ಎಂದು ತಿಳಿಸಲಾಗಿದೆ. 2008ರಿಂದ ಜಾರಿಯಾಗಿರುವ ಎಸ್‌ಎಎಸ್ ಪದ್ಧತಿಯ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಡಿ ಪ್ರತಿ ಗೋಪುರಕ್ಕೆ ವಾರ್ಷಿಕ 12 ಸಾವಿರ ಶುಲ್ಕ ಸಂಗ್ರಹಕ್ಕೆ ಅವಕಾಶವಿದ್ದು, 2013ರ ನಂತರ ವಾರ್ಷಿಕ 15 ಸಾವಿರ ವಿಸಲು ತಿಳಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಟವರ್‌ಗಳಿಂದ ಶುಲ್ಕ ಸಂಗ್ರಹಿಸಿದರೆ ವಾರ್ಷಿಕ ಕೋಟ್ಯಂತರ ರು. ಆದಾಯ ಬರಲಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ನಿಯಮಾವಳಿ ಕರಡು ಸಿದ್ಧ
ಈವರೆಗೆ ಮೊಬೈಲ್ ಟವರ್ ಅಳವಡಿಕೆಗೆ ಅನುಮತಿ ನೀಡುತ್ತಿದ್ದ ಕೇಂದ್ರ ಸರ್ಕಾರ, ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಸ್ಥಳೀಯ ಸಂಸ್ಥೆಗಳು ಪರವಾನಗಿ ನೀಡಲು ಬೇಕಾದ ನಿಯಮಾವಳಿಗಳನ್ನು ರೂಪಿಸುವಂತೆ ಸೂಚನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಟವರ್‌ಗಳಿಗೆ ಪರವಾನಗಿ ನೀಡುವ ನಿಯಮಾವಳಿಗಳ ಕರಡು ಪ್ರತಿ ಸಿದ್ಧಪಡಿಸಿದ್ದು, ಆಕ್ಷೇಪಣೆ ಸ್ವೀಕರಿಸಲು ಮುಂದಾಗಿದೆ. ಕರಡು ಸದ್ಯ ರಾಜ್ಯ ನಗರಾಭಿವೃದ್ಧಿ ಇಲಾಖೆಯಲ್ಲಿದ್ದು, ಆಕ್ಷೇಪಣೆ ಸ್ವೀಕರಿಸಿದ ನಂತರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸರ್ಕಾರ ಅದಕ್ಕೆ ಅನುಮೋದನೆ ನೀಡಿದರೆ ಜಾರಿಗೆ ಬರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
12 ಸಾವಿರ ಗೋಪುರ!
ನಗರದ ವ್ಯಾಪ್ತಿಯಲ್ಲಿ ಖಾಸಗಿ ಕಟ್ಟಡ, ನಿವೇಶನ ಸೇರಿ ಪಾಲಿಕೆ ಸ್ವತ್ತುಗಲ್ಲಿ ಸುಮಾರು 12 ಸಾವಿಕ್ಕೂ ಹೆಚ್ಚು ಟವರ್‌ಗಳಿರುವುದು 2009ರ ಅಂಕಿ-ಅಂಶದಿಂದ ತಿಳಿದುಬಂದಿದೆ. ಆನಂತರವೂ ಇನ್ನಷ್ಟು ಟವರ್ ಅಳವಡಿಸಿದ್ದು, ಇವುಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹಿಸಿದರೆ ವಾರ್ಷಿಕ 60ರಿಂದ 70 ಕೋಟಿ ಆದಾಯ ಬರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಡೆಯಾಜ್ಞೆ ನೆಪ
ಟೆಲಿಕಾಂ ಗೋಪುರಗಳಿಂದ ಶುಲ್ಕ ಸಂಗ್ರಹದಲ್ಲಿ ಪಾಲಿಕೆಯ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಒಂದೆರಡು ಖಾಸಗಿ ಪ್ರಕರಣಗಳಲ್ಲಿನ ತಡೆಯಾಜ್ಞೆಯನ್ನೇ ನೆಪವಾಗಿಸಿಕೊಂಡು ಸಾವಿರಾರು ಗೋಪುರಗಳಿಂದ ತೆರಿಗೆ ಸಂಗ್ರಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಕಾರಿಗಳೊಂದಿಗೆ ಸಭೆ ನಡೆಸಿರುವ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರು, ತಡೆಯಾಜ್ಞೆ ಇರುವ ಗೋಪುರಗಳನ್ನು ಹೊರತುಪಡಿಸಿ ಉಳಿದ ಗೋಪುರಗಳಿಂದ ಶುಲ್ಕ ಸಂಗ್ರಹಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಕಾರಿಗಳಿಗೆ ಸೂಚನೆ ನೀಡಿದ್ದಾರೆ.
(ಕನ್ನಡ ಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.