ಫಿಲ್ಮ್ ಚಾನ್ಸ್ ಕೊಡಿಸಿ ಎಂದು ಕನ್ನಡದ ಸಿನಿಮಾ ಛಾಯಾಗ್ರಾಹಕರಿಗೆ ಪತ್ರ ಬರೆದಿದ್ದ ಜಯಾ ತಾಯಿ

Published : Dec 06, 2016, 06:33 PM ISTUpdated : Apr 11, 2018, 01:07 PM IST
ಫಿಲ್ಮ್ ಚಾನ್ಸ್ ಕೊಡಿಸಿ ಎಂದು ಕನ್ನಡದ ಸಿನಿಮಾ ಛಾಯಾಗ್ರಾಹಕರಿಗೆ ಪತ್ರ ಬರೆದಿದ್ದ ಜಯಾ ತಾಯಿ

ಸಾರಾಂಶ

ಸಾಮಾನ್ಯವಾಗಿ ಜಯಲಲಿತಾ ಅವರು ಗಂಭೀರ ವದನರು. ನಗು ಕಡಿಮೆ. ಅಂತೆಯೇ ಅವರು ತಮ್ಮ ಬಾಲ್ಯದಲ್ಲೂ ಮಿತಭಾಷಿಯಾಗಿದ್ದರು, ಒಂಟಿಯಾಗಿರಲು ಇಷ್ಟಪಡುತ್ತಿದ್ದರು

ಬೆಂಗಳೂರು(ಡಿ.7):‘‘ನನ್ನ ಮಗಳಿಗೆ ಡಾನ್ಸ್ ಚೆನ್ನಾಗಿ ಗೊತ್ತು. ಅವಳನ್ನು ಪ್ರೋತ್ಸಾಹಿಸಿ. ಸಿನಿಮಾಗಳಲ್ಲಿ ಅವಕಾಶ ಕೊಡಿಸಿ,’’ ಹೀಗೆ ಜಯಲಲಿತಾ ಅವರ ತಾಯಿ ಸಂಧ್ಯಾ ಪತ್ರ ಬರೆದಿದ್ದಿದ್ದು ನಮ್ಮದೇ ಚಿಕ್ಕಬಳ್ಳಾಪುರದ ಹಿರಿಯ ಚಲನಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ್‌ರಿಗೆ ಅವರಿಗೆ.

ಹೌದು, ಜಯಲಲಿತಾ ಅವರು ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಮತ್ತು ಚಿತ್ರರಂಗ ಪ್ರವೇಶಿಸಿ ಉನ್ನತ ಸ್ಥಿತಿ ತಲುಪುವವರೆಗೆ ಅವರ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದ ಚಿಕ್ಕಬಳ್ಳಾಪುರದ ಭವಾನಿ ಲಕ್ಷ್ಮೀ ನಾರಾಯಣ್ ಅವರು, ಜಯಲಲಿತಾ ಅವರ ಕುರಿತು ತಾವು ಕಂಡದ್ದನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಜಯಲಲಿತಾ ಅವರು ಗಂಭೀರ ವದನರು. ನಗು ಕಡಿಮೆ. ಅಂತೆಯೇ ಅವರು ತಮ್ಮ ಬಾಲ್ಯದಲ್ಲೂ ಮಿತಭಾಷಿಯಾಗಿದ್ದರು, ಒಂಟಿಯಾಗಿರಲು ಇಷ್ಟಪಡುತ್ತಿದ್ದರು ಎನ್ನುತ್ತಾರೆ ಭವಾನಿ ಲಕ್ಷ್ಮೀ ನಾರಾಯಣ್. ಚೆನ್ನೈಗೆ ಹೋದಾಗಲೆಲ್ಲ ಜಯಲಲಿತಾರ ಟಿ.ನಗರದ ಮನೆಗೆ ಹೋಗುತ್ತಿದ್ದ ಲಕ್ಷ್ಮೀನಾರಾಯಣ್ ಆಗಷ್ಟೇ ಚಿತ್ರ ತಾರೆಯಾಗಿ ಅರಳುತ್ತಿದ್ದ ಜಯಲಲಿತಾರ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದರು. ಭವಾನಿಯವರಿಗಾಗಿಯೇ ಜಯಲಲಿತಾ ಮನೆಯಲ್ಲೇ ಮೇಕಪ್ ಮಾಡಿಕೊಂಡು ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಿದ್ದರು. ಜಯಾ ತಾಯಿ ಸಂಧ್ಯಾ ಇವನ್ನೆಲ್ಲ ಅರೇಂಜ್ ಮಾಡುತ್ತಿದ್ದರು ಎನ್ನುತ್ತಾರೆ ಭವಾನಿ.

ಜಯಲಲಿತಾ ಮೊಟ್ಟ ಮೊದಲ ಬಾರಿಗೆ ನಾಯಕ ನಟಿಯಾಗಿ ಬಣ್ಣ ಹಚ್ಚಿದ್ದು ‘ಚಿನ್ನದ ಗೊಂಬೆ’ ಚಿತ್ರದಲ್ಲಿ. ಮೊದಲ ಚಿತ್ರದ ಶೂಟಿಂಗ್‌ನಲ್ಲೇ ಜಯಾ ಚಿತ್ರಗಳನ್ನು ಭವಾನಿ ತೆಗೆದಿದ್ದರು. ಬಳಿಕ ‘ಮಾವನ ಮಗಳು’ ‘ನನ್ನ ಕರ್ತವ್ಯ’ ಹೀಗೆ ಕೇವಲ ನಾಲ್ಕೈದು ಕನ್ನಡ ಚಿತ್ರಗಳಲ್ಲಷ್ಟೇ ನಟಿಸಿದ್ದರು. ಬಳಿಕ ಮದ್ರಾಸ್(ಚೆನ್ನೈ) ನತ್ತ ಮುಖ ಮಾಡಿದ್ದ ಜಯಲಲಿತಾ ಅಲ್ಲೇ ನೆಲೆಯೂರಿಬಿಟ್ಟರು. ಆದರೂ ಜಯಾ ತಾಯಿಯೊಂದಿಗೆ ಭವಾನಿ ಸದಾ ಸಂಪರ್ಕ ಹೊಂದಿದ್ದರು. ಐದಾರು ಬಾರಿ ಜಯಾ ಮನೆಗೆ ಹೋಗಿ ಅಲ್ಲಿ ಪೋಟೋಶೂಟ್ ಮಾಡಿದ್ದರು.

ಮೃದುಭಾಷಿ

‘‘ಜಯಲಲಿತಾ ಬಾಲ್ಯದಿಂದಲೂ ಜಯಾ ಹೆಚ್ಚು ಮಾತನಾಡುತ್ತಿರಲಿಲ್ಲ. ಮಾತು ತುಂಬಾ ಕಡಿಮೆ. ನಾಚಿಕೆ ಸ್ವಭಾವ. ಎಲ್ಲರೊಂದಿಗೆ ಹೆಚ್ಚು ಬೆರೆಯುತ್ತಲೂ ಇರಲಿಲ್ಲ. ಅವರು ಏಕಾಂತವನ್ನು ಹೆಚ್ಚು ಇಷ್ಟಪಡುತ್ತಿದ್ದರು ಅನ್ನಿಸುತ್ತದೆ. ಚೆನೈಗೆ ಅವರ ಮನೆಗೆ ಫೋಟೋ ತೆಗೆಯಲು ಹೋದಾಗಲೂ ಅಷ್ಟೇ. ಸಂಧ್ಯಾರೊಂದಿಗೆ ಮಾತನಾಡುವಾಗ ಮುಂದೆ ಒಂದಿಷ್ಟು ಹೊತ್ತು ಕುಳಿತುಕೊಂಡಿರುತ್ತಿದ್ದ ಜಯಲಲಿತಾ ಮತ್ತೆ ಎದ್ದು ಹೋಗುತ್ತಿದ್ದರು. ಅವರಿಗೆ ಕನ್ನಡವೂ ನಿರರ್ಗಳವಾಗಿ ಮಾತನಾಡಲು ಬರುತ್ತಿರಲಿಲ್ಲ. ಸಂಧ್ಯಾ ಮಾತ್ರ ಜಯಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಆಗಲೇ ಇಟ್ಟುಕೊಂಡಿದ್ದರು. ‘ಜಯಾ ಉತ್ತಮ ಡಾನ್ಸರ್. ಆಕೆಯನ್ನು ಎನ್‌ಕರೇಜ್ ಮಾಡಿ. ಸಿನೆಮಾಗಳಲ್ಲಿ ಛಾನ್ಸ್ ಕೊಡಿಸಿ,’ ಎನ್ನುತ್ತಿದ್ದರು,’’.

‘‘ಜಯಾರದ್ದು ಮೊದಲಿನಿಂದಲೂ ಫೊಟೋಜೆನಿಕ್ ಫೇಸ್. ಚಿನ್ನದ ಗೊಂಬೆ ಸಿನೆಮಾ ವೇಳೆಯೇ ಅವರ ೆಟೋ ಶೂಟ್ ಮಾಡಿದಾಗ ಈಕೆ ಹೆಸರಾಂತ ನಟಿಯಾಗುವ ಎಲ್ಲ ಸುಳಿವನ್ನೂ ನೀಡಿದ್ದರು. ಆಕರ್ಷಕ ಮೈಮಾಟ ಜತೆಗೆ ಗಾಂಭೀರ್ಯತೆ ನಟನಾ ಸಾಮರ್ಥ್ಯಗಳನ್ನು ಅನೇಕರು ಪ್ರಶಂಸಿಸುತ್ತಿದ್ದರು. ತಮಿಳು ಸಿನಿಮಾಗೆ ಹೋದ ಮೇಲೆ ಒಂದು ಬಾರಿ ಕೋಣಂಬಾಕ್ಕಂಗೆ ಹೋಗಿ ಮಾತನಾಡಿದೆ. ಮನೆಗೆ ಫೋಟೋ ತೆಗೆಯಲು ಐದಾರು ಬಾರಿ ಹೋಗಿದ್ದು 50-60 ಪೋಟೋ ತೆಗೆದಿದ್ದೇನೆ. ಅವರ ಮನೆಯಲ್ಲೇ ದೊಡ್ಡದಾದ ಒಂದು ಮೇಕಪ್ ರೂಂ ಇತ್ತು. ಬಹುಶ: ಯಾವೊಬ್ಬ ನಟ ನಟಿಯರೂ ಆ ಕಾಲದಲ್ಲಿ ಮನೆಯಲ್ಲೇ ಅಷ್ಟು ದೊಡ್ಡ ಮೇಕಪ್ ರೂಂ ಹೊಂದಿರಲಾರರು. ಮನೆಯಲ್ಲಿ ಜಯಾಗೆ ಮುಕ್ತ ವಾತಾವರಣವಿತ್ತು. ಫೋಟೋ ತೆಗೆಯಲು ಹೋದಾಗಲೆಲ್ಲ ಹತ್ತಕ್ಕೂ ಹೆಚ್ಚು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದೆ. ಕನ್ನಡ ಸಿನೆಮಾ ಶೂಟಿಂಗ್ ವೇಳೆ ಎರಡು ಬಾರಿ ನಂದಿ ಬೆಟ್ಟಕ್ಕೂ ಬಂದ ನೆನಪಿದೆ. ಬಳಿಕ ಮದ್ರಾಸ್‌ನಲ್ಲೇ ಹೆಚ್ಚು ಭೇಟಿ ಮಾಡುತ್ತಿದ್ದೆ. ಮದ್ರಾಸ್‌ಗೆ ಹೋದಾಗಲೆಲ್ಲ ಅವರ ಮನೆಗೆ ಹೋಗುತ್ತಿದ್ದೆ. ತಮಿಳು ಸಿನೆಮಾದಲ್ಲಿ ಹೆಚ್ಚು ಹೆಚ್ಚು ನಟಿಸಲು ಆರಂಭಿಸಿದ ಬಳಿಕ ಅವರ ಸಂಪರ್ಕ ಕಡಿಮೆ ಆಯಿತು. ಸಿಎಂ ಆದ ಮೇಲೆ ಅವರನ್ನು ಭೇಟಿಯಾಗಬೇಕೆಂಬ ಹಂಬಲವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಚೆನೈಗೆ ಹೋದಾಗ ಮೂರ್ನಾಲ್ಕು ಬಾರಿ ಅವರು ಚೆನ್ನೈನಿಂದ ಹೊರಗಿದ್ದರು. ಬಹುಶ: ಕನ್ನಡ ಸಿನೆಮಾ ರಂಗದಲ್ಲಿ ಅವರು ಉಳಿದು ಹೋಗಿದ್ದರೆ ಇಂದು ಅವರು ತಮಿಳುನಾಡಿನ ಅಮ್ಮ ಆಗುತ್ತಿರಲಿಲ್ಲ,’’ ಎಂದು ನೆನೆಯುತ್ತಾರೆ ಭವಾನಿ ಲಕ್ಷ್ಮೀನಾರಾಯಣ್

(ಕನ್ನಡಪ್ರಭ ವಾರ್ತೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮ್ಮ ಅಥ್ವಾ ಸತ್ತವರ ಬ್ಯಾಂಕ್​ ಖಾತೆ ನಿಷ್ಕ್ರಿಯವಾಗಿದ್ರೆ ಚಿಂತೆ ಬೇಡ: ಕೂಡಲೇ ಹೀಗೆ ಮಾಡಿ ಹಣ ಪಡೆಯಿರಿ
ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಗುಡ್‌ನ್ಯೂಸ್‌ ನೀಡಿದ ಇಲಾಖೆ, ಋತುಚಕ್ರ ರಜೆಗೆ ಗ್ರೀನ್‌ ಸಿಗ್ನಲ್‌!